ಪ್ರವಾಹದ ಗಾಯದ ಮೇಲೆ ಗೊಬ್ಬರ ಕೊರತೆ ಬರೆ, ಅಳಿದುಳಿದ ಬೆಳೆ ರಕ್ಷಣೆಗೂ ಅನ್ನದಾತನ ಪರದಾಟ

| Updated By: ಆಯೇಷಾ ಬಾನು

Updated on: Aug 01, 2021 | 8:32 AM

ಉತ್ತರಕರ್ನಾಟಕ ಪ್ರವಾಹದ ಅಬ್ಬರಕ್ಕೆ ರೈತರು ಈಗಾಗಲೇ ಕಂಗಾಲಾಗಿ ಹೋಗಿದ್ದಾರೆ. ಹೊಲ-ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಬೆಳೆಗಳು ಕೊಳೆಯುತ್ತಿವೆ. ಆದ್ರೆ ಪ್ರವಾಹಕ್ಕೆ ತುತ್ತಾಗದೆ ಉಳಿದಿರೋ ಬೆಳೆಗಳ ರಕ್ಷಣೆಗಾಗಿ ಅನ್ನದಾತರು ಪರದಾಡ್ತಿದ್ದಾರೆ. ಯಾಕಂದ್ರೆ ಬೆಳೆ ರಕ್ಷಣೆಗೆ ಬೇಕಾದ ಗೊಬ್ಬರದ ದರ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರವಾಹದ ಗಾಯದ ಮೇಲೆ ಗೊಬ್ಬರ ಕೊರತೆ ಬರೆ, ಅಳಿದುಳಿದ ಬೆಳೆ ರಕ್ಷಣೆಗೂ ಅನ್ನದಾತನ ಪರದಾಟ
ಪ್ರವಾಹದ ಗಾಯದ ಮೇಲೆ ಗೊಬ್ಬರ ಕೊರತೆ ಬರೆ
Follow us on

ಹಾವೇರಿ: ಜಿಲ್ಲೆಯಲ್ಲಿ ಕಳೆದ ಎಂಟತ್ತು ದಿನಗಳ ಹಿಂದೆ ನಿರಂತರ ಮಳೆ ಆಗಿತ್ತು. ನಿರಂತರ ಮಳೆಯ ಬೆನ್ನಲ್ಲೇ ನಾಲ್ಕು ನದಿಗಳ ಪ್ರವಾಹದ ನೀರು ರೈತರ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ರೈತರ ಜಮೀನಿನಲ್ಲಿದ್ದ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನೀರಲ್ಲಿ ನಿಂತು ಹಾಳಾಗಿದ್ದವು. ನದಿ ಪಾತ್ರದ ರೈತರ ಜಮೀನುಗಳಲ್ಲಿನ‌ ಬೆಳೆಗಳು ಅಕ್ಷರಶಃ ಜಲಾವೃತ ಆಗಿದ್ದು, ಕೊಳೆತು ಹೋಗಿವೆ. ನದಿ ಪಾತ್ರದಿಂದ ದೂರವಿರೋ ಜಮೀನುಗಳಲ್ಲಿರೋ ಬೆಳೆಗಳು ನಿರಂತರ ಮಳೆಗೆ ಹಾಳಾಗೋ ಸ್ಥಿತಿಯಲ್ಲಿವೆ.

ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿವೆ ಅಂತಾ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ನದಿ ಪಾತ್ರದಿಂದ ಸ್ವಲ್ಪ ದೂರವಿರೋ ಜಮೀನುಗಳಲ್ಲಿನ ಬೆಳೆಗಳು ಅಲ್ಪಸ್ವಲ್ಪ ಉಳಿದಿದ್ರೂ ಅವುಗಳನ್ನ ಉಳಿಸಿಕೊಳ್ಳೋಕೆ ರೈತರಿಗೆ ಯೂರಿಯಾ ಗೊಬ್ಬರ ಅನಿವಾರ್ಯ ಎಂಬಂಥಾ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ರೈತರು ಗೊಬ್ಬರಕ್ಕಾಗಿ ನೂಕು ನುಗ್ಗಲು ಮಾಡೋ ಸ್ಥಿತಿ ನಿರ್ಮಾಣ ಆಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರೋ ಖಾಸಗಿ ಗೊಬ್ಬರದ ಅಂಗಡಿಗಳವರು ಸರಕಾರದ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡ್ತಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬಂದಿದೆ.

ಒಂದೆಡೆ ನದಿಗಳ ಆರ್ಭಟ, ಮತ್ತೊಂದೆಡೆ ನಿರಂತರ‌‌ ಮಳೆಯಿಂದ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ನೆರೆ ಹೊಡೆತಕ್ಕೆ ಸಿಲುಕಿರೋ ಬಹುತೇಕ ಬೆಳೆಗಳು ಅಕ್ಷರಶಃ ಹಾಳಾಗಿದ್ರೆ, ನಿರಂತರ ಮಳೆಗೆ ಸಿಕ್ಕಿರೋ ನದಿ ಪಾತ್ರದಿಂದ ದೂರವಿರೋ ಜಮೀನುಗಳಲ್ಲಿನ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಆದ್ರೆ ಉಳಿದಿರೋ ಬೆಳೆ ರಕ್ಷಣೆ ಮಾಡಿ ಖರ್ಚಾಗಿರೋ ದುಡ್ಡು ಆದ್ರೂ ಬರ್ಲಿ ಅಂತಾ ರೈತರು ಯೂರಿಯಾ ಗೊಬ್ಬರದ ಮೊರೆ ಹೋಗಿದ್ದಾರೆ. ಆದ್ರೆ ಅಲ್ಲೂ ಅನ್ನದಾತನನ್ನು ಸುಲಿಗೆ ಮಾಡೋ ಮೂಲಕ ಬೆಳೆ ನಷ್ಟದ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಕೂಡಲೇ ಕೃಷಿ ಇಲಾಖೆ ಹಾಗೂ ಸರ್ಕಾರ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡೋರ ಮೇಲೆ ಕಠಿಣ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕಿದೆ.

ಇದನ್ನೂ ಓದಿ: ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?

Published On - 8:27 am, Sun, 1 August 21