86th Kannada Sahitya Sammelana: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಭಾಷಣ ಇಲ್ಲಿದೆ

| Updated By: Rakesh Nayak Manchi

Updated on: Jan 06, 2023 | 2:40 PM

ದುಡಿಯುವ ವರ್ಗ ಈ ರಾಜ್ಯ ಕಟ್ಟುತ್ತಿದೆ, ಶ್ರೀಮಂತರು ಅಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಒಟ್ಟು 23 ಕಸುಬುಗಳಿವೆ. ಆ ಕಸುಬುದಾರರಿಗೆ, ರೈತರಿಗೆ ಈ ವೇದಿಕೆ ಮೂಲಕ ಕೋಟಿ ನಮನ ಸಲ್ಲಿಸೋಣ ಎಂದರು.

86th Kannada Sahitya Sammelana: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಭಾಷಣ ಇಲ್ಲಿದೆ
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಬೊಸವರಾಜ ಬೊಮ್ಮಾಯಿ
Follow us on

ಹಾವೇರಿ: ಡಾ.ದೊಡ್ಡರಂಗೇಗೌಡ (Dr.Doddarangegowda) ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (86th Akhila Bharatha Kannada Sahitya Sammelana)ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಉದ್ಘಾಟಿಸಿದರು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಶಿವರಾಂ ಹೆಬ್ಬಾರ್, ವಿ.ಸುನಿಲ್ ಕುಮಾರ್, ಮುರುಗೇಶ್ ನಿರಾಣಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಹಾವೇರಿ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಹಾವೇರಿಯಲ್ಲಿ ಸಮ್ಮೇಳನ ಆಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

ಕನ್ನಡ ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಕನ್ನಡಿಗರ ಬದುಕು ಬಹಳ ಪುರಾತನ ಹಾಗೂ ಶ್ರೇಷ್ಠ ಎಂದು ಅರ್ಥವಾಗುತ್ತದೆ. ಕನ್ನಡ ಸಂಸ್ಕೃತಿ ದೊಡ್ಡ ಚರಿತ್ರೆ ಹೊಂದಿದೆ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮ್ಮೇಳನದ ಮೇಲಿದೆ. ಕನ್ನಡದ ಕಿಚ್ಚು ಹೆಚ್ಚಿಸಬೇಕಿದೆ. ಕನ್ನಡ ಭಾಷೆಯನ್ನು ಇಡೀ ಭಾರತದಲ್ಲಿ ಆಳವಾಗಿ ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.

ಇದನ್ನೂ ಓದಿ: Bomb Threat ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ: ಸ್ಥಳಕ್ಕೆ ಬಾಂಬ್ ಪತ್ತೆ, ಶ್ವಾನ ದಳ ದೌಡು, ಮಕ್ಕಳು ಸುರಕ್ಷಿತ ಸ್ಥಳಕ್ಕೆ

ಡಾ.ದೊಡ್ಡರಂಗೇಗೌಡರು ತಮ್ಮ ಹೆಸರಿನಷ್ಟೇ ದೊಡ್ಡ ಸಾಹಿತಿಗಳು. ಎಲ್ಲ ಕ್ಷೇತ್ರಗಳಲ್ಲೂ ಖ್ಯಾತಿ ಪಡೆದವರಾಗಿದ್ದಾರೆ. ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಅವರಲ್ಲಿ ಎರಡು ಹೆಸರು ಇವೆ. ದೊಡ್ಡದು ಮತ್ತೊಂದು ರಂಗೇಗೌಡ. ಎಲ್ಲ ರಂಗದಲ್ಲಿ ಖ್ಯಾತಿ ಪಡೆದ ಇವರು ದೊಡ್ಡ ಹೃದಯದ ದೊಡ್ಡರಂಗೇಗೌಡರು ಎಂದು ಸಮ್ಮೇಳನದ ಸರ್ವಾಧ್ಯಕ್ಷರನ್ನು ಮುಖ್ಯಮಂತ್ರಿಯವರು ಬಣ್ಣಿಸಿದರು.

ಕನ್ನಡಕ್ಕಾಗಿ ಕೆಲಸ ಮಾಡುವ ಸಮಯ ಇದು: ಸಿಎಂ

ಕನ್ನಡಕ್ಕಾಗಿ ಕೆಲಸ ಮಾಡುವ ಸಮಯ ಇದಾಗಿದೆ. ಭಾಷೆ, ಸಂಸ್ಕೃತಿ ಬೆಳೆಯಲು ನಡೆದು ಬಂದು ದಾರಿ ಸಿಂಹಾವಲೋಕನ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಪಾತ್ರ ಏನಿದೆ ಅಂತಾ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಕನ್ನಡ ಅತ್ಯಂತ ಸಿರಿವಂತ ಭಾಷೆಯಾಗಿದೆ. ಕನ್ನಡ ಭಾಷೆ ಯಾವುದರಲ್ಲಿಯೂ ಬಡವಾಗಿಲ್ಲ. ಸೂರ್ಯ ಚಂದ್ರ ಇರುವವರೆಗೂ ಕನ್ನಡ ಬೆಳೆಯುತ್ತದೆ. ಕನ್ನಡಕ್ಕೆ ಆಪತ್ತು ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ ಕನ್ನಡಕ್ಕೆ ಆಪತ್ತು ತರುವ ಭಾವನೆ ಜಗತ್ತಿನಲ್ಲಿ ಹುಟ್ಟಿಲ್ಲ. ಹುಟ್ಟುವುದೂ ಇಲ್ಲ. ಆದ್ದರಿಂದ ಆ ಆತಂಕದಿಂದ ಎಲ್ಲರೂ ಹೊರಗೆ ಬರಬೇಕು ಎಂದರು.

ಇದನ್ನೂ ಓದಿ: Kannada Sahitya Sammelana 2023: 20 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಮರೆಯಾದ ಸ್ವಚ್ಚತೆ

ಕನ್ನಡದ ಭಾಷೆಯಲ್ಲಿ ವಿವಿಧತೆಯಲ್ಲಿ ಏಕತೆ

ಕನ್ನಡವನ್ನು ವಚನ ಸಾಹಿತ್ಯ, ದಾಸ ಸಾಹಿತ್ಯ ಶ್ರೀಮಂತಗೊಳಿಸಿದೆ. ಕನ್ನಡದ ಅಂತಃಸತ್ವ ಹೆಚ್ಚಿಸಿವೆ. ಕನ್ನಡದ ಭಾಷೆಯಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ವಿವಿಧ ಆಯಾಮಗಳಲ್ಲಿಯೂ ಕನ್ನಡ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹರಿದು ಹೋದ ಹೃದಯಗಳನ್ನು ಒಂದಾಗಿಸಿದ್ದು ಕನ್ನಡ. ಏಕೀಕರಣದ ಬಳಿಕ ನಮ್ಮದೇಯಾದ ರಾಜ್ಯ ಜೋಡಣೆಯಾಗಿದೆ ಎಂದರು.

ಕರ್ನಾಟಕ ಏಕೀಕರಣ ಹೋರಾಟ ನಿರಂತರವಾಗಿ ನಡೆದಿತ್ತು. ಮೊದಲು ಉತ್ತರ ಕರ್ನಾಟಕದವರು ಏಕೀಕರಣ ಹೋರಾಟ ಆರಂಭಿಸಿದ್ದರು. ಸ್ವಲ್ಪ ತಡವಾದರೂ ಸರಿ ಕುವೆಂಪು ಅಂಥವರೂ ಹೋರಾಟಕ್ಕೆ ಬಂದರು. ಆಗ ಕನ್ನಡ ನಾಡು ಒಂದಾಗಿದೆ. ಮೊದಲು ಮೈಸೂರು ರಾಜ್ಯ ಇತ್ತು. ದೇವರಾಜ್ ಅರಸರು ಕರ್ನಾಟಕ ಅಂತಾ ಮಾಡಿದವರು. ಅವರನ್ನು ಇಂದು ನೆನಪಿಸಬೇಕಿದೆ. ಕನ್ನಡಿಗರಿಗೆ ಕರ್ನಾಟಕ ಮಾಡಿದವರು ದೇವರಾಜ್ ಅರಸು ಎಂದು ಹೇಳಿದರು.

ದುಡಿಯುವ ವರ್ಗ ಈ ರಾಜ್ಯ ಕಟ್ಟುತ್ತಿದೆ ಎಂದ ಸಿಎಂ ಬೊಮ್ಮಾಯಿ

ದುಡಿಯುವ ವರ್ಗ ಈ ರಾಜ್ಯ ಕಟ್ಟುತ್ತಿದೆ, ಶ್ರೀಮಂತರು ಅಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಒಟ್ಟು 23 ಕಸುಬುಗಳಿವೆ. ಆ ಕಸುಬುದಾರರಿಗೆ, ರೈತರಿಗೆ ಈ ವೇದಿಕೆ ಮೂಲಕ ಕೋಟಿ ನಮನ ಸಲ್ಲಿಸೋಣ. ಮುಂದಿನ ಒಂದು ದಶಕ ನೀರಾವರಿ ದಶಕ ಆಗಲಿದೆ. ನೀರಾವರಿ ದಶಕ ಅಂತಾ ಘೋಷಣೆ ಮಾಡುವೆ. ಸರ್ವಕಾಲಕ್ಕೂ ಸತ್ಯ ಹೇಳಿದಾತ ಸರ್ವಜ್ಞ. ಸರ್ವಜ್ಞನ ಮಾತುಗಳು ಇಂದಿಗೂ ದಾರಿದೀಪವಾಗಿದೆ. ಕನಕದಾಸರು, ಸಂತ ಶಿಶುನಾಳ ಷರೀಫ, ಪಂಚಾಕ್ಷರಿ ಗವಾಯಿಗಳು, ಹಾನಗಲ್ ಕುಮಾರಸ್ವಾಮೀಜಿ, ಗಳಗನಾಥರು, ವಿ.ಕೆ. ಗೋಕಾಕರು ನಮ್ಮ ಹಾವೇರಿ ಜಿಲ್ಲೆಯವರು ಎಂದರು.

ಇದನ್ನೂ ಓದಿ: Mysore Bangalore expressway: ಎಕ್ಸ್​ಪ್ರೆಸ್​ ಹೈವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗಲ್ಲ ಪ್ರವೇಶ: ಪ್ರತಾಪ್ ಸಿಂಹ

ಕನ್ನಡಕ್ಕೆ ಕಾನೂನು ತರುವ ಕಾರ್ಯ ನಮ್ಮ ಸರಕಾರದ್ದು: ಸಿಎಂ

ಕನ್ನಡಕ್ಕೆ ಹಲವಾರು ಸವಾಲುಗಳಿವೆ. ಕನ್ನಡದ ಸುತ್ತ ನಡೆಯುತ್ತಿರುವ ವಿಚಾರ ಗಮನಿಸಿದ್ದೇವೆ. ಕನ್ನಡಕ್ಕೆ ಕಾನೂನು ತರುವ ಕಾರ್ಯ ನಮ್ಮ ಸರಕಾರದ್ದಾಗಿದೆ. ಸಮಗ್ರವಾದ ಕಾನೂನು ಮಾಡಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆದೇಶ ಆಗಿದೆ. ಅದರಂತೆ ಕಾನೂನು ಆಯೋಗ ಕೆಲಸ ಮಾಡುತ್ತಿದೆ. ವ್ಯಾಪಾಕವಾಗಿ ಇನ್ನಷ್ಟು ಚರ್ಚೆ ಆಗಬೇಕಿದೆ. ಆಗ ನಾವು ಕನ್ನಡಕ್ಕೆ ಕಾನೂನಿನ ಸ್ವರೂಪ ಕೊಡುತ್ತೇವೆ ಎಂದರು.

ಕೈಗಾರಿಕಾ ಪಾಲಿಸಿ ಸಹ ಮಾಡಿದ್ದೇವೆ. ಶೇ.80ರಷ್ಟು ಪ್ರಾತಿನಿಧ್ಯ ಕೊಡುವ ತೀರ್ಮಾನ ಮಾಡಿದ್ದೇವೆ. ಗಡಿನಾಡ ಅಭಿವೃದ್ಧಿ, ರಕ್ಷಣೆಯ ಹೊಣೆಗಾರಿಕೆ ನಮಗಿದೆ. ಗಡಿ ಪ್ರಾಧಿಕಾರಕ್ಕೆ ಅನುದಾನ ಕೊಟ್ಟಿದ್ದೇವೆ. ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದ್ದೇವೆ. ಗಡಿಭಾಗದ ಶಾಲೆ ಉಳಿಸಲು ವಿಶೇಷ ಅನುದಾನ ಕೊಡುತ್ತೇನೆ. ಗಡಿ ಆಚೆಗಿನ ಕನ್ನಡಿಗರನ್ನು ಉಳಿಸುವ ಕಾರ್ಯ ಮಾಡಬೇಕಿದೆ, ಆ ಕೆಲಸವನ್ನೂ ನಮ್ಮ ಸರ್ಕಾರ ಮಾಡುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:40 pm, Fri, 6 January 23