86th Kannada Sahitya Sammelana: ಹಾವೇರಿಯಲ್ಲಿ ಕಾವೇರಿದ ಕನ್ನಡ ಜಾತ್ರೆ, ಮೊದಲ ದಿನ ಏನೆಲ್ಲಾ ಆಯ್ತು? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾವಿರಾರು ಸಾಹಿತ್ಯಾಭಿಮಾನಿಗಳು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಎಂದು ಜೈಕಾರ ಹಾಕುವ ಮೂಕಲ ಕನ್ನಡದ ಕಂಪನ್ನು ಪಸರಿಸಿದರು.
ಹಾವೇರಿ: ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಇಂದು(ಜ.6) ಆರಂಭಗೊಂಡ ಕನ್ನಡ ಸಾಹಿತ್ಯ ಸಮ್ಮೇಳನ 7, 8ರ ವರೆಗೆ ಇರುತ್ತದೆ. ಸಮ್ಮೇಳನಾಧ್ಯಕ್ಷ ಭವ್ಯ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಪ್ರೊ. ದೊಡ್ಡರಂಗೇಗೌಡ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ಅವಹಿಸಿದ್ದು, ಯಾಲಕ್ಕಿ ಕಂಪಿನ ನಗರಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಾವಿರಾರು ಸಾಹಿತ್ಯಾಭಿಮಾನಿಗಳು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಎಂದು ಜೈಕಾರ ಹಾಕುವ ಮೂಕಲ ಕನ್ನಡದ ಕಂಪನ್ನು ಪಸರಿಸಿದರು. ಇವತ್ತಿನ ಸಮ್ಮೇಳನದ ಕಾರ್ಯಕ್ರಮ ಹೇಗಿತ್ತು ಅಂತೀರಾ ಈ ಸ್ಟೋರಿ ಓದಿ.
ಕನ್ನಡ ಪರ ಹೋರಾಟಗಾರರು ಉಗ್ರವಾದಿಗಳಲ್ಲ: ಪ್ರೊ. ದೊಡ್ಡರಂಗೇಗೌಡ
ಬೆಳಗ್ಗೆ 7 ಗಂಟೆಗೆ ರಾಷ್ಟ್ರದ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಕನ್ನಡ ಧ್ವಜಾರೋಹಣವನ್ನ ಜಿಲ್ಲಾ ಉಸ್ತವಾರಿ ಸಚಿವ ಶಿವರಾಮ್ ಹೆಬ್ಬಾರ. ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ನೆರವೇರಿಸಿದರು. ನಂತರ ಪುರಸಿದ್ದೇಶ್ವರ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷ ಪ್ರೋ. ದೊಡ್ಡರಂಗೇಗೌಡ ಸಾರೋಟ್ದಲ್ಲಿ ಸುಮಾರು ಆರು ಕೀಲೋ ಮೀಟರ್ ಮೆರವಣಿಗೆ ಮಾಡಿದರು. ಭವ್ಯ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಕರಡಿಕುಣಿತ, ವೀರಗ್ಯಾಸೆ, ಸುಮಾರು 80ಕ್ಕೂ ಅಧಿಕ ವಿವಿಧ ಕಲಾತಂಡಗಳು ಮತ್ತಷ್ಟು ಮೆರೆಗು ನೀಡಿದವು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ದೊಡ್ಡರಂಗೇಗೌಡ ಕನ್ನಡಪರ ಹೋರಾಟಗಾರರು ಉಗ್ರವಾದಿಗಳಲ್ಲ. ಕನ್ನಡ ಹೋರಾಟಗಾರನ್ನ ಏಕೆ ಜೈಲಿಗೆ ಹಾಕುತ್ತೀರಾ. ಅವರೇನು ಬೇರೆ ದೇಶದಿಂದ ಬಂದ ಉಗ್ರವಾದಿಗಳಲ್ಲ. ಮೊದಲು ಅವರನ್ನ ಬಿಡುಗಡೆ ಮಾಡಿ, ಅವರ ಮೇಲಿನ ಕೇಸ್ ವಜಾ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು.
ಕನ್ನಡ ಭಾಷೆಗೆ ಶಾಶ್ವತ ಕಾನೂನು: ಸಿಎಂ ಬೊಮ್ಮಾಯಿ
ಸಮ್ಮೇಳನಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ, ಜೊತೆಗೆ 86 ಪುಸ್ತಕಗಳನ್ನು ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡಿ, ಕನಕದಾಸ, ಸರ್ವಜ್ಞ, ಶರೀಫರು ಹುಟ್ಟಿದ ನಾಡು ಇದು. ಗವಾಯಿ ಪಂಚಾಕ್ಷರಿ, ಹಾನಗಲ್ ಕುಮಾರಸ್ವಾಮಿ, ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕ ನಮ್ಮ ಜಿಲ್ಲೆಯವರು. ಕನ್ನಡ ಭಾಷೆಗೆ ಶಾಶ್ವತ ಕಾನೂನು ಸ್ವರೂಪ ನೀಡಿಲು ಸರ್ಕಾರ ಬದ್ದವಾಗಿದೆ.
ಇದನ್ನೂ ಓದಿ: 86th Kannada Sahitya Sammelana: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಭಾಷಣ ಇಲ್ಲಿದೆ
ರಾಜ್ಯದಲ್ಲಿ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಬೇಕು. ಗಡಿನಾಡು ಅಭಿವೃದ್ಧಿ ಮಾಡಲು ಸರ್ಕಾರ ಬದ್ದವಾಗಿದೆ. ಅಲ್ಲದೆ ಕರ್ನಾಟಕದ ಗಡಿ ಹೊರಗಡೆ ಕನ್ನಡಿಗರು ಇದ್ದಾರೆ. ಅವರ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ. ಈ ಸಮ್ಮೇಳನ ಕನ್ನಡಗರ ಭವಿಷ್ಯ ಬರೆಯುವ ಸಮ್ಮೇಳನ. ಕನ್ನಡಿಗರ ಬದುಕು ಕಟ್ಟುವ ಸಮ್ಮೇಳನ ಆಗಲಿ. ನವ ಕರ್ನಾಟಕದಿಂದ ನವಭಾರತ ನಿರ್ಮಾಣವಾಗಬೇಕು ಎಂದರು.
ಸಾಹಿತ್ಯಾಭಿಮಾನಿಗಳಿಗೆ ಭರ್ಜರಿ ಭೋಜನ
ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ವಿವಿಧ ಕಡೆಯಿಂದ ಸಾವಿರಾರು ಸಾಹಿತ್ಯಾಭಿಮಾನಿಗಳು ಆಗಮಿಸಿದ್ದಾರೆ. ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯೆ, ಖಡಕ್ ರೊಟ್ಟಿ, ಚಪಾತಿ, ಹೆಸರುಕಾಳು ಪಲ್ಯೆ, ಚಟ್ನಿ ಹಾಗೂ ಅನ್ನ ಸಂಬಾರು ನೀಡುವ ಮೂಲಕ ಭರ್ಜರಿ ಊಟವನ್ನ ಸವಿದರು. 40ಕ್ಕೂ ಅಧಿಕ ಅಡುಗೆ ನೀಡುವ ಕೌಂಟರ್ ಮಾಡಿದ್ದು, ಯಾವುದೇ ತೊಂದರೆ ಆಗದಂತೆ ಭೂರಿ ಭೋಜನ ನೀಡಿದರು. ಜಿಲ್ಲಾ ಪಂಚಾಯತಿ ಸಿಇಓ ಮಹಮ್ಮದ್ ರೋಷನ್ ಸಾಹಿತ್ಯಾಭಿಮಾನಿಗಳಿಗೆ ಮುಂದೆ ನಿಂತು ಊಟ ನೀಡಿದರು.
ವರದಿ: ಸೂರಜ್ ಉತ್ತೂರೆ ಜೊತೆ ಮೂರ್ತಿ ಪ್ಯಾಟಿ, ಟಿವಿ9, ಹಾವೇರಿ