
ಹಾವೇರಿ, ಡಿಸೆಂಬರ್ 2: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ನಡೆಯುತ್ತಿದ್ದ ಹೋರಾಟ ಇದೀಗ ಮಗ್ಗಲು ಬದಲಿಸಿದೆ. ರೈತರ ಪ್ರತಿಭಟನೆ (Farmers Protest) ತೀವ್ರಗೊಳ್ಳುತ್ತಿರುವುದರ ಮಧ್ಯೆಯೇ ಸರ್ಕಾರ ಒಬ್ಬ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶಿಸಿತ್ತು. ಆದರೆ ಇದೂ ಸಹ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಹಾವೇರಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಾವೇರಿ ಜಿಲ್ಲೆಯಲ್ಲಿ 12 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯಲಾಗಿದೆ. ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶಿಸಿದ್ದಾರೆ. ಹಾಗಾದರೆ ಉಳಿದ ಮೆಕ್ಕೆಜೋಳವನ್ನು ಏನು ಮಾಡುವುದು ಎಂದು ರೈತರು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಹೋಗುವ ವೇಳೆ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈವರೆಗೂ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆ ಕೊಪ್ಪಳ ಮತ್ತು ವಿಜಯನಗರದಲ್ಲಿ ಬಿಜೆಪಿಯಿಂದಲೂ ಪ್ರತಿಭಟನೆ ನಡೆಸಲಾಯಿತು. ಕೊಪ್ಪಳದ ಅಶೋಕ ವೃತ್ತದಲ್ಲಿ ಎತ್ತಿನಬಂಡಿಗಳನ್ನು ತಂದು, ಮೆಕ್ಕೆಜೋಳ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಲಾಯಿತು. ವಿಜಯ ನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ನೇತ್ರತ್ವದಲ್ಲಿ ಹೋರಾಟ ನಡೆಯಿತು.
ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ 17ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಗವಿಮಠದ ಕುಮಾರ ಮಹಾರಾಜ್ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಕೊನೆಗೂ ರೈತರ ಹೋರಾಟಕ್ಕೆ ಗದಗ ಜಿಲ್ಲಾಡಳಿತ ಮಣಿದಿದ್ದು ಖರೀದಿ ಕೇಂದ್ರ ಆರಂಭಿಸಿದೆ. ಸೋಮವಾರ ರಾತ್ರಿ 10ಗಂಟೆ ವೇಳೆಗೆ ಡಿಸಿ ಸಿ.ಎನ್ ಶ್ರೀಧರ್ ರೈತರ ಹೋರಾಟದ ವೇದಿಕೆಗೆ ಆಗಮಿಸಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡುತ್ತಿದ್ದಂತೆ ರೈತರು ಸಂಭ್ರಮಾಚರಣೆ ಮಾಡಿದರು.
ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೆ ಸೋಮವಾರ ಸಭೆ ನಡೆಸಿದ್ದಾರೆ. ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯ ಇಂಡೆಂಟ್ ನೀಡಿ 5ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ತಕ್ಷಣ ಪ್ರಾರಂಭಿಸಲು ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಕಿಚ್ಚು: ಸಿಡಿದೆದ್ದ ಅನ್ನದಾತರು, ರಾಜ್ಯಾದ್ಯಂತ ಪ್ರತಿಭಟನೆಯ ಸುಳಿವು
ಮೆಕ್ಕೆಜೋಳ ಖರೀದಿ ಕೇಂದ್ರಗಳನೋ ಓಪನ್ ಆಗುತ್ತಿದೆ. ಆದರೆ, ಒಬ್ಬ ರೈತನಿಂದ 5 ಕ್ವಿಂಟಲ್ ಮಾತ್ರ ಖರೀದಿಗೆ ಸರ್ಕಾರ ಆದೇಶಿದೆ. ಇದು ರೈತರನ್ನು ಕೆರಳಿಸಿದ್ದು, ಆದೇಶ ಹಿಂಪಡೆಯದಿದ್ದರೆ ಬೆಳಗಾವಿ ಅಧಿವೆಶನದ ವೇಳೆ ಭಾರಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ