ಹಾವೇರಿ ಸರ್ಕಾರಿ ಈಜುಕೊಳ ಚರ್ಮರೋಗ ಅಂಟಿಸುವ ಅಡ್ಡಾ ಆಗಿದೆ! ಕ್ರೀಡಾಪಟುಗಳು ಕಂಗಾಲು

|

Updated on: Feb 10, 2024 | 5:39 PM

ಹಾವೇರಿ ಜಿಲ್ಲೆ 25ನೇ ವರ್ಷದ ರಜತ ಸಂಭ್ರಮ ಆಚರಿಸಿಕೊಂಡರು ಕ್ರೀಡಾ ಕ್ಷೇತ್ರದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ. ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣಗಳಿಗೆ ಕಾಲಿಟ್ಟರೆ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಗೋಚರಿಸುತ್ತವೆ. ಅನುದಾನದ ಕೊರತೆ, ಕಾಯಂ ಸಿಬ್ಬಂದಿ ಕೊರತೆ, ಸೌಲಭ್ಯಗಳ ಕೊರತೆ ಜೊತೆಗೆ ಕಳಪೆ ಕಾಮಗಾರಿಯಿಂದ ಕ್ರೀಡಾ ಇಲಾಖೆ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.

ಹಾವೇರಿ ಸರ್ಕಾರಿ ಈಜುಕೊಳ ಚರ್ಮರೋಗ ಅಂಟಿಸುವ ಅಡ್ಡಾ ಆಗಿದೆ! ಕ್ರೀಡಾಪಟುಗಳು ಕಂಗಾಲು
ಹಾವೇರಿ ಸರ್ಕಾರಿ ಈಜುಕೊಳ ಚರ್ಮರೋಗ ಅಂಟಿಸುವ ಅಡ್ಡಾ ಆಗಿದೆ!
Follow us on

ಯುವ ಕ್ರೀಡಾಪಟುಗಳಿಗೆ ವರದಾನವಾಗಬೇಕಾಗಿದ್ದ ಹಾವೇರಿ ಜಿಲ್ಲಾ ಕ್ರೀಡಾಂಗಣ ಶಾಪವಾಗಿ ಮಾರ್ಪಟ್ಟಿದೆ. ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿದ ಈಜು ಕೊಳ ಚರ್ಮ ರೋಗ ಅಂಟಿಸುವ ಅಡ್ಡಾ ಆಗಿದೆ. ದುರಸ್ತಿ ಮಾಡಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ಕ್ರೀಡಾ ಪಟುಗಳಿಂದ ದುಡ್ಡು ಪಡೆದು ಸರ್ಕಾರಕ್ಕೆ ನೀಡದೇ ಜೇಬಿಗೆ ಇಳಿಸುತ್ತಿದ್ದಾರೆ

ಹೌದು ಹಾವೇರಿ ಜಿಲ್ಲೆಯ ಕ್ರೀಡಾಪಟುಗಳ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಭವಿಷ್ಯದಲ್ಲಿ ಹತ್ತಾರು ಮನಸ್ಸು ಕಂಡು ಜಿಲ್ಲಾ ಕ್ರೀಡಾಂಗಣಕ್ಕೆ ಹೋಗುವ ಯುವಕ ಯುವತಿಯರು ರೋಗಕ್ಕೆ ತುತ್ತಾಗುವಂಥಾ ಸ್ಥಿತಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸ್ಥಿತಿ ಇದೆ. 2010 ರಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಒಳಾಂಗಣ ಕ್ರೀಡಾಂಗಣದ ಸ್ಥಿತಿ ಸಮಸ್ಯೆಗಳ ಆಗರವಾಗಿದೆ. ಅದರಲ್ಲೂ ಈಜುಕೊಳದ ಸ್ಥಿತಿ ಅಯೋಮಯ, ಪಾಚಿಗಟ್ಟಿ ಗಬ್ಬು ನಾರುತ್ತಿರುವ ನೀರಿನಲ್ಲಿಯೇ ಈಜುಪಟುಗಳು ಈಜಾಡುತ್ತಿದ್ದಾರೆ. ಇದಕ್ಕೆ ಯಾವುದೇ ಕೆಮಿಕಲ್ ಬಳಸುತ್ತಿಲ್ಲಾ, ಜೊತೆಗೆ ಈಜುಕೊಳ ಸೋರಿಕೆಯಾಗುತ್ತಿದೆ. ಹೀಗಾಗಿ ಈಜುಪಟುಗಳಿಗೆ ನೀರಿಗೆ ಇಳಿದರೆ ಮೈ ನವೆ ಆಗುತ್ತಿದೆ. ಹೀಗೆಯೇ ಮುಂದುವರೆದರೆ ಚರ್ಮರೋಗ ಅಂಟಿಕೊಳ್ಳುವುದು ಗ್ಯಾರಂಟಿ.

ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಆವರಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಆದರೂ ಇಲ್ಲಿಯ ಸಿಬ್ಬಂದಿ ಕ್ರೀಡಾಪಟುಗಳಿಂದ ಹಣ ಪೀಕುವುದನ್ನು ಮಾತ್ರ ಬಿಟ್ಟಿಲ್ಲ. ಪುಕ್ಕಟೆಯಾಗಿಯೂ ಈಜಲು ಯೋಗ್ಯವಿಲ್ಲದ ಈಜುಕೊಳದಲ್ಲಿ ತಾಸಿಗೆ 50 ರೂ ದಂತೆ ವಸೂಲಿ ಮಾಡುತ್ತಿದ್ದಾರೆ. ಅದನ್ನು ಸರ್ಕಾರಕ್ಕೂ ನೀಡದೆ ಅಗತ್ಯ ಸಾಮಗ್ರಿ ಖರೀದಿ ಮಾಡಲು ಬಳಸದೆ ನಿತ್ಯ ಸಾವಿರಾರು ರೂಪಾಯಿ ಸಿಬ್ಬಂದಿಯ ಜೇಬಿಗೆ ಇಳಿಯುತ್ತಿದೆ. ಇದನ್ನು ಟಿವಿ9 ಪ್ರಶ್ನೆ ಮಾಡಿದಾಗ ಜಿಲ್ಲಾ ಕ್ರೀಡಾಂಗಣದ ಅಧಿಕಾರಿ, ಸಿಬ್ಬಂದಿ ಈಜುಕೊಳಕ್ಕೆ ಬೀಗ ಜಡಿದಿದ್ದಾರೆ.

ಒಟ್ಟಾರೆ ಹಾವೇರಿ ಜಿಲ್ಲೆ 25ನೇ ವರ್ಷದ ರಜತ ಸಂಭ್ರಮ ಆಚರಿಸಿಕೊಂಡರು ಕ್ರೀಡಾ ಕ್ಷೇತ್ರದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ. ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣಗಳಿಗೆ ಕಾಲಿಟ್ಟರೆ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಗೋಚರಿಸುತ್ತವೆ. ಅನುದಾನದ ಕೊರತೆ, ಕಾಯಂ ಸಿಬ್ಬಂದಿ ಕೊರತೆ, ಸೌಲಭ್ಯಗಳ ಕೊರತೆ ಜೊತೆಗೆ ಕಳಪೆ ಕಾಮಗಾರಿಯಿಂದ ಕ್ರೀಡಾ ಇಲಾಖೆ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದು ಯುವ ಕ್ರೀಡಾಪಟುಗಳ ನಿದ್ದೆಗೆಡಿಸಿರುವುದಂತೂ ನೂರಕ್ಕೆ ನೂರು ನಿಜ!

ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ