ನಿಗದಿತ ದಿನಾಂಕದಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಅನುಮಾನ; ಸರ್ಕಾರದ ನಡೆಗೆ ಕಸಾಪ ಅಧ್ಯಕ್ಷರ ಬೇಸರ
ಹಾವೇರಿಯಲ್ಲಿ ಘೋಷಿತ ದಿನಾಂಕದಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಅನುಮಾನ ವ್ಯಕ್ತವಾಗಿದೆ.
ಹಾವೇರಿ: ಹಾವೇರಿಯಲ್ಲಿ ಘೋಷಿತ ದಿನಾಂಕದಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya sammelana) ನಡೆಯೋದು ಅನುಮಾನ ವ್ಯಕ್ತವಾಗಿದೆ. ಸಮ್ಮೇಳನದ ವಿಚಾರದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನಡೆಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ (Mahesh Joshi) ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನ ನವಂಬರ್ 11,12 ಮತ್ತು 13ರಂದು ನಡೆಯುವುದು ಅನುಮಾನವಾಗಿದೆ.
ಈ ಕುರಿತು ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ, ಸಮ್ಮೇಳನ ಪ್ರಾರಂಭವಾಗಲು ಇನ್ನೂ ಒಂದು ತಿಂಗಳು ಏಳು ದಿನಗಳು ಮಾತ್ರ ಬಾಕಿ ಇದೆ. ಸಮ್ಮೇಳನದ ಪೂರ್ವದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಆಗಬೇಕು, ಸ್ವಾಗತ ಸಮಿತಿ ಸೇರಿದಂತೆ ಇಪ್ಪತ್ತು ಸಮಿತಿಗಳು ರಚನೆ ಆಗಬೇಕು. ವಸತಿ ವ್ಯವಸ್ಥೆ, ಪ್ರತಿನಿಧಿಗಳ ನೋಂದಣಿ ಆಗಬೇಕು. ಈವರೆಗೆ ಯಾವುದೇ ಕೆಲಸವೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವಾಯತ್ತ, ಸ್ವಾಭಿಮಾನದ ಸಂಸ್ಥೆ. ಮುಖ್ಯಮಂತ್ರಿ ಅವರ ಮನೆ ಕಾಯುವ ಅಧ್ಯಕ್ಷ ನಾನಾಗೋದಿಲ್ಲ. ಸಿಎಂ ಅವರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದ ನಾನು (ಮಹೇಶ ಜೋಷಿ) ಇದೆ ಜಿಲ್ಲೆಯವರು. ಸಮ್ಮೇಳನ ನಡೆಸೋ ಬಗ್ಗೆ ಸಾಕಷ್ಟು ಉತ್ಸುಕತೆ ಹೊಂದಿದ್ದೆ. ಮೊದಲು ಇದ್ದ ಉತ್ಸಾಹ ಈಗ ಕಡಿಮೆ ಆಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಸಾಹಿತ್ಯ ಪರಿಷತ್ತಿಗೆ ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಜ್ಜೆ ಹೆಜ್ಜೆಗೂ ನಮಗೆ ಸಹಕಾರ ಸಿಗುತ್ತಿಲ್ಲ. ಸಾಹಿತ್ಯ ಪರಿಷತ್ತಿಗೆ ಎಲ್ಲೆಲ್ಲಿ ಅಪಮಾನ ಆಗಿದೆ ಅದನ್ನು ಸರಿಪಡಿಸಬೇಕು. ಹಾವೇರಿಯಲ್ಲಿ ಎಷ್ಟು ಬೇಗ ಅಗುತ್ತೋ ಅಷ್ಟು ಬೇಗ ಸಮ್ಮೇಳನ ಮಾಡಿ ಅನ್ನೋದು ಕಸಾಪ ನಿಲುವು. ನಮ್ಮ ತಯಾರಿ ನಾವು ಮಾಡಿಕೊಂಡಿದ್ದೇವೆ. ಸರಕಾರದಿಂದ ಆಗಬೇಕಾದ ವ್ಯವಸ್ಥೆ ಇನ್ನೂ ಆಗಿಲ್ಲ. ಒಬ್ಬ ಅಧ್ಯಕ್ಷನಾಗಿ ನಾನು ಸಮ್ಮೇಳನ ಯಾವಾಗ ಅನ್ನೋದನ್ನು ನಿಶ್ಚಿತವಾಗಿ ಹೇಳಲು ಆಗೋದಿಲ್ಲ ಅಂದರೆ ಅದು ದೌರ್ಭಾಗ್ಯದ ಸಂಗತಿ ಎಂದರು.
ಸಮ್ಮೇಳನ ವಿಚಾರದಲ್ಲಿ ಈವರೆಗೆ ಸಾಕಷ್ಟು ಕಾಗದಗಳನ್ನು ಬರೆದಿರುವೆ. ಕಾಗದಗಳನ್ನು ಬರೆದರೆ ಯಾರೋ ಒಬ್ಬ ಅಂಡರ್ ಸೆಕ್ರೆಟರಿ ಉತ್ತರ ಕೊಡುತ್ತಾನೆ. ಈ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಾದರೆ ಬಹಳ ಬೇಸರ ಆಗುತ್ತಿದೆ. ದಸರಾದಲ್ಲೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಪಕ್ಕಕ್ಕೆ ತಳ್ಳಿದರು. ನಾನು ಮಹೇಶ ಜೋಷಿಯಾಗಿ ಏನನ್ನೂ ಕೇಳುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕೇಳುತ್ತಿದ್ದೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಸಮ್ಮೇಳನದ ಬಗ್ಗೆ ನನಗೆ ನಿಶ್ಚಿತತೆ ಇಲ್ಲದಾಗಿದೆ. ಸಮ್ಮೇಳನಕ್ಕೆ ಬಜೆಟ್ನಲ್ಲಿ ಇಪ್ಪತ್ತು ಕೋಟಿ ಕೊಟ್ಟಿದ್ದೇವೆ ಅಂದರು. ಇವತ್ತಿನವರೆಗೂ ಜಿಲ್ಲಾಡಳಿತಕ್ಕೆ ಒಂದು ಪೈಸೆಯೂ ಬಂದಿಲ್ಲ ಎಂದು ತಿಳಿಸಿದರು.
ಸಿಎಂ ನಿಗದಿತ ದಿನಾಂಕಕ್ಕೆ ಸಮ್ಮೇಳನ ಮಾಡುತ್ತೇವೆ ಅಂತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ದಿನಾಂಕ ಮುಂದೂಡುತ್ತೇವೆ ಅಂತಾರೆ. ಸಮ್ಮೇಳನಕ್ಕೆ ಗುರ್ತಿಸಿದ ಸ್ಥಳ ಕೋರ್ಟಿನಲ್ಲಿದೆ ಅಂತಾರೆ. ನಾನು ಸಿಎಂ ಅವರಿಗೆ ಹೇಳಿದೆ, ಸಾಹಿತ್ಯ ಸಮ್ಮೇಳನಗೋಸ್ಕರ ಯಾರಾದರೂ ಒಬ್ಬ ಅಧಿಕಾರಿ ಅಥವಾ ಮಂತ್ರಿ ಅವರನ್ನು ನೇಮಕ ಮಾಡುವಂತೆ ಹೇಳಿದೆ. ಯಾವ ಕೆಲಸವೂ ಆಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Mon, 3 October 22