
ಹಾವೇರಿ, ಜೂನ್ 26: ಸರ್ಕಾರಿ ನೌಕರನಿಗೆ ಲಂಚ (bribe) ನೀಡಲು ಸಂತ್ರಸ್ತ ವ್ಯಕ್ತಿ ತಮ್ಮ ಪತ್ನಿಯ ಮಾಂಗಲ್ಯ ಸರವನ್ನು (Mangalsutra) ಅಡವಿಟ್ಟ ಘಟನೆಯೊಂದು ಹಾವೇರಿ ತಾಲ್ಲೂಕಿನ ಬೆಳವಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಿಲ್ ನೀಡಲು ಸರ್ಕಾರಿ ನೌಕರ ಹಣಕ್ಕೆ ಬೇಡಿಕೆ ಇಟ್ಟ ಹಿನ್ನಲೆ ಮಹಾಂತೇಶ ಬಡಿಗೇರ ಎಂಬುವವರು ತಮ್ಮ ಪತ್ನಿ ಮಾಂಗಲ್ಯ ಸರವನ್ನು ಅಡವಿಟ್ಟು ಹಣ ನೀಡಿದ್ದಾರೆ. ಆದರೆ ಇದುವರೆಗೂ ಬಿಲ್ ಮಂಜೂರಾಗಿಲ್ಲ ಎಂದು ತಹಶೀಲ್ದಾರ್ ಬಳಿ ಅಳಲು ತೊಡಿಕೊಂಡಿದ್ದಾರೆ.
ಹಾವೇರಿ ತಾಲೂಕು ಬೆಳವಿಗೆ ಗ್ರಾಮದ ಮಹಾಂತೇಶ್, ಸಾಲ ಮಾಡಿ ಮನೆ ಕಟ್ಟಿದ್ದರಿಂದ ಬಿಲ್ ಅನಿವಾರ್ಯವಾಗಿತ್ತು. ಹೀಗಾಗಿ ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ನೌಕರ ಮದನ್ ಮೋಹನ್‌ಗೆ 20 ಸಾವಿರ ರೂ ಲಂಚ ನೀಡಿದ್ದಾರೆ. ಆದರೆ ಇದುವರೆಗೂ ಬಿಲ್ ಮಂಜೂರಾಗಿಲ್ಲ. ಈ ಬಗ್ಗೆ ತಹಶೀಲ್ದಾರ್ ಶರಣಮ್ಮ ಅವರನ್ನು ಭೇಟಿಯಾಗಿ ಅಳಲು ತೊಡಿಕೊಂಡಿದ್ದು, ಜೊತೆಗೆ ದೂರು ಸಹ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರದಲ್ಲಿ ನವೆಂಬರ್ ತಿಂಗಳು ಬದಲಾವಣೆ ನಿಶ್ಚಿತ, ಅದು ಭಾರೀ ಬದಲಾವಣೆಯೇನೂ ಆಗಿರಲ್ಲ: ಸತೀಶ್ ಜಾರಕಿಹೊಳಿ
ಸಂತ್ರಸ್ತನ ದೂರಿಗೆ ಸ್ಪಂದಿಸಿದ ತಹಶೀಲ್ದಾರ್ ಶರಣಮ್ಮ, ಹಣ ನೀಡಿರುವ ದಾಖಲೆಗಳನ್ನು ನನಗೆ ನೀಡಿ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ನೌಕರನ ವಿರುದ್ಧ ಕಠಿಣ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನೆರೆ ಸಂದರ್ಭದಲ್ಲಿ ಮಹಾಂತೇಶ್ ಅವರ ಮನೆ ಕುಸಿದು ಬಿದ್ದಿತ್ತು. ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಮಂಜೂರು ಸಿಕ್ಕಿತ್ತು. ಹೀಗಾಗಿ ಮಹಾಂತೇಶ್ ಅವರು ಸಾಲ ಮಾಡಿ ಮನೆ ನಿರ್ಮಾಣ ಆರಂಭಿಸಿದ್ದರು. ಆದರೆ, ಬ್ಯಾಂಕ್ ಖಾತೆಗೆ ಯಾವುದೇ ಬಿಲ್ ಬಂದಿರಲಿಲ್ಲ. ಬಿಲ್‌ಗಾಗಿ ಹಾವೇರಿ ತಹಶೀಲ್ದಾರ್ ಕಚೇರಿಗೆ ಹಲವು ವರ್ಷಗಳಿಂದ ಅಲೆದಾಡುತ್ತಿದ್ದರು. ಬಿಲ್ ಮಂಜೂರು ಮಾಡುವಂತೆ ಮನವಿ ಕೂಡ ಸಲ್ಲಿಸಿದ್ದರು.
ಇದನ್ನೂ ಓದಿ: ಪ್ರಲ್ಹಾದ್ ಜೋಶಿ ವಿರುದ್ಧ ನಿಂದನೆ, ಜೀವ ಬೆದರಿಕೆ ಆರೋಪ: ಏಮ್ಸ್ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು
ಇತ್ತ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಮದನ್ ಮೋಹನ್, ಬಿಲ್ ಮಂಜೂರು ಮಾಡಲು ಉಳಿದ ಸಂತ್ರಸ್ತರು ಹಣ ನೀಡಿದ್ದಾರೆ. ನೀನು ಸಹ 20 ಸಾವಿರ ರೂ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಾದ ನಂತರ ಕಚೇರಿಯ ಕ್ಯಾಂಟೀನ್‌ನಲ್ಲಿ ನೌಕರನಿಗೆ 20 ಸಾವಿರ ರೂ ನೀಡಿರುವುದಾಗಿ ಸಂತ್ರಸ್ತ ಮಹಾಂತೇಶ್ ಆರೋಪಿಸಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:48 pm, Thu, 26 June 25