ಪ್ರಲ್ಹಾದ್ ಜೋಶಿ ವಿರುದ್ಧ ನಿಂದನೆ, ಜೀವ ಬೆದರಿಕೆ ಆರೋಪ: ಏಮ್ಸ್ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಆರು ಮಂದಿ ಏಮ್ಸ್ ಹೋರಾಟಗಾರರ ವಿರುದ್ಧ ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಮಾಡಿದ್ದೇನು? ಬಿಜೆಪಿ ನೀಡಿದ್ದ ದೂರಿನಲ್ಲೇನಿದೆ? ಪೊಲೀಸರು ಕೈಗೊಂಡ ಕ್ರಮಗಳೇನು ಎಂಬ ವಿವರ ಇಲ್ಲಿದೆ.

ರಾಯಚೂರು, ಜೂನ್ 26: ಕೇಂದ್ರ ಸಚಿವ ಪ್ರಲ್ಹಾದ್ (Pralhad Joshi) ಜೋಶಿ ಹಾಗೂ ನಗರ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಏಮ್ಸ್ ಹೋರಾಟಗಾರರ (AIIMS Activists) ವಿರುದ್ಧ ರಾಯಚೂರು (Raichur) ನಗರದ ಪಶ್ಚಿಮ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೀರನಗೌಡ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಏಮ್ಸ್ ಹೋರಾಟಗಾರರಾದ ಅಶೋಕ್ ಜೈನ್, ಬಸವರಾಜ್ ಕಳಸ , ಎಂಆರ್ ಬೇರಿ, ಎಸ್ ಮಾರೆಪ್ಪ ಸೇರಿ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬುಧವಾರವಷ್ಟೇ ಏಮ್ಸ್ ಹೋರಾಟಗಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೂ ಬಿಜೆಪಿ ದೂರು ನೀಡಿತ್ತು.
ಬಿಜೆಪಿ ನೀಡಿದ ದೂರಿನಲ್ಲೇನಿದೆ?
ಆರೋಪಿಗಳು ಜೂನ್ 24 ರಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವರು ಎಲ್ಲೇ ಸಿಕ್ಕರೂ ಅವರಿಗೆ ಕಲ್ಲಿನಿಂದ, ಬಾರಿಗೆಯಿಂದ ಮತ್ತು ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿಯುಂಟಾಗಿ ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ. ಒಬ್ಬ ಗೌರವಾನ್ವಿತ ಕೇಂದ್ರ ಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವುದರಿಂದ ತಕ್ಷಣವೇ ಆರೋಪಿಗಳು ಮತ್ತು ಅವರ ಸಹಚರರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತಿದ್ದೇವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೀರನಗೌಡ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಧರ್ಮಾಧಾರಿತ ವಸತಿ ಮೀಸಲಾತಿ ವಿರುದ್ಧ ಕಾನೂನು ಕ್ರಮ; ಪ್ರಲ್ಹಾದ್ ಜೋಶಿ ಎಚ್ಚರಿಕೆ
ಈ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯ ಕಲಂ 325, 351(2)(3), 190 ರ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ರಾಯಚೂರು ನಗರದ ಪಶ್ಚಿಮ ಠಾಣೆ ಪೊಲೀಸರು ತಿಳಿಸಿದ್ದಾರೆ.