ಕರ್ನಾಟಕದ ಧರ್ಮಾಧಾರಿತ ವಸತಿ ಮೀಸಲಾತಿ ವಿರುದ್ಧ ಕಾನೂನು ಕ್ರಮ; ಪ್ರಲ್ಹಾದ್ ಜೋಶಿ ಎಚ್ಚರಿಕೆ
ಧರ್ಮದ ಆಧಾರದ ಮೇಲೆ ಶೇ.15ರಷ್ಟು ಮೀಸಲಾತಿ ನೀಡಲು ಕರ್ನಾಟಕ ಸರ್ಕಾರವು ಇಂದು ಸಚಿವ ಸಂಪುಟ ಸಭೆಯಲ್ಲಿ ತಗೆದುಕೊಂಡ ನಿರ್ಧಾರ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿಂದೆ, ರಾಹುಲ್ ಗಾಂಧಿಯವರ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಸರ್ಕಾರ ಶೇ. 4ರಷ್ಟು ಮೀಸಲಾತಿಯನ್ನು ಒಂದು ಸಮುದಾಯಕ್ಕೆ ನೀಡಿತ್ತು. ಈಗ ವಸತಿ ಯೋಜನೆಗಳಲ್ಲಿ ಶೇ.15ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, ಜೂನ್ 19: ಕರ್ನಾಟಕ ಸರ್ಕಾರ (Karnataka Government) ವಸತಿ ಯೋಜನೆಗಳಲ್ಲಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲು ಮುಂದಾದ ಕ್ರಮವನ್ನು ಪ್ರಶ್ನಿಸಿ ಕಾನೂನು ಹೋರಾಟಕ್ಕಿಳಿಯಲು ಚಿಂತನೆ ನಡೆಸುತ್ತೇವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸಂಜೆ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಯಾವುದರಲ್ಲೇ ಆಗಲಿ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವುದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂಬುದನ್ನು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ನಾವೀಗ ರಾಜ್ಯ ಸರ್ಕಾರದ ತುಷ್ಟೀಕರಣದ ಕ್ರಮ ವಿರೋಧಿಸಿ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಇಳಿಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರ ಈ ಹಿಂದೆ ರಾಹುಲ್ ಗಾಂಧಿ ಸೂಚನೆ ಮೇರೆಗೆ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಿತು. ಈಗ ನೋಡಿದರೆ ವಸತಿ ಯೋಜನೆಗಳಲ್ಲಿ ಸಹ ಮುಸ್ಲಿಂ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ಇದು ಅಸಂವಿಧಾನಿಕ ಮತ್ತು ಕಾನೂನು ಬಾಹಿರವಾದ ಕ್ರಮವೆಂದು ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದರು.
ಇದನ್ನೂ ಓದಿ: ಗೋಧಿ ಬೆಲೆ ನಿಯಂತ್ರಣ, ದಾಸ್ತಾನು ಮೇಲೆ ಸರ್ಕಾರ ನಿಗಾ; ಪ್ರಲ್ಹಾದ್ ಜೋಶಿ ಮಾಹಿತಿ
ಸೇನೆಯಲ್ಲಿ ಮುಸ್ಲಿಮರಿಗೆ ಧರ್ಮ ಆಧಾರಿತ ಮೀಸಲಾತಿಯನ್ನು ಪರಿಚಯಿಸಲು ಸಹ ಪ್ರಯತ್ನಿಸುತ್ತಿರುವುದು ನಿಜಕ್ಕೂ ಶೋಚನೀಯ. ಹಲವಾರು ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ಇಂತಹ ಅಸಂವಿಧಾನಿಕ ನಿರ್ಧಾರಗಳನ್ನು ರದ್ದುಗೊಳಿಸಿದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಈ ನೀತಿ, ನಿಯಮಗಳನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ವಸತಿ ಯೋಜನೆಯಲ್ಲಿ ಈ ಮೊದಲು ಮುಸ್ಲಿಂರಿಗೆ ಶೇ.10ರಷ್ಟ ಮೀಸಲಾತಿ ಇದ್ದುದೇ ಅಸಂವಿಧಾನಿಕವಾಗಿತ್ತು. ಈಗದನ್ನು ಮತ್ತೆ ಶೇ.15ಕ್ಕೆ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಉಳಿದೆಲ್ಲ ಸಮುದಾಯಗಳ ಕಡುಬಡವರಿಗೆ ತೀವ್ರ ಅನ್ಯಾಯವಾಗುತ್ತದೆ ಎಂದು ಅವರು ಆಕ್ಷೇಪಿಸಿದರು.
Today, the Karnataka government’s decision to provide 15% reservation based on religion is a clear violation of the Constitution. Earlier, on the instructions of Rahul Gandhi, Siddaramaiah and his team had granted 4% reservation in government contracts, and now they have extended… pic.twitter.com/4JjG4aeu8G
— Pralhad Joshi (@JoshiPralhad) June 19, 2025
ಇತರೆ ಸಮುದಾಯದ ಬಡವರಿಗೆ ದ್ರೋಹ:
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬರೀ ತುಷ್ಟೀಕರಣ ರಾಜಕಾರಣದಲ್ಲೇ ನಿರತವಾಗಿದೆ. ಎಲ್ಲದರಲ್ಲೂ ಮುಸ್ಲಿಂರಿಗೆ ಮೀಸಲಾತಿ ನೀಡುತ್ತಿರುವುದರಿಂದ ಸಾಮಾನ್ಯ ವರ್ಗದ ಬಡವರಿಗೆ, ಎಸ್ಸಿ-ಎಸ್ಟಿ ಮತ್ತು ಓಬಿಸಿಗಳಿಗೆ ಬಹು ಅನ್ಯಾಯವಾಗುತ್ತದೆ. ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇತರ ಸಮುದಾಯದವರಿಗೆ ದ್ರೋಹ ಬಗೆಯುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.
ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಗಿಂತ ಕೆಟ್ಟದಾಗಿ ವರ್ತಿಸುತ್ತಿದೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ
ವಸತಿ ಯೋಜನೆಗಳಿಗೆ ಬಹುತೇಕ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಅನುದಾನ ಬರುತ್ತದೆ. ಆದರೆ, ರಾಜ್ಯ ಸರ್ಕಾರ ಬೇರೆ ಬೇರೆ ವಸತಿ ಯೋಜನೆಗಳಡಿ ಮುಸ್ಲಿಂರಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿರುವುದು ಸರಿಯಲ್ಲ. ಇತರೆ ಹಿಂದುಳಿದವರು ವಸತಿ ವಂಚಿತರಾಗುತ್ತಾರೆ. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಾನೂನು ಹೋರಾಟ ನಡೆಸುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.
ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ದೇಶದಲ್ಲೆಲ್ಲೂ ಇಲ್ಲ:
ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿರುವಂತಹ ಧರ್ಮಾಧಾರಿತ ಮೀಸಲಾತಿ ಬಹುಶಃ ದೇಶದಲ್ಲೆಲ್ಲೂ ಇಲ್ಲ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದುಸ್ಸಾಹಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ನಿರ್ಲಕ್ಷಿಸಿ ಧರ್ಮಾಧಾರಿತ ಮೀಸಲಾತಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಚುನಾವಣಾ ಲಾಭಕ್ಕಾಗಿ ಈ ಕಾರ್ಯಸೂಚಿ ಮುಂದಿಡುತ್ತಿದೆ. ರಾಜಕೀಯ ಲಾಭಕ್ಕಾಗಿ ಸಮುದಾಯಗಳನ್ನು ವಿಭಜಿಸುವ ಪ್ರಯತ್ನ ನಡೆಸಿದೆ ಎಂದು ಪ್ರಲ್ಹಾದ್ ಜೋಶಿ ಕರ್ನಾಟಕ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ