ಗೋಧಿ ಬೆಲೆ ನಿಯಂತ್ರಣ, ದಾಸ್ತಾನು ಮೇಲೆ ಸರ್ಕಾರ ನಿಗಾ; ಪ್ರಲ್ಹಾದ್ ಜೋಶಿ ಮಾಹಿತಿ
ಗೋಧಿ ಬೆಲೆಯ ನಿಯಂತ್ರಣ ಮತ್ತು ದಾಸ್ತಾನು ಮೇಲೆ ಕೇಂದ್ರ ಸರ್ಕಾರ ನಿಗಾ ಇರಿಸಿದೆ. ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಲ್ಲಿ ಗೋಧಿ ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ. ಗೋಧಿ ದಾಸ್ತಾನು ಪೋರ್ಟಲ್‌ನಲ್ಲಿ ನೋಂದಾಯಿಸದ, ದಾಸ್ತಾನು ಮಿತಿ ಉಲ್ಲಂಘಿಸುವ ಯಾವುದೇ ಘಟಕವನ್ನು ಅಗತ್ಯ ಸರಕುಗಳ ಕಾಯ್ದೆ 1955ರ ಸೆಕ್ಷನ್ 6 ಮತ್ತು 7ರಡಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.

ನವದೆಹಲಿ, ಮೇ 29: ದೇಶದೆಲ್ಲೆಡೆ ಗೋಧಿ ಬೆಲೆ ನಿಯಂತ್ರಣ ಮತ್ತು ಸುಲಭ ಲಭ್ಯತೆಗಾಗಿ ಕೇಂದ್ರ ಸರ್ಕಾರ ನಿಗಾ ಇರಿಸಿದೆ. ಕೇಂದ್ರಾಡಳಿತ ಪ್ರದೇಶ ಹಾಗೂ ಎಲ್ಲಾ ರಾಜ್ಯಗಳಿಗೆ ಗೋಧಿ ದಾಸ್ತಾನು ಮಿತಿ ವಿಧಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. 2026ರ ಮಾರ್ಚ್ 31ರವರೆಗೆ ಅನ್ವಯಿಸುವಂತೆ ವ್ಯಾಪಾರಿಗಳು ಮತ್ತು ಸಗಟು ಮಾರಾಟಗಾರರಿಗೆ 3000 ಮೆಟ್ರಿಕ್ ಟನ್, ಚಿಲ್ಲರೆ ವ್ಯಾಪಾರಿಗಳು ಮತ್ತು ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 10 ಮೆಟ್ರಿಕ್ ಟನ್, ದೊಡ್ಡ ರಿಟೇಲರ್, ಪ್ರತಿ ಚಿಲ್ಲರೆ ಔಟ್ಲೆಟ್ ಗೆ 10 ಮೆಟ್ರಿಕ್ ಟನ್ವರೆಗೆ ಗರಿಷ್ಠ ಪ್ರಮಾಣದ ದಾಸ್ತಾನು ಮಿತಿ ನಿಗದಿಪಡಿಸಿದೆ ಎಂದಿದ್ದಾರೆ.
ಮೇ 27ರಂದು ನಿರ್ದಿಷ್ಟ ಆಹಾರ ಧಾನ್ಯ ಮೇಲಿನ ಪರವಾನಗಿ ಅವಶ್ಯಕತೆ, ದಾಸ್ತಾನು ಮಿತಿ ಮತ್ತು ಸಾಗಣೆ ನಿರ್ಬಂಧ ತೆರವು (ತಿದ್ದುಪಡಿ) ಆದೇಶ ಹೊರಡಿಸಿದೆ. ಇದು 2026ರ ಮಾರ್ಚ್ 31ರವರೆಗೆ ಅನ್ವಯಿಸುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹಿಟ್ಲರ್ ಆಡಳಿತ ಇದೆಯಾ? ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ನಿರ್ಧಾರಕ್ಕೆ ಜೋಶಿ ಸೇರಿ ಅನೇಕರಿಂದ ಖಂಡನೆ
ಪೋರ್ಟಲ್‌ನಲ್ಲಿ ದಾಸ್ತಾನು ಸ್ಥಿತಿ ಘೋಷಿಸದಿದ್ದರೆ ದಂಡ:
ಎಲ್ಲಾ ಗೋಧಿ ದಾಸ್ತಾನು ಘಟಕಗಳು ಪ್ರತಿ ಶುಕ್ರವಾರ ಗೋಧಿ ದಾಸ್ತಾನು ಪೋರ್ಟಲ್‌ನಲ್ಲಿ (https://evegoils.nic.in/wsp/login) ದಾಸ್ತಾನು ಸ್ಥಿತಿ ಘೋಷಿಸಿ ನವೀಕರಿಸಬೇಕು. ಇದನ್ನು ಸಕಾಲಕ್ಕೆ https://foodstock.dfpd.gov.inಗೆ ರವಾನಿಸಲಾಗುತ್ತದೆ. ಗೋಧಿ ದಾಸ್ತಾನು ಪೋರ್ಟಲ್‌ನಲ್ಲಿ ನೋಂದಾಯಿಸದ, ದಾಸ್ತಾನು ಮಿತಿ ಉಲ್ಲಂಘಿಸುವ ಯಾವುದೇ ಘಟಕವನ್ನು ಅಗತ್ಯ ಸರಕುಗಳ ಕಾಯ್ದೆ 1955ರ ಸೆಕ್ಷನ್ 6 ಮತ್ತು 7ರಡಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಗಿಂತ ಕೆಟ್ಟದಾಗಿ ವರ್ತಿಸುತ್ತಿದೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ
ಒಂದು ವೇಳೆ ಸಂಸ್ಥೆಗಳು ನಿಗದಿಗಿಂತ ಹೆಚ್ಚು ಗೋಧಿ ದಾಸ್ತಾನು ಹೊಂದಿದ್ದರೆ ಅಧಿಸೂಚನೆ ಹೊರಡಿಸಿದ 15 ದಿನಗಳಲ್ಲಿ ನಿಗದಿತ ಮಿತಿಗೆ ತರಬೇಕಾಗುತ್ತದೆ. ದೇಶದಲ್ಲಿ ಗೋಧಿ ಕೃತಕ ಅಭಾವ ಉಂಟಾಗದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಈ ದಾಸ್ತಾನು ಮಿತಿ ಜಾರಿಗೊಳಿಸಿ ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಮೇ 27ರವರೆಗೆ ರಾಜ್ಯ ಸಂಸ್ಥೆಗಳು ಮತ್ತು ಎಫ್‌ಸಿಐ ಮೂಲಕ ಒಟ್ಟು 298.17 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








