ನಮ್ಮ ಪ್ಲಾನ್ಗೂ ಮೊದಲೇ ಭಾರತ ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿತ್ತು; ಪಾಕಿಸ್ತಾನ ಪ್ರಧಾನಿ ಮಹತ್ವದ ಹೇಳಿಕೆ
ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಹತ್ವದ ಹೇಳಿಕೆ ನೀಡಿದ್ದಾರೆ. ನಾವು ಭಾರತದ ಮೇಲೆ ದಾಳಿ ನಡೆಸಲು ಪ್ಲಾನ್ ಮಾಡಿದ್ದೆವು. ಆದರೆ, ಅದಕ್ಕೂ ಮೊದಲೇ ಪಾಕಿಸ್ತಾನದ ಮೇಲೆ ಬ್ರಹ್ಮೋಸ್ ದಾಳಿ ನಡೆದಿತ್ತು. ಬ್ರಹ್ಮೋಸ್ ಕ್ಷಿಪಣಿಗಳಿಂದ ಭಾರತ ನಮ್ಮ ಸೇನಾನೆಲೆ ಮೇಲೆ ದಾಳಿ ನಡೆಸಿತ್ತು ಎಂದು ಅಜೆರ್ಬೈಜಾನ್‌ನಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಇಸ್ಲಮಾಬಾದ್, ಮೇ 29: ಭಾರತ ಪಾಕಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿಯ (Air Strike) ಬಗ್ಗೆ ಬಹಿರಂಗವಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮಾತನಾಡಿದ್ದಾರೆ. ಪಾಕಿಸ್ತಾನದ (Pakistan) ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶೆಹಬಾಜ್ ಷರೀಫ್, ಮೇ 10ರಂದು ಬೆಳಗಿನ ಪ್ರಾರ್ಥನೆಯ ನಂತರ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಆದರೆ, ಪಾಕಿಸ್ತಾನ ತನ್ನ ಪ್ಲಾನ್ ಅನ್ನು ಜಾರಿಗೊಳಿಸುವ ಮೊದಲೇ ಭಾರತದ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು ಪಾಕಿಸ್ತಾನದ ರಾವಲ್ಪಿಂಡಿ ಸೇರಿದಂತೆ ಹಲವಾರು ಪ್ರಾಂತ್ಯಗಳಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದವು ಎಂದು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಎದುರೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಜೆರ್ಬೈಜಾನ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಭಾರತದ ದಾಳಿಯ ಬಗ್ಗೆ ಮಾತನಾಡಿದ ಪಾಕ್ ಪ್ರಧಾನಿ, ಮೇ 9-10ರ ಮಧ್ಯರಾತ್ರಿ ಭಾರತ ನಡೆಸಿದ ದಾಳಿಯ ಸಮಯದಲ್ಲಿ ಪಾಕಿಸ್ತಾನ ಸೇನೆಯು ಅಜಾಗರೂಕತೆಯಿಂದ ಸಿಕ್ಕಿಹಾಕಿಕೊಂಡಿತು. ಈಗ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದಿರುವ ಅಸಿಮ್ ಮುನೀರ್ ಅವರು ಬೆಳಗಿನ ಜಾವ ಈ ದಾಳಿಯ ಬಗ್ಗೆ ನನಗೆ ತಿಳಿಸಿದರು ಎಂದಿದ್ದಾರೆ. ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಭಾರತ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿತ್ತು.
Pakistan PM Shehbaz Sharif exposing Pakistan Army & Chief Asim Munir. Brahmos hit several instillations & they couldn’t prevent it. Wonder what were they celebrating for? Despite being mauled by @IAF_MCC they promoted Munir to FM rank? #operation_sindoor pic.twitter.com/WHnOCuzciu
— Pramod Kumar Singh (@SinghPramod2784) May 29, 2025
“ನಮ್ಮ ಸಶಸ್ತ್ರ ಪಡೆಗಳು ಫಜ್ರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 4.30ಕ್ಕೆ ಭಾರತಕ್ಕೆ ಪಾಠ ಕಲಿಸಲು ಸಿದ್ಧವಾಗಿದ್ದವು. ಆದರೆ ಅದಕ್ಕೂ ಮೊದಲೇ ಭಾರತ ಮತ್ತೊಮ್ಮೆ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿತು” ಎಂದು ಪಾಕ್ ಪ್ರಧಾನಿ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: ಪಿಒಕೆಯನ್ನು ವಾಪಾಸ್ ಕೊಟ್ಟ ನಂತರವೇ ಮುಂದಿನ ಮಾತುಕತೆ; ಪಾಕಿಸ್ತಾನದ ಪ್ರಧಾನಿಗೆ ಭಾರತ ಪ್ರತಿಕ್ರಿಯೆ
ಪಹಲ್ಗಾಮ್ ದಾಳಿ:
26 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡವು. ಮೇ 9-10ರ ಮಧ್ಯರಾತ್ರಿ ಎರಡೂ ಕಡೆಯವರ ನಡುವೆ ಪ್ರಮುಖ ಕಾರ್ಯಾಚರಣೆ ನಡೆದು ಮೇ 10ರ ಮಧ್ಯಾಹ್ನದವರೆಗೆ ಮುಂದುವರೆಯಿತು. ಇದರಲ್ಲಿ ಪಾಕಿಸ್ತಾನದ ಉದ್ದಕ್ಕೂ ಮತ್ತು ಅಗಲಕ್ಕೂ ಇರುವ ವಾಯುನೆಲೆಗಳನ್ನು ಭಾರತ ಗುರಿಯಾಗಿಸಿಕೊಂಡು ದಾಳಿ ನಡೆಸಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Thu, 29 May 25








