AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೊಯೇಷಿಯಾ ಪ್ರಧಾನಿಯಿಂದ ಮೋದಿಗೆ 1790ರ ಲ್ಯಾಟಿನ್ ಭಾಷೆಯ ಸಂಸ್ಕೃತ ವ್ಯಾಕರಣದ ಮರುಮುದ್ರಣ ಉಡುಗೊರೆ

ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕ್ರೊಯೇಷಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ, ನರೇಂದ್ರ ಮೋದಿಯವರ ಈ ಭೇಟಿ ಐತಿಹಾಸಿಕವಾಗಿದೆ. ಕ್ರೊಯೇಷಿಯಾದ ವಿಜ್ಞಾನಿ ಮತ್ತು ಮಿಷನರಿ ಫಿಲಿಪ್ ವೆಜ್ಡಿನ್ (1748-1806) ಅವರು ಭಾರತದಲ್ಲಿದ್ದಾಗ ಕೇರಳ ಬ್ರಾಹ್ಮಣರು ಮತ್ತು ಸ್ಥಳೀಯ ಹಸ್ತಪ್ರತಿಗಳಿಂದ ಪಡೆದ ಜ್ಞಾನದ ಆಧಾರದ ಮೇಲೆ 1790ರಲ್ಲಿ ಲ್ಯಾಟಿನ್ ಭಾಷೆಯಲ್ಲಿ ಬರೆದ ಮೊದಲ ಮುದ್ರಿತ ಸಂಸ್ಕೃತ ವ್ಯಾಕರಣವನ್ನು ಕ್ರೊಯೇಷಿಯಾ ಪ್ರಧಾನಿ ಭಾರತದ ಪ್ರಧಾನಿ ಮೋದಿಗೆ ನೀಡಿದ್ದಾರೆ.

ಕ್ರೊಯೇಷಿಯಾ ಪ್ರಧಾನಿಯಿಂದ ಮೋದಿಗೆ 1790ರ ಲ್ಯಾಟಿನ್ ಭಾಷೆಯ ಸಂಸ್ಕೃತ ವ್ಯಾಕರಣದ ಮರುಮುದ್ರಣ ಉಡುಗೊರೆ
Pm Modi Gets Gift In Croatia
ಸುಷ್ಮಾ ಚಕ್ರೆ
|

Updated on: Jun 18, 2025 | 10:34 PM

Share

ಜಾಗ್ರೆಬ್, ಜೂನ್ 18: ಎರಡು ದೇಶಗಳ ನಡುವಿನ ಶತಮಾನಗಳಷ್ಟು ಹಳೆಯದಾದ ನಿಕಟ ಸಾಂಸ್ಕೃತಿಕ ಸಂಪರ್ಕವನ್ನು ಸೂಚಿಸುವ ಒಂದು ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಕ್ರೊಯೇಷಿಯಾದ (Croatia) ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರಿಂದ ವೆಜ್ಡಿನ್ ಅವರ ಸಂಸ್ಕೃತ ವ್ಯಾಕರಣದ ಮರುಮುದ್ರಣವನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಇದು ಕ್ರೊಯೇಷಿಯಾದ ವಿಜ್ಞಾನಿ ಮತ್ತು ಮಿಷನರಿ ಫಿಲಿಪ್ ವೆಜ್ಡಿನ್ ಅವರು ಭಾರತದಲ್ಲಿ ಕಳೆದ ಸಮಯದಲ್ಲಿ 1790ರಲ್ಲಿ ಲ್ಯಾಟಿನ್ ಭಾಷೆಯಲ್ಲಿ ಬರೆದ ಮೊದಲ ಮುದ್ರಿತ ಸಂಸ್ಕೃತ ವ್ಯಾಕರಣವಾಗಿದೆ. ಹೀಗಾಗಿ, ಇದು ಭಾರತದ ಪಾಲಿಗೆ ಬಹಳ ವಿಶೇಷದ್ದಾಗಿದೆ. ಭಾರತ ಪ್ರಧಾನಿ ಮೋದಿ ಕೂಡ ಕ್ರೋಯೇಷಿಯಾ ಪ್ರಧಾನಿಗೆ ಬೆಳ್ಳಿಯ ಕ್ಯಾಂಡಲ್ ಸ್ಟ್ಯಾಂಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

“ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ವೆಜ್ಡಿನ್ ಅವರ ಸಂಸ್ಕೃತ ವ್ಯಾಕರಣದ ಮರುಮುದ್ರಣವನ್ನು ಹಸ್ತಾಂತರಿಸಿದೆ. ಕ್ರೊಯೇಷಿಯಾದ ವಿಜ್ಞಾನಿ ಮತ್ತು ಮಿಷನರಿ ಫಿಲಿಪ್ ವೆಜ್ಡಿನ್ (1748-1806) ಅವರು ಭಾರತದಲ್ಲಿದ್ದಾಗ ಕೇರಳ ಬ್ರಾಹ್ಮಣರು ಮತ್ತು ಸ್ಥಳೀಯ ಹಸ್ತಪ್ರತಿಗಳಿಂದ ಪಡೆದ ಜ್ಞಾನದ ಆಧಾರದ ಮೇಲೆ 1790ರಲ್ಲಿ ಲ್ಯಾಟಿನ್ ಭಾಷೆಯಲ್ಲಿ ಬರೆದ ಮೊದಲ ಮುದ್ರಿತ ಸಂಸ್ಕೃತ ವ್ಯಾಕರಣ ಇದಾಗಿದೆ. ಈ ಕೃತಿಯನ್ನು ಬರೆದ ಫಿಲಿಪ್ ವೆಜ್ಡಿನ್ ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿಗೆ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡ ಮೊದಲ ಯುರೋಪಿಯನ್ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರು. ಇದು ಕ್ರೊಯೇಷಿಯಾ ಮತ್ತು ಭಾರತದ ನಡುವಿನ ಆರಂಭಿಕ ಸಾಂಸ್ಕೃತಿಕ ಸಂಬಂಧಗಳ ಸಂಕೇತವಾಗಿದೆ” ಎಂದು ಪ್ಲೆಂಕೋವಿಕ್ ಹೇಳಿದ್ದಾರೆ.

ಇದನ್ನೂ ಓದಿ: Video: ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಬಂದಿಳಿದ ಪ್ರಧಾನಿ ಮೋದಿ

ಕ್ರೊಯೇಷಿಯಾದ ರಾಷ್ಟ್ರೀಯತೆಯ ಭಾರತಶಾಸ್ತ್ರಜ್ಞ ಇವಾನ್ ಫಿಲಿಪ್ ವೆಜ್ಡಿನ್ 1774ರಲ್ಲಿ ಮಿಷನರಿಯಾಗಿ ಮಲಬಾರ್‌ಗೆ ಬಂದರು ಮತ್ತು ನಂತರ ಮಲಬಾರ್ ಕರಾವಳಿಯಲ್ಲಿ ವಿಕಾರ್-ಜನರಲ್ ಆದರು. 1790ರಲ್ಲಿ ಮೊದಲ ಮುದ್ರಿತ ಸಂಸ್ಕೃತ ವ್ಯಾಕರಣವನ್ನು ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಸ್ಮರಣಾರ್ಥ 1999ರಲ್ಲಿ ತಿರುವನಂತಪುರದಲ್ಲಿ ಒಂದು ಫಲಕವನ್ನು ಅನಾವರಣಗೊಳಿಸಲಾಯಿತು. ಹಾಗೇ, ಕ್ರೊಯೇಷಿಯಾದ ರಾಜತಾಂತ್ರಿಕ ಸಿನೈಸ್ ಗ್ರಿಗಿಕಾ ಬರೆದ ‘ಕ್ರೊಯೇಷಿಯಾ ಮತ್ತು ಭಾರತ, ದ್ವಿಪಕ್ಷೀಯ ನ್ಯಾವಿಗೇಟರ್ ಫಾರ್ ಡಿಪ್ಲೊಮ್ಯಾಟ್ಸ್ ಆ್ಯಂಡ್ ಬಿಸಿನೆಸ್’ ಎಂಬ ಪುಸ್ತಕವನ್ನು ಪ್ಲೆಂಕೋವಿಕ್ ಪ್ರಧಾನಿ ಮೋದಿಗೆ ಹಸ್ತಾಂತರಿಸಿದ್ದಾರೆ.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಕ್ರೊಯೇಷಿಯಾಕ್ಕೆ ತಮ್ಮ ಐತಿಹಾಸಿಕ ಭೇಟಿಯನ್ನು ನೀಡಿದಾಗ ಜಾಗ್ರೆಬ್‌ನಲ್ಲಿ ಭಾರತೀಯ ಸಮುದಾಯದಿಂದ ಅಭೂತಪೂರ್ವ ಸ್ವಾಗತವನ್ನು ಪಡೆದರು. ಇದು ಈ ದೇಶಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿಯವರ 3 ರಾಷ್ಟ್ರಗಳ ಪ್ರವಾಸದ ಕೊನೆಯ ನಿಲ್ದಾಣ ಜಾಗ್ರೆಬ್ ಆಗಿದ್ದು, ಮಂಗಳವಾರ ಕನನಾಸ್ಕಿಸ್‌ನಲ್ಲಿ ನಡೆಯಲಿರುವ G7 ಶೃಂಗಸಭೆಗಾಗಿ ಕೆನಡಾಕ್ಕೆ ಹೋಗುವ ಮಾರ್ಗಮಧ್ಯೆ ಸೈಪ್ರಸ್‌ಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರನ್ನು ಫ್ರಾಂಜೊ ಟುಡ್ಮನ್ ವಿಮಾನ ನಿಲ್ದಾಣದಲ್ಲಿ ಪ್ಲೆಂಕೋವಿಕ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಇದನ್ನೂ ಓದಿ: PM Modi Croatia Visit: ಕ್ರೊಯೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವೇದ ಮಂತ್ರಗಳ ಸ್ವಾಗತ

ಪ್ರಧಾನಿ ಮೋದಿಯವರನ್ನು ನೋಡಲು ಕಾಯುತ್ತಿದ್ದ ಭಾರತೀಯ ಅನಿವಾಸಿ ಸದಸ್ಯರು, ಪ್ರಧಾನಿಯವರ ವಾಹನ ಮೆರವಣಿಗೆ ನಗರದಾದ್ಯಂತ ಸಾಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಸ್ಥಳೀಯರು ಸೇರಿದಂತೆ ನೂರಾರು ಜನರು ಪ್ರಧಾನಿ ಮೋದಿಯವರಿಗೆ ಹೋಟೆಲ್‌ ಹೊರೆಗ ಭವ್ಯ ಸ್ವಾಗತ ನೀಡಿದರು. “ಮೋದಿ-ಮೋದಿ”, “ಭಾರತ್ ಮಾತಾ ಕಿ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳ ನಡುವೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಾಯಿತು. ಹಾಗೇ, ವೇದ ಮಂತ್ರಗಳನ್ನು ಹೇಳುವ ಮೂಲಕ ಕ್ರಿಯೇಷಿಯಾದ ಜನರು ಮೋದಿಯನ್ನು ಸ್ವಾಗತಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ