ಹಾವೇರಿ, ಆ.29: ಗಣಪತಿ ಹಬ್ಬಕ್ಕೆಂದು ಹಾವೇರಿ (Haveri) ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು. ಇದೀಗ ಏಕಾಎಕಿ ಅದಕ್ಕೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣ ವಸ್ತುಗಳು ಬೆಂಕಿಗಾಹುತಿಯಾಗಿತ್ತು. ಈ ವೇಳೆ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ನಾಪತ್ತೆಯಾಗಿದ್ದರು. ಇದೀಗ ಮೂವರ ಮೃತದೇಹ ಸಿಕ್ಕಿದೆ.
ಪಟಾಕಿ ಗೋಡಾನ್ ಬೆಂಕಿ ಅವಘಡವಾಗುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ನಾಪತ್ತೆಯಾದ ಬಗ್ಗೆ ಮಾಹಿತಿ ಬಂದಿತ್ತು. ಅವರ ಪೋನ್ ಕೂಡ ಸ್ವಿಚ್ ಅಪ್ ಆದ ಹಿನ್ನಲೆ ಆತಂಕ ಹೆಚ್ಚಾಗಿತ್ತು. ಬೆಂಕಿ ಬಿದ್ದ ತಕ್ಷಣ ಸ್ಥಳದಿಂದ ಓಡಿ ಹೋದರಾ? ಅಥವಾ ಒಳಗಡೆ ಇದ್ದರೆ ಎನ್ನುವ ಆತಂಕ ಎದುರಾಗಿತ್ತು. ಇದೀಗ ದ್ಯಾಮಪ್ಪ ಓಲೇಕಾರ, ರಮೇಶ ಬಾರ್ಕಿ, ಶಿವಲಿಂಗ ಅಕ್ಕಿ ಸೇರಿ ಮೂವರ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಪಟಾಕಿ ಇಟ್ಟಿದ್ದ ಕಟ್ಟಡದ ಬಳಿ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು. ಪರಿಣಾಮ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೂರು ಗಂಟೆಗಳಿಂದ ಬೆಂಕಿ ನಂದಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಆದರೆ, ಬೆಂಕಿ ಮಾತ್ರ ಆರುತ್ತಿಲ್ಲ. ನಿರಂತರವಾಗಿ ಪಟಾಕಿ ಸಿಡಿಯುತ್ತಿದೆ. ಇದುವರೆಗೂ ಎಂಟು ಆಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸಲು ಪ್ರಯತ್ನ ಮಾಡಲಾಗಿದೆ. ಅದೃಷ್ಟವಶಾತ್ ಒಳಗಡೆ ಇದ್ದ ಸಿಲಿಂಡರ್ ತಂದಿದ್ದಕ್ಕೆ. ಯಾವುದೇ ಅವಘಡ ಸಂಭವಿಸಿಲ್ಲ. ಆಗ್ನಿಶಾಮಕ ದಳ ಸಿಬ್ಬಂದಿಯವರು ಹರಸಾಹಸ ಪಟ್ಟು ಬೆಂಕಿ ನಂದಿಸುವ ಕೆಲಸ ಮುಂದುವರೆಸಿದ್ದಾರೆ. ಈ ಘಟನೆ ಹಾವೇರಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟಾಕಿ ಅವಘಡ ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ರಘುನಂದಮೂರ್ತಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗೋಡಾನ್ಗೆ ಪರವಾನಗೆ ನೀಡಿದ್ದಾರೆಯೇ ಎಂಬ ತನಿಖೆ ನಡೆಯುತ್ತಿದ್ದು, ಪರವಾನಗೆ ಇರದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದಮೂರ್ತಿ ಹೇಳಿದರು. ಇನ್ನು ಅಗ್ನಿ ಅವಘಡ ವೇಳೆ ಓರ್ವ ಕಾರ್ಮಿಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ವಾಸಿಮ್ ಹರಿಹರ್(32) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Tue, 29 August 23