ಹಾವೇರಿ: 2.30 ಕೋಟಿ ಮೌಲ್ಯದ ವಸ್ತುಗಳನ್ನ ಮಾಲೀಕರಿಗೆ ಹಿಂದಿರುಗಿಸಿದ ಪೊಲೀಸ್; ಮೊಬೈಲ್ ಕಳ್ಳತನ ಪತ್ತೆ ಹಚ್ಚುವಲ್ಲಿ ಸಾಧನೆ
ಹಾವೇರಿ ಜಿಲ್ಲಾ ಪೊಲೀಸರು ಪ್ರಾಪರ್ಟಿ ಪರೇಡ್ ನಡೆಸಿ, ಕಳ್ಳತನವಾಗಿದ್ದ 2.3 ಕೋಟಿ ರೂ ಮೌಲ್ಯದ ಚಿನ್ನಾಭರಣ, ಹಣ, ಮೊಬೈಲ್ ಹಾಗೂ ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಎಸ್‌ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 46 ಪ್ರಕರಣಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ವಿಶೇಷವಾಗಿ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಮೊಬೈಲ್‌ಗಳನ್ನು ಪತ್ತೆ ಮಾಡಿ ಹಿಂದಿರುಗಿಸುವಲ್ಲಿ ಹಾವೇರಿ ಪೊಲೀಸರು ಸಾಧನೆ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಖ್ಯಾಂಶಗಳು
- ಹಾವೇರಿ ಜಿಲ್ಲೆ ಪೊಲೀಸರಿಂದ ಪ್ರಾಪರ್ಟಿ ಪರೇಡ್
- 2 ಕೋಟಿ 30 ಲಕ್ಷ ರೂ ಮೌಲ್ಯದ ವಸ್ತುಗಳು ಮಾಲೀಕರಿಗೆ ಹಿಂದಿರುಗಿಸಿದ ಪೊಲೀಸರು
- ಹಾವೇರಿ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ
ಹಾವೇರಿ, ಜುಲೈ 30: ಮನೆ ಕಳ್ಳತನ, ಮೊಬೈಲ್ ಕಳ್ಳತನ ಸೇರಿದಂತೆ ಅಂಗಡಿ ಮುಂದೆ ನಿಲ್ಲಿಸಿದ ಬೈಕಗಳ ಕಳ್ಳತನಕ್ಕೆ ಹಾವೇರಿ ಜನರು ಬೆಚ್ಚಿಬಿದ್ದಿದ್ದರು. ಇದೀಗ ಹಾವೇರಿ (haveri) ಜಿಲ್ಲಾ ಪೊಲೀಸರು ಕಳ್ಳರು ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಕೋಟ್ಯಂತರ ರೂ ಮೌಲ್ಯದ ಆಸ್ತಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಎಸ್‌ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ (Police property parade) ಹಣ, ಚಿನ್ನ, ಬೆಳ್ಳಿ, ಮೊಬೈಲ್ ಹಾಗೂ ವಾಹನಗಳನ್ನು ಹಸ್ತಾಂತರಿಸಲಾಗಿದೆ.
2 ಕೋಟಿ 30 ಲಕ್ಷ ರೂ. ಮೌಲ್ಯದ ವಸ್ತುಗಳು ಮಾಲೀಕರಿಗೆ ಹಸ್ತಾಂತರ
ಹಾವೇರಿಯಲ್ಲಿ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಬರೋಬ್ಬರಿ 2 ಕೋಟಿ 30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಆಯಾ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 46 ಪ್ರಕರಣಗಳಿಗೆ ಸಂಬಂಧಿಸಿದ ಹಣ, ಚಿನ್ನ, ಬೆಳ್ಳಿ, ಮೊಬೈಲ್, ಕಾರು, ಜೀಪ್ ಸೇರಿದಂತೆ ಹಲವು ವಾಹನಗಳನ್ನು ಮಾಲೀಕರಿಗೆ ಮರಳಿಸಲಾಗಿದೆ.
ಮೊಬೈಲ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಹಾವೇರಿ ಪೊಲೀಸರ ವಿಶೇಷ ಸಾಧನೆ
ಮೊಬೈಲ್ ಕಳ್ಳತನ ಪ್ರಕರಣಗಳ ಪತ್ತೆಯಲ್ಲಿ ಹಾವೇರಿ ಪೊಲೀಸರು ವಿಶೇಷ ಸಾಧನೆ ಮಾಡಿದ್ದು, ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಖ್ಯೆಯ ಮೊಬೈಲ್‌ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳ್ಳತನವಾಗಿದ್ದ 2527 ಮೊಬೈಲ್‌ಗಳನ್ನು ಪೊಲೀಸರು ಬ್ಲಾಕ್ ಮಾಡಿದ್ದು, ಇದುವರೆಗೆ 2014 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ 539 ಮೊಬೈಲ್‌ಗಳನ್ನು ಈಗಾಗಲೇ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳ್ಳತನವಾಗಿದ್ದ 16 ವಾಹನಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿನ ಖಜಾನೆ ಕಂಡು ಅಧಿಕಾರಿಗಳಿಗೆ ದಿಗ್ಭ್ರಮೆ: ಸಿಕ್ಕಿದ್ದು 28 ಕೋಟಿ ನಗದು, 15 ಕೆಜಿ ಚಿನ್ನ!
ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ 1 ಕೋಟಿ 19 ಲಕ್ಷ ರೂ. ಮೌಲ್ಯದ 1088 ಗ್ರಾಂ ಚಿನ್ನವನ್ನೂ ಮಾಲೀಕರಿಗೆ ಮರಳಿಸಲಾಗಿದೆ. ಜೊತೆಗೆ ಸುಮಾರು 35 ಲಕ್ಷ ರೂ ಮೌಲ್ಯದ ಬೆಳ್ಳಿಯನ್ನೂ ಹಸ್ತಾಂತರಿಸಲಾಗಿದೆ. ಕಳ್ಳತನ ಪ್ರಕರಣಗಳ ಶೀಘ್ರ ಪತ್ತೆ, ಕಳೆದುಹೋದ ವಸ್ತುಗಳ ಮರುಪಡೆಯುವಿಕೆ ಹಾಗೂ ಸಾರ್ವಜನಿಕರ ಆಸ್ತಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ಹಾವೇರಿ ಜಿಲ್ಲಾ ಪೊಲೀಸರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




