ಗಂಡನನ್ನು ಹತ್ಯೆ ಮಾಡಿಸಿದ ಹೆಂಡತಿ: ಎರಡೂವರೆ ತಿಂಗಳ ನಂತರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮೃತ ಸಕ್ರಪ್ಪ ಲಮಾಣಿ ಮತ್ತು ಶೀಲವ್ವಳ ಮದುವೆಯಾಗಿ ಹಲವು ವರ್ಷಗಳೆ ಕಳೆದಿವೆ. ಇಬ್ಬರು ಮಕ್ಕಳಿದ್ದಾರೆ. ಆದ್ರೆ ಶೀಲವ್ವಳಿಗೆ ಗ್ರಾಮದಲ್ಲೇ ವಾಸವಾಗಿದ್ದ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಸುರೇಶ ಮಿರ್ಜಿ ಅನ್ನೋವನ ಜೊತೆ ಅನೈತಿಕ ಸಂಬಂಧ ಕುದುರಿತ್ತು. ಸುರೇಶ ಕೂಡ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಆಕೆಗೆ ಮದುವೆಯಾಗಿ ಪತಿ ಮತ್ತು ಇಬ್ಬರು ಮಕ್ಕಳಿದ್ದರು. ಆದ್ರೆ ಆಕೆ ವಿವಾಹಿತನಾಗಿದ್ದ ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಪರಪುರುಷನ ಜೊತೆಗಿನ ಅನೈತಿಕ ಸಂಬಂಧಕ್ಕಾಗಿ ಆಕೆ ಪತಿಯನ್ನೆ ಹತ್ಯೆ ಮಾಡಿಸಿ ಪತಿ ದುಡಿಯೋಕೆ ಹೋಗಿದ್ದಾನೆ ಅನ್ನೋ ನಾಟಕ ಆಡಿದ್ದಳು. ಆದ್ರೆ ಎರಡೂವರೆ ತಿಂಗಳ ನಂತರ ಪತಿಯನ್ನು ಹತ್ಯೆ ಮಾಡಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಅದು ಆಗಸ್ಟ್ 25,2022. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಇರೋ ಹಳ್ಳದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಹಳ್ಳದಲ್ಲಿ ನೀರು ಹರಿಯೋ ಸ್ಥಳದ ಪಕ್ಕದಲ್ಲಿದ್ದ ಸಂಪೂರ್ಣ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೇವಲ ಎರಡು ಕಾಲುಗಳ ಭಾಗ ಬಿಟ್ರೆ ಉಳಿದೆಲ್ಲವೂ ಸುಟ್ಟು ಗುರುತೆ ಸಿಗದಂತಾಗಿತ್ತು. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹ ಇರೋ ಮಾಹಿತಿ ತಿಳಿದ ತಡಸ ಪೊಲೀಸ್ ಠಾಣೆ ಹಾಗೂ ಶಿಗ್ಗಾಂವಿ ವೃತ್ತದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನಂತರ ಅಪರಿಚಿತ ವ್ಯಕ್ತಿಯ ಕೊಲೆ ಅನ್ನೋ ಪ್ರಕರಣ ದಾಖಲಿಸಿಕೊಂಡಿತ್ತು.
ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ರು. ಮೃತದೇಹ ಪತ್ತೆಯಾಗಿದ್ದ ಅಕ್ಕಪಕ್ಕದ ಗ್ರಾಮಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿದ್ರು. ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕೇಸ್ ಗಳನ್ನು ಪರಿಶೀಲನೆ ಮಾಡ್ತಿದ್ರು. ಆದ್ರೆ ಮೃತದೇಹ ಪತ್ತೆಯಾಗಿ ಎರಡು ತಿಂಗಳುಗಳು ಕಳೆದ್ರೂ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಆಗ್ಲಿಲ್ಲ.
ಆದ್ರೆ ಪ್ರಕರಣದ ತನಿಖೆಗೆ ಇಳಿದಿದ್ದ ಶಿಗ್ಗಾಂವಿ ಸಿಪಿಐ ಬಸವರಾಜ ಹಳಬಣ್ಣವರ ನೇತೃತ್ವದ ಪೊಲೀಸ್ ತಂಡದಲ್ಲಿದ್ದ ಪೊಲೀಸ್ ಕಾನಸ್ಟೇಬಲ್ ವೆಂಕಟೇಶ ಲಮಾಣಿ ಅವರು ಕೊಲೆಯಾದವನ ಗುರುತು ಪತ್ತೆಗಾಗಿ ಸಾಕಷ್ಟು ಪ್ರಯತ್ನ ಮಾಡ್ತಿದರು. ತಮಗೆ ಪರಿಚಯ ಇರೋ ಗ್ರಾಮಗಳು ಹಾಗೂ ತಾಂಡಾಗಳಲ್ಲಿ ಯಾರಾದ್ರೂ ಬಹಳ ದಿನಗಳಿಂದ ಕಾಣೆ ಆಗಿರೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಲೇ ಇದ್ರು. (ವರದಿ: ಪ್ರಭುಗೌಡ ಎನ್. ಪಾಟೀಲ, ಟಿವಿ 9, ಹಾವೇರಿ)
ದೀಪಾವಳಿ ಹಬ್ಬಕ್ಕೆ ಬರದಿದ್ದಕ್ಕೆ ಬಲವಾಯ್ತು ಸಂಶಯ
ಸಾಮಾನ್ಯವಾಗಿ ಲಂಬಾಣಿ ತಾಂಡಾಗಳಲ್ಲಿನ ಜನರು ಕೆಲಸ ಅರಸಿಕೊಂಡು ದೂರದ ಊರುಗಳಿಗೆ ಹೋಗಿರ್ತಾರೆ. ಯಾರು ಎಲ್ಲಿಗೆ ದುಡಿಯೋಕೆ ಹೋದ್ರೂ ದೀಪಾವಳಿ ಹಬ್ಬಕ್ಕೆ ಊರಿಗೆ ಬಂದೇ ಬರ್ತಾರೆ. ಆದ್ರೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ 40 ವರ್ಷದ ಸಕ್ರಪ್ಪ ಲಮಾಣಿ ಎನ್ನುವ ವ್ಯಕ್ತಿ ದೀಪಾವಳಿ ಹಬ್ಬಕ್ಕೆ ಊರಿಗೆ ಬರಲೇ ಇಲ್ಲ. ಆಗಸ್ಟ್ ತಿಂಗಳಲ್ಲಿ ಮನೆಯಿಂದ ನಾಪತ್ತೆಯಾಗಿದ್ದ ಸಕ್ರಪ್ಪ ಎಲ್ಲಿಯೋ ದುಡಿಯೋಕೆ ಹೋಗಿರಬೇಕು ಅಂತಲೆ ಸಕ್ರಪ್ಪನ ಸಂಬಂಧಿಕರು ಹಾಗೂ ತಾಂಡಾದ ಜನರು ಭಾವಿಸಿದ್ರು.
ಸಕ್ರಪ್ಪ ಆಗಸ್ಟ್ ತಿಂಗಳಲ್ಲಿ ಮನೆಯಿಂದ ನಾಪತ್ತೆ ಆಗ್ತಿದ್ದಂತೆ ಸಕ್ರಪ್ಪನ ಸಂಬಂಧಿಕರು ಹಾಗೂ ತಾಂಡಾದ ಜನರು ಸಕ್ರಪ್ಪನ ಪತ್ನಿ ಶೀಲವ್ವಳನ್ನು ವಿಚಾರಿಸಿದ್ರು. ಶೀಲವ್ವ ಪತಿ ಸಕ್ರಪ್ಪ ದುಡಿಯೋಕೆ ಹೋಗಿದ್ದಾನೆ ಅಂತಾ ಇಲ್ಲದ ಕತೆ ಹೇಳಿದ್ಲು. ಸಾಲದ್ದಕ್ಕೆ ಪತಿ ದುಡಿಯೋಕೆ ಹೋಗಿದ್ದಾನೆ ಅಂತಾ ಆತನ ಮೊಬೈಲ್ ನಂಬರ್‌ನಿಂದ ಕೇಳಿದವರಿಗೆ ಸಕ್ರಪ್ಪನ ಆಧಾರ ಕಾರ್ಡ್ ಹಾಗೂ ಮತ್ತಿತರೆ ದಾಖಲೆಗಳನ್ನು ಹಾಕಿದ್ಲು. ಆದ್ರೆ ದುಡಿಯೋಕೆ ಹೋಗಿದ್ದಾನೆ ಅಂದುಕೊಂಡಿದ್ದ ಸಕ್ರಪ್ಪ ದೀಪಾವಳಿ ಹಬ್ಬಕ್ಕೆ ಊರಿಗೆ ಬರ್ಲೇ ಇಲ್ಲ. ಆಗ್ಲೂ ಸಕ್ರಪ್ಪನ ಪತ್ನಿ ಶೀಲವ್ವ ಮಾತ್ರ ಪತಿ ದುಡಿಯೋಕೆ ಹೋಗಿದ್ದಾನೆ ಅಂತಲೆ ಇಲ್ಲದ ಕತೆ ಹೇಳಿದ್ಲು.
ಕಾಲಿನ ಮೇಲಿನ ಗಾಯದ ಗುರುತುಗಳಿಂದ ಪತ್ತೆಯಾಯ್ತು ಹತ್ಯೆಯಾದವನ ಗುರುತು
ಸಕ್ರಪ್ಪ ಲಮಾಣಿ ದೀಪಾವಳಿ ಹಬ್ಬಕ್ಕೆ ಬರದೇ ಇರೋದ್ರಿಂದ ಹಾಗೂ ಸಕ್ರಪ್ಪನ ಪತ್ನಿ ಶೀಲವ್ವಳ ಹಾವಭಾವಗಳ ಮೇಲೆ ಸಂಶಯಗೊಂಡ ಸಕ್ರಪ್ಪನ ಸಂಬಂಧಿಕರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ರು. ಹೀಗೆ ಮಿಸ್ಸಿಂಗ್ ಕೇಸ್ ದಾಖಲಿಸ್ತಿರೋ ವಿಷಯ ಶಿಗ್ಗಾಂವಿ ಪೊಲೀಸ್ ಠಾಣೆ ಪೊಲೀಸರಿಗೆ ಗೊತ್ತಾಗಿತ್ತು. ಮಿಸ್ಸಿಂಗ್ ಕೇಸ್ ದಾಖಲಾದ ವಿಷಯ ತಿಳಿತಿದ್ದಂತೆ ಪೊಲೀಸರು ಅಲ್ಲಿಗೆ ಎಂಟ್ರಿ ಕೊಟ್ಟಿದ್ರು. ಮಿಸ್ಸಿಂಗ್ ಕೇಸ್ ದಾಖಲಿಸಿದವರನ್ನು ಠಾಣೆಗೆ ಕರೆಯಿಸಿ ಆಗಸ್ಟ್ 25, 2022ರಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಮಾಹಿತಿ ನೀಡಿದ್ರು.
ಆದ್ರೆ ಮೃತದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಮೃತದೇಹದ ಗುರುತು ಸಿಗೋದು ಕಷ್ಟಕರವಾಗಿತ್ತು. ಆದ್ರೆ ಪೊಲೀಸರ ಬಳಿ ಮೃತದೇಹದ ಅಲ್ಪಸ್ವಲ್ಪ ಕಾಲಿನ ಭಾಗ ಮಾತ್ರ ಉಳಿದುಕೊಂಡಿತ್ತು. ಉಳಿದಿದ್ದ ಕಾಲಿನ ಭಾಗವನ್ನು ಸಕ್ರಪ್ಪನ ಸಂಬಂಧಿಕರಿಗೆ ತೋರಿಸಿದ್ರು. ಆಗ ಕಾಲಿನ ಮೇಲಿದ್ದ ಎರಡು ಗಾಯದ ಗುರುತುಗಳು ಮೃತದೇಹ ಸಕ್ರಪ್ಪನದೆ ಅನ್ನೋದನ್ನು ಖಚಿತ ಮಾಡಿತು. ಯಾವಾಗ ಹಳ್ಳದ ಬಳಿ ಸುಟ್ಟು ಹಾಕಿದ್ದ ಮೃತದೇಹ ಸಕ್ರಪ್ಪನದೆ ಅನ್ನೋ ಮಾಹಿತಿ ಸಿಕ್ತೋ ಆಗಲೇ ಪೊಲೀಸರು ಇದೊಂದು ಪ್ರಿಪ್ಲಾನ್ಡ್ ಮರ್ಡರ್ ಅಂತಾ ಪ್ರಕರಣದ ಬೆನ್ನು ಬಿದ್ದು ತನಿಖೆಗೆ ಇಳಿದ್ರು.
ಪತಿಯನ್ನೆ ಹತ್ಯೆ ಮಾಡಿಸಿದ್ದ ಪತ್ನಿ
ಸಕ್ರಪ್ಪ ಲಮಾಣಿ ಮತ್ತು ಶೀಲವ್ವಳ ಮದುವೆಯಾಗಿ ಹಲವು ವರ್ಷಗಳೆ ಕಳೆದಿವೆ. ಇಬ್ಬರು ಮಕ್ಕಳಿದ್ದಾರೆ. ಆದ್ರೆ ಶೀಲವ್ವಳಿಗೆ ಗ್ರಾಮದಲ್ಲೇ ವಾಸವಾಗಿದ್ದ ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಸುರೇಶ ಮಿರ್ಜಿ ಅಲಿಯಾಸ್ ಲಮಾಣಿ ಅನ್ನೋವನ ಜೊತೆ ಅನೈತಿಕ ಸಂಬಂಧ ಕುದುರಿತ್ತು. ಸುರೇಶ ಕೂಡ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದ್ರೂ ಸುರೇಶ ಮತ್ತು ಸಕ್ರಪ್ಪನ ಪತ್ನಿ ಶೀಲವ್ವಳ ನಡುವೆ ಅನೈತಿಕ ಸಂಬಂಧವಿತ್ತು. ಪತ್ನಿ ಶೀಲವ್ವಳ ಅನೈತಿಕ ಸಂಬಂಧದ ವಿಚಾರ ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ. ಪತ್ನಿಯ ಅನೈತಿಕ ಸಂಬಂಧದ ವಿಷಯ ಪತಿ ಸಕ್ರಪ್ಪನಿಗೆ ಗೊತ್ತಾಗಿ ಹೋಗಿತ್ತು. ಹೀಗಾಗಿ ಪತಿ ಸಕ್ರಪ್ಪ ಆಗಾಗ ಪತ್ನಿಗೆ ಅನೈತಿಕ ಸಂಬಂಧದ ವಿಚಾರವಾಗಿ ಗಲಾಟೆ ಮಾಡ್ತಿದ್ನಂತೆ. ಇದ್ರಿಂದ ಅನೈತಿಕ ಸಂಬಂಧ ಹೊಂದಿದ್ದ ಸುರೇಶನ ಜೊತೆ ಸೇರಿ ಪತಿಯನ್ನೆ ಮುಗಿಸೋಕೆ ಶೀಲವ್ವ ಪ್ಲಾನ್ ಮಾಡಿದ್ಲು.
ಹಣ ನೀಡಿ ಎಣ್ಣೆ ಹೊಡೆಸಿದೋಗಿ ಕರೆದೊಯ್ದು ಕೃತ್ಯ ಎಸಗಿದ್ದ ಆರೋಪಿಗಳು ಹತ್ಯೆಯಾಗಿರೋ ಸಕ್ರಪ್ಪನಿಗೆ ಕುಡಿತದ ಚಟವಿತ್ತು. ಅಲ್ಲಿ ಇಲ್ಲಿ ಸಾಲ ಮಾಡಿಕೊಂಡಿದ್ದರಿಂದ ಹಣಕಾಸಿನ ಅಗತ್ಯ ಇತ್ತಂತೆ. ಇದನ್ನೇ ಬಂಡವಾಳ ಮಾಡ್ಕೊಂಡು ಸಕ್ರಪ್ಪನ ಹತ್ಯೆಗೆ ಸಂಚು ರೂಪುಗೊಂಡಿತ್ತು. ಆದ್ರೆ ಅದು ಸಕ್ರಪ್ಪನಿಗೆ ಮಾತ್ರ ಗೊತ್ತಿರ್ಲಿಲ್ಲ. ಅದು ಆಗಸ್ಟ್ 23, 2022. ಸಕ್ರಪ್ಪನನ್ನು ಸುವರ್ಣಗಿರಿ ತಾಂಡಾದಿಂದ ಸುರೇಶ ಮಿರ್ಜಿ ಅಲಿಯಾಸ್ ಲಮಾಣಿ, ಗೋದಪ್ಪ ಅಲಿಯಾಸ್ ಗೋಪಿ ಲಮಾಣಿ ಹಾಗೂ ಚಂದ್ರಪ್ಪ ಮಿರ್ಜಿ ಕರೆದುಕೊಂಡು ಬರ್ತಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಇರೋ ಡಾಬಾದಲ್ಲಿ ನಾಲ್ವರೂ ಕೂಡಿಕೊಂಡು ಕಂಠಪೂರ್ತಿ ಕುಡಿದು, ಭರ್ಜರಿ ಊಟ ಮಾಡುತಾರೆ. ನಂತರ ಗ್ರಾಮದ ಬಳಿ ಇರೋ ಹಳ್ಳದ ಬಳಿ ಹೋಗಿ ಕೆಲಕಾಲ ಕುಳಿತುಕೊಳ್ತಾರೆ. ಆಗ ಸುರೇಶ ತಂದಿದ್ದ ಕೊಡಲಿಯಿಂದ ಸಕ್ರಪ್ಪನ ಮೇಲೆ ಹಲ್ಲೆ ಮಾಡ್ತಾನೆ. ಕೊಡಲಿ ಏಟಿಗೆ ಸಕ್ರಪ್ಪ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ನಂತರ ಸುರೇಶ, ಗೋದಪ್ಪ ಮತ್ತು ಚಂದ್ರಪ್ಪ ಮೂವರು ಸೇರಿಕೊಂಡು ಮೃತದೇಹವನ್ನು ಹಳ್ಳದ ಬಳಿ ಇದ್ದ ಪೊದೆಯೊಂದರಲ್ಲಿ ಯಾರಿಗೂ ಕಾಣದಂತೆ ಮುಚ್ಚಿಟ್ಟು ಅಲ್ಲಿಂದ ಪರಾರಿ ಆಗ್ತಾರೆ.
ಮುಚ್ಚಿಟ್ಟಿದ್ದ ಮೃತದೇಹ ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದ ಆರೋಪಿಗಳು:
ಸಕ್ರಪ್ಪನನ್ನು ಹತ್ಯೆ ಮಾಡಿರೋ ವಿಷಯವನ್ನು ಸುರೇಶ ಶೀಲವ್ವಳಿಗೆ ತಿಳಿಸ್ತಾನೆ. ಆದ್ರೆ ಮೃತದೇಹ ಮುಚ್ಚಿಟ್ರೆ ಬೆಳಕಿಗೆ ಬರುತ್ತೆ ಅನ್ನೋದು ಗೊತ್ತಾಗುತ್ತೆ. ಹೀಗಾಗಿ ಆಗಸ್ಟ್ 24, 2022ರಂದು ಸುರೇಶ ಮಿರ್ಜಿ ಅಲಿಯಾಸ್ ಲಮಾಣಿ, ಗೋದಪ್ಪ ಅಲಿಯಾಸ್ ಗೋಪಿ ಲಮಾಣಿ, ಚಂದ್ರಪ್ಪ ಮಿರ್ಜಿ ಹಾಗೂ ಸುರೇಶನ ಸ್ನೇಹಿತರಾದ ವಿನಾಯಕ ಮಿರ್ಜಿ, ಸತ್ಯಪ್ಪ ಅಲಿಯಾಸ್ ಮುದುಕಪ್ಪ ಸತ್ಯಪ್ಪನವರ, ನಾಗಪ್ಪ ಹೊನ್ನಾಪುರ ಸೇರಿಕೊಂಡು ಮೃತದೇಹ ಮುಚ್ಚಿಟ್ಟಿದ್ದ ಸ್ಥಳಕ್ಕೆ ಬರ್ತಾರೆ.
ಆರೂ ಜನರು ಕೂಡಿಕೊಂಡು ಬರುವಾಗ ಮೃತದೇಹ ಸುಟ್ಟು ಸಾಕ್ಷ್ಯ ನಾಶ ಮಾಡೋ ಪ್ಲಾನ್ ಮಾಡ್ಕೊಂಡು ಬಂದಿರ್ತಾರೆ. ಅದ್ರಂತೆ ಬರುವಾಗ ಪೆಟ್ರೋಲ್, ಪಂಕ್ಚರ್ ಶಾಪ್ ನಲ್ಲಿ ಮೃತದೇಹ ಸುಡೋಕೆ ಅಂತಲೆ ಟೈರ್ ತೆಗೆದುಕೊಂಡು ಬಂದಿರ್ತಾರೆ. ರಾತ್ರಿ ಸಮಯದಲ್ಲಿ ಅಲ್ಲಿ ಯಾರೂ ಓಡಾಡದ್ದನ್ನು ಗಮನಿಸಿ ಮೃತದೇಹ ಮುಚ್ಚಿಟ್ಟಿದ್ದ ಸ್ಥಳಕ್ಕೆ ಬರ್ತಾರೆ. ಮೃತದೇಹವನ್ನು ಪೊದೆಯಿಂದ ಹಳ್ಳದ ಪಕ್ಕದಲ್ಲಿ ಹಾಕಿ ಟೈರ್ ನಲ್ಲಿಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ತಾರೆ. ಮೃತದೇಹ ಸುಟ್ಟು ಗುರುತು ಸಿಗದಂತಾದ್ಮೇಲೆ ಎಲ್ಲರೂ ಅಲ್ಲಿಂದ ಕಾಲ್ಕಿತ್ತುತ್ತಾರೆ. ನಂತರ ಅವರವರ ಪಾಡಿಗೆ ಅವರು ಏನೂ ನಡೆದೆ ಇಲ್ಲ ಅನ್ನೋ ರೀತಿಯಲ್ಲಿ ಸುವರ್ಣಗಿರಿ ಮತ್ತು ನೀರಲಗಿ, ತಿಮ್ಮಾಪುರ ಗ್ರಾಮದಲ್ಲಿ ಓಡಾಡಿಕೊಂಡಿರ್ತಾರೆ.
ಮಿಸ್ಸಿಂಗ್ ಕೇಸ್ ದಾಖಲಾದ್ಮೇಲೆ ಸಕ್ರಪ್ಪನ ಮೃತದೇಹ ಅನ್ನೋದು ಗೊತ್ತಾದ್ಮೇಲೆ ತನಿಖೆಗೆ ಇಳಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಸಕ್ರಪ್ಪನ ಪತ್ನಿ ಸುರೇಶನ ಜೊತೆ ಹೊಂದಿದ್ದ ಅನೈತಿಕ ಸಂಬಂಧದಿಂದಲೆ ಸುರೇಶನ ಜೊತೆ ಸೇರಿಕೊಂಡು ಪತಿಯನ್ನು ಹತ್ಯೆ ಮಾಡಿಸಿರೋದು ಬೆಳಕಿಗೆ ಬಂದಿದೆ. ಪತಿಯನ್ನು ಹತ್ಯೆ ಮಾಡಿಸಿದ ಶೀಲವ್ವ, ಶೀಲವ್ವಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಸಕ್ರಪ್ಪನನ್ನು ಹತ್ಯೆ ಮಾಡಿದ ಸುರೇಶ ಹಾಗೂ ಸಕ್ರಪ್ಪನ ಹತ್ಯೆಗೆ ಸಹಕರಿಸಿದ ಹಾಗೂ ಸಾಕ್ಷ್ಯ ನಾಶ ಮಾಡಲು ಸಹಕಾರ ನೀಡಿದ ಚಂದ್ರಪ್ಪ, ವಿನಾಯಕ, ಸತ್ಯಪ್ಪ, ಗೋದಪ್ಪ ಹಾಗೂ ನಾಗಪ್ಪ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳು ಈಗ ಜೈಲು ಸೇರಿದ್ದಾರೆ. ಗುರುತು ಸಿಗದಂತಿದ್ದ ಮತ್ತು ಮುಚ್ಚಿ ಹೋಗಬಹುದಾಗಿದ್ದ ಪ್ರಕರಣವನ್ನು ಪತ್ತೆ ಮಾಡಿದ ಶಿಗ್ಗಾಂವಿ ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್ಐ ಸಂಪತ್ ಹಾಗೂ ಅವರ ತಂಡಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಕ್ರಪ್ಪನ ಮನೆಯವರು ಭೇಷ್ ಅಂದಿದ್ದಾರೆ.