ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಕಿಚ್ಚು: ಸಿಡಿದೆದ್ದ ಅನ್ನದಾತರು, ರಾಜ್ಯಾದ್ಯಂತ ಪ್ರತಿಭಟನೆಯ ಸುಳಿವು

ರಾಜ್ಯಾದ್ಯಂತ ಹೊತ್ತಿಕೊಂಡಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆಯ ಜ್ವಾಲೆಯನ್ನು ಸರ್ಕಾರ ಆರಿಸಿತ್ತು. ಇದೀಗ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ರೊಚ್ಚಿಗೆದ್ದಿದ್ದಾರೆ. ಅಹೋರಾತ್ರಿ ಧರಣಿ ನಡೆಸುತ್ತಿರುವ ಮಣ್ಣಿನ ಮಕ್ಕಳು ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ. ಇದರೊಂದಿಗೆ, ಇನ್ನೇನು ಬೆಳಗಾವಿ ಅಧಿವೇಶನಕ್ಕೆ ಕೆಲವೇ ದಿನಗಳಿರುವಾಗ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಕಿಚ್ಚು: ಸಿಡಿದೆದ್ದ ಅನ್ನದಾತರು, ರಾಜ್ಯಾದ್ಯಂತ ಪ್ರತಿಭಟನೆಯ ಸುಳಿವು
ಹಾವೇರಿಯಲ್ಲಿ ರೈತರ ಪ್ರತಿಭಟನೆ

Updated on: Nov 29, 2025 | 6:47 AM

ಹಾವೇರಿ, ನವೆಂಬರ್ 29: ಬೆಳಗಾವಿಯಲ್ಲಿಕಬ್ಬು ಬೆಳೆಗಾರರ ಪ್ರತಿಭಟನೆಯ ಕಿಚ್ಚು ಹೊತ್ತಿ ಉರಿದಿತ್ತು. ಗಲ್ಲಿ ಗಲ್ಲಿಯಲ್ಲೂ ಆಕ್ರೋಶದ ಜ್ವಾಲೆ ಹೊತ್ತಿತ್ತು. ಇದೀಗ ರಾಜ್ಯ ಸರ್ಕಾರಕ್ಕೆ ಮೆಕ್ಕೆಜೋಳದ ಬಿಸಿ ತಟ್ಟಿದೆ. ಹಾವೇರಿ (Haveri) ಜಿಲ್ಲೆಯಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಾರೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ರೈತರು ಕಳೆದ 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಸರ್ಕಾರ 2400 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ಜಿಲ್ಲೆಯಲ್ಲಿ ಖರೀದಿ ಕೇಂದ್ರವನ್ನು ತೆರೆಯುಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಇನ್ನು, ರೈತರ ಹೋರಾಟಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಶೇಕಡಾ 80 ರಷ್ಟು ಮೆಕ್ಕೆಜೋಳ ಬೆಳೆಯಲಾಗಿದೆ. ಪ್ರತಿ ಎಕರೆಗೆ 20 ರಿಂದ 30 ಸಾವಿರ ಖರ್ಚು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಪ್ರತೀ ಕ್ವಿಂಟಾಲ್​ಗೆ 1700 ರಿಂದ 1800 ರೂಪಾಯಿ ನೀಡಲಾಗುತ್ತಿದೆ. ಕಡಿಮೆ ಬೆಲೆಗೆ ಮಾರಾಟ ಮಾಡಿ ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳಕ್ಕೆ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಸಭೆ

ಇನ್ನು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರಕ್ಕೆ ಆಗ್ರಹಿಸಿ ರೈತರು ಬೀದಿಗಿಳಿದಿದ್ದಾರೆ. ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಭೆ ನಡೆಸಿದ್ದಾರೆ. ಮೆಕ್ಕೆಜೋಳದ ನಾಫೆಡ್ ಪೂರ್ವ ನಿರ್ಧಾರಿತ ಖರೀದಿ ಬೆಲೆ ಕ್ವಿಂಟಲ್‌ಗೆ 2,639 ರೂಪಾಯಿ ಇದ್ದು, ಇದರಲ್ಲಿ ಪ್ರತಿ ಕ್ವಿಂಟಲ್‌ಗೆ 2,400 ರೂ. ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರಿಗೆ ನೇರವಾಗಿ ಪಾವತಿಯಾಗಲಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿಗೆ ಡಿಸ್ಟಿಲರಿಗಳಿಗೆ ಅವಕಾಶವನ್ನು ನೀಡಲಾಗಿದೆ. ಈ ಕುರಿತು ಡಿಸ್ಟಿಲರಿಗಳು ನಿರ್ಧಾರ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ಧಾನ್ಯ ಆಧಾರಿತ ಡಿಸ್ಟಿಲರಿ ನಾಫೆಡ್/ಎನ್‌ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಪ್ರಮಾಣಿತ ಕಾರ್ಯವಿಧಾನ ಹೊರಡಿಸಿದೆ. ಇದರ ಪ್ರಕಾರ ಎಲ್ಲ ಡಿಸ್ಟಿಲರಿಗಳು ಕಾರ್ಯ ನಿರ್ವಹಿಸಬೇಕಾಗಿದೆ.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಏರ್​ಪೋರ್ಟ್​​ಗೆ ಆಗಮಿಸಿದ್ದ ವೇಳೆ ಸಚಿವ ದಿನೇಶ್ ಗುಂಡೂರಾವ್ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಸಂಬಂಧ ಮನವಿ ಪತ್ರ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪರವಾಗಿ ಮೋದಿಗೆ ಮನವಿ ಪತ್ರ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ದರ ನಿಗದಿ ಮಾಡಬೇಕೆಂದು ಅಗ್ರಹಿಸಿದ್ದಾರೆ.

ಇದನ್ನೂ ಓದಿ: ಕಬ್ಬು ಆಯ್ತು ಭತ್ತ, ಮೆಕ್ಕೆಜೋಳ ಬೆಂಬಲ ಬೆಲೆಗೆ ಆಗ್ರಹ: ಮತ್ತೆ ರಸ್ತೆಗಿಳಿದ ರಾಜ್ಯದ ರೈತರು

ಗದಗ, ದಾವಣಗೆರೆಯಲ್ಲೂ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಹೋರಾಟದ ಬೆಂಕಿ ಹೊತ್ತಿ ಉರಿಯುತ್ತಿದೆ. ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಉಗ್ರರೂಪ ಪಡೆಯು ಸಾಧ್ಯತೆ ಇದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ