ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಇಂದು(ಜ.8) ಅದ್ಧೂರಿ ತೆರೆ ಬಿದ್ದಿದೆ. ಈ ವೇಳೆ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಸಾಹಿತಿಗಳನ್ನ ದೂರವಿಡಲಾಗಿದೆ ಎಂಬ ಬಿ.ಕೆ. ಹರಿಪ್ರಸಾದ (Hariprasad) ಆರೋಪಕ್ಕೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಮಾರೋಪ ಸಮಾರಂಭ ಸ್ಪಷ್ಟನೆ ನೀಡಿದರು. ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳ ದೂರ ಇಟ್ಟಿದ್ದಾರೆಂದು ಹೇಳಿದ್ದಾರೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ಮುಸ್ಲಿಮರಿಗೆ ಅವಕಾಶ ನೀಡಿದ್ದೇವೆ. ನಾನು ಸಂತ ಶಿಶುನಾಳ ಶರೀಫ್‌ರ ನಾಡಿನಲ್ಲಿ ನಿಂತಿದ್ದೇನೆ. ಶರೀಫ್‌ರ ನಾಡಿನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡುತ್ತೇವೆಯೇ ಎಂದು ಪ್ರಶ್ನಿಸಿದರು. ನಾವು ಧರ್ಮಾಧಾರಿತ, ಜಾತಿ ಆಧಾರಿತ ಸಮ್ಮೇಳನ ಮಾಡುತ್ತಿಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ. ನಾವು ಇಲ್ಲಿ ಮೊದಲು ಕನ್ನಡದವನಾಗಿ ಸಮ್ಮೇಳನ ಮಾಡಿದ್ದೇವೆ ಎಂದು ಮಹೇಶ್ ಜೋಶಿ ಸ್ಪಷ್ಟನೆ ನೀಡಿದರು.
ಸಮಾರೋಪದಲ್ಲಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಾಹಿತ್ಯ ಲೋಕಕ್ಕೆ ಹಾವೇರಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇವತ್ತು ಜಾತಿ, ಧರ್ಮ, ಭ್ರಷ್ಟಾಚಾರದಿಂದ ರಾಜಕೀಯ ಕೂಡಿದೆ. ಸಾಹಿತಿಗಳು ಇದನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ಹಣ, ಹೆಂಡ ಹಂಚುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: 6 ನಿರ್ಣಯ ಮಂಡನೆ
ರಾಜಕಾರಣಿಗಳು ಮಾಡಿದ ತಪ್ಪನ್ನು ಸಾಹಿತಿಗಳು ಮಾಡಬಾರದು. ಈ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಸಾಹಿತಿಗಳನ್ನ ದೂರವಿಡಲಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಪ್ರತ್ಯೇಕ ಸಮ್ಮೇಳನವನ್ನು ಮಾಡಲಾಯ್ತು. ಆಮಂತ್ರಣ ಪತ್ರಿಕೆ ನೋಡಿದ್ರೆ ಸತ್ಯ ಎನ್ನಿಸುತ್ತದೆ. ಕಸಾಪ ರಾಜ್ಯಾಧ್ಯಕ್ಷರು ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಇನ್ನು ಕೇಂದ್ರ ಸಚಿವ ಪ್ರಹ್ಹಾದ್ ಜೋಶಿ ಮಾತನಾಡಿ, ಸಂತ ಸತ್ಪುರುಷರ ಪುಣ್ಯಭೂಮಿ ಹಾವೇರಿ. ಇಲ್ಲಿ ಸಾಹಿತ್ಯ ಸಮ್ಮೇಳನ ನಡೆದಿದ್ದು ಸಂತಸದ ಸಂಗತಿ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಾಗಿ 25 ವರ್ಷ ಕಳೆದಿದೆ. ಈ ವೇಳೆ ಸಾಹಿತ್ಯ ಸಮ್ಮೇಳನ ನಡೆದಿದ್ದು ನನಗೆ ಸಂತೋಷ ತಂದಿದೆ. ನಮ್ಮಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳು ಹೋಗುತ್ತಿಲ್ಲ, ಪೋಷಕರು ಒಪ್ಪುತ್ತಿಲ್ಲ. ಬೇರೆ ಭಾಷೆ ಕಲಿಯುವುದಕ್ಕೆ ನನ್ನ ವಿರೋಧವಿಲ್ಲ. ಎನ್ಇಪಿಯಲ್ಲಿ ಸ್ಥಳೀಯ ಭಾಷೆಗಳಿಗೆ ನಾವು ಆದ್ಯತೆ ಕೊಟ್ಟಿದ್ದೇವೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರು, ಖ್ಯಾತ ಸಾಹಿತಿಗಳು ಈ ಜಿಲ್ಲೆಯವರಿದ್ದಾರೆ. ಕನ್ನಡ ದೀಪ ಹಚ್ಚಿದ ಮಹನೀಯರು ಓಡಾಡಿದ ನೆಲ ಹಾವೇರಿ. ಮೂರೂ ದಿನ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನ ಬಂದಿದ್ದೀರಿ. ಕನ್ನಡದ ಅಭಿಮಾನ ಇರುವುದು ಹಳ್ಳಿಗಳಲ್ಲಿ ಅಂತಾ ಇದು ತೋರಿಸುತ್ತದೆ. ಮೆಕಾಲೆ ಶಿಕ್ಷಣದ ಮೂಲಕ ನಮ್ಮ ನಡೆ, ನುಡಿ, ಆಚಾರ, ವಿಚಾರ ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ಈಗ ನಮ್ಮತನದ ಅಭಿಮಾನದಿಂದ ಮುಂದುವರೆಯಬೇಕಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.