ಹಾವೇರಿ, ಫೆಬ್ರವರಿ 07: ರಾಣೆಬೆನ್ನೂರು (Ranebennur) ತಾಲೂಕಿನ ಮೈಲಾರ ಗ್ರಾಮದ ದೇವರಗುಡ್ಡದ ಮೇಲೆ ಮೈಲಾರಲಿಂಗ ದೇವಸ್ಥಾನವಿದೆ (Mylaralinga Temple). ಈ ದೇವಸ್ಥಾನ ತುಂಗಭದ್ರ ನದಿ ದಡದಲ್ಲಿದೆ. ಪ್ರತಿವರ್ಷವೂ ಇಲ್ಲಿ ನಡೆಯುವ ಜಾತ್ರೆಗೆ ಬಹಳ ಪ್ರಾಮುಖ್ಯ ಇದೆ. ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಬರುತ್ತಾರೆ. ವರ್ಷದಲ್ಲಿ ಎರಡು ದಿವಸ ಜಾತ್ರೆ ವಿಶೇಷ ರೀತಿಯಿಂದ ನಡೆಯುತ್ತದೆ. ಜಾತ್ರಾ ಸಮಯದಲ್ಲಿ ಅನ್ನ ಸಂತರ್ಪಣೆ ಇರುತ್ತದೆ. ಈ ಬಾರಿಯ ಮೈಲಾರಲಿಂಗನ ಜಾತ್ರೆ ಸನಿಹದಿಲ್ಲಿದ್ದು, ಕಾರ್ಣಿಕ ಫೆ.22 ರಂದು ನುಡಿಯಲಾಗುತ್ತದೆ. ಹೀಗಾಗಿ ತುಂಗಭದ್ರ ನದಿಗೆ (Tungabhadra River) ಭದ್ರಾ ಡ್ಯಾಂನಿಂದ (Bhadra Dam) ನೀರು ಬಿಡಲಾಗಿದೆ.
ಕುಡಿಯುವ ನೀರು ಹಾಗೂ ಮೈಲಾರ ಜಾತ್ರೆ ಪ್ರಯುಕ್ತ ತುಂಗಭದ್ರ ನದಿಗೆ ಭದ್ರಾ ಜಲಾಶಯದಿಂದ ನೀರು ಬಿಡಲಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಭದ್ರಾ ಡ್ಯಾಂ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನೀಯರ್ ಸೂಚಿಸಿದ್ದಾರೆ.
ಫೆಬ್ರುವರಿ 5 ರಿಂದ ನೀರು ನದಿಗೆ ಪ್ರತಿನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಆದರೆ ಫೆಬ್ರುವರಿ 18 ರಿಂದ 23 ವರಗೆ ನಿತ್ಯ 500 ಕ್ಯೂಸೆಕ್ಸ್ ನೀರು ಹರಿಸಲು ನಿರ್ಧರಿಸಲಾಗಿದೆ. ಇದರಿಂದ ದಾವಣಗೆರೆ, ಹಾವೇರಿ, ಗದಗ, ವಿಜಯನಗರ ಜಿಲ್ಲೆಯ ಗ್ರಾಮಳಿಗೆ ಅನುಕೂಲವಾಗಲಿದೆ.
ಇನ್ನು ಭದ್ರಾ ಡ್ಯಾಂನಿಂದ ನೀರು ಬಿಡುತ್ತಿರುವುದು ಕುಡಿಯುವ ನೀರಿನ ಉದ್ದೇಶಕ್ಕಾಗಿ. ಅಕ್ರಮವಾಗಿ ಪಂಪ್ ಸೆಟ್ ಬಳಸಿ ನೀರು ಬೆಳೆಕೆ ಬಳಸಿದರೆ ಹಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭದ್ರಾ ಡ್ಯಾಂ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನೀಯರ್ ಎಚ್ಚರಿಕೆ ನೀಡಿದ್ದಾರೆ.
ಜನಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸ ಮಣಿಮಲ್ಲಾಪುರ ಬ್ರಹ್ಮನನ್ನು ಪ್ರಾರ್ಥಿಸಿ ಯಾರಿಂದಲೂ ಸಾವು ಬಾರದೆ ಇರುವಂತೆ ವರ ಬೇಡುತ್ತಾನೆ. ಆದರೆ ಬ್ರಹ್ಮ ಇದಕ್ಕೆ ಕಿವಿಗೊಡದಿರಲು ಆತ ಪರಮೇಶ್ವರನನ್ನೇ ಕುರಿತು ಬೇಡುತ್ತಾನೆ. ಪರಮೇಶ್ವರ ಇದರಿಂದ ಕುಪಿತನಾಗಿ ತಲೆ ಕೊಡವುತ್ತಾನೆ. ಈಶ್ವರನ ತಲೆಯಿಂದ ತುಪ್ಪದ ಮಾಳಮ್ಮ ಎಂಬ ದೇವಿ ಜನಿಸಿ ರಾಕ್ಷಸನನ್ನು ಕೊಲ್ಲಲು ಉದ್ಯುಕ್ತಳಾಗುತ್ತಾಳೆ. ಆಕೆಯಿಂದಲೂ ರಾಕ್ಷಸನನ್ನು ಕೊಲ್ಲಲು ಸಾಧ್ಯವಾಗದೆ ಹೋದಾಗ, ಪರಮೇಶ್ವರನೇ ಗೊರವರ ವೇಷದಲ್ಲಿ ಬಂದು ರಾಕ್ಷಸನನ್ನು ಕೊಂದು, ತುಪ್ಪದ ಮಾಳಮ್ಮನನ್ನು ಮದುವೆಯಾಗುತ್ತಾನೆ ಎಂದು ಸ್ಥಳ ಪುರಾಣ ಹೇಳುತ್ತದೆ.
ಇದನ್ನೂ ಓದಿ: ತಮ್ಮ ಶಾಸಕನ ಗೆಲುವಿಗಾಗಿ ಹರಕೆ: ಮಂಡಿಯಿಂದಲೇ 250 ಮೆಟ್ಟಿಲು ಹತ್ತಿ ಮೈಲಾರಲಿಂಗನಿಗೆ ಹರಕೆ ತೀರಿಸಿದ ಮಹಿಳೆ
ಈ ಕ್ಷೇತ್ರದ ಪವಾಡಗಳಿಗೆ ಸಂಬಂಧಿಸಿದಂತೆಯೂ ಒಂದು ಕಥೆ ಇದೆ. ಗಂಗೆ ಮಾಳಮ್ಮ ಎಂಬಾಕೆ ತನ್ನ ಏಳು ಮಂದಿ ಅಣ್ಣ ತಮ್ಮಂದಿರಿಗೂ ಊಟ ತೆಗೆದುಕೊಂಡು ಹೋಗುತ್ತಿರುವಾಗ, ಈಶ್ವರ ಗೊರವನ ವೇಷದಲ್ಲಿ ಬಂದು ಅವಳ ಬಳಿ ನಿಲ್ಲುತ್ತಾನೆ. ಇದನ್ನು ನೋಡಿದ ಅವಳ ಎಳು ಮಂದಿ ಅಣ್ಣತಮ್ಮಂದಿರೂ ತಮ್ಮ ಎರಡು ನಾಯಿಗಳನ್ನೂ ಅವನ ಕಡೆಗೆ ಬಿಡುತ್ತಾರೆ. ಆದರೆ ಆ ನಾಯಿಗಳು ಅವನನ್ನು ಏನೂ ಮಾಡದೇ ಸುಮ್ಮನೆ ನಿಲ್ಲುತ್ತವೆ. ಆಗ ಆ ಏಳು ಮಂದಿ ಅಣ್ಣತಮ್ಮಂದಿರೇ ಅವನ ಬಳಿಗೆ ಹೋಗುತ್ತಾರೆ. ಆಗ ಗೊರವನ ರೂಪದಲ್ಲಿದ್ದ ಪರಮೇಶ್ವರ, ಗಂಗೆ ಮಾಳಮ್ಮನನ್ನು ಮದುವೆ ಮಾಡಿಕೊಡುವಂತೆ ಕೇಳುತ್ತಾನೆ. ಐದು ಪವಾಡಗಳನ್ನು ಮಾಡಿತೋರಿಸಿದರೆ ಮದುವೆ ಮಾಡಿಕೊಡುವುದಾಗಿ ಅವರು ಹೇಳುತ್ತಾರೆ. ಆಗ ಪರಮೇಶ್ವರ ಸರಪಳಿ ಪವಾಡ, ಶೂಲದ ಪವಾಡ, ಗೋವದ ಪವಾಡ, ಅಲಗು ಪವಾಡ, ಸಿರ್ಸಿ ಪವಾಡ ಎಂಬ ಐದು ಪವಾಡಗಳನ್ನು ಮಾಡಿ ತೋರಿಸುತ್ತಾನೆ. ಈಗಲೂ ಮೈಲಾರಲಿಂಗನ ಭಕ್ತರು ಅನೇಕ ಬಗೆಯ ಪವಾಡಗಳನ್ನು ಮಾಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿಯ ಪ್ರಮುಖ ಆಕರ್ಷಣೆಯೂ ಇವೇ ಆಗಿವೆ. ಇವು ಅತ್ಯಂತ ರೋಮಾಂಚನಕಾರಿಯಾಗಿರುತ್ತವೆ. ಮೈಲಾರಲಿಂಗನ ಭಕ್ತರು ಪವಾಡಗಳನ್ನು ಮಾಡುವುದಾಗಿ ಹರಸಿಕೊಂಡಿರುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ