ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ (Medical Student) ಕನ್ನಡಿಗ ನವೀನ ಬಲಿಯಾಗಿದ್ದ. ಈ ಘಟನೆಯಿಂದ ನಮ್ಮ ದೇಶ ಹಾಗೂ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಈಗ ನವೀನ ಕಂಡ ಒಂದು ಕನಸನ್ನ ತಂದೆ ತಾಯಿ ನನಸು ಮಾಡಿದ್ದಾರೆ. ಆತನ ಹೆಸರಿನಲ್ಲಿ ನೂತನ ಮನೆ ನಿರ್ಮಿಸಿದ್ದು, ಮಗನ ಹೆಸರನ್ನ ನಾಮಕರಣ ಮಾಡಿದ್ದಾರೆ (House Warming Ceremony). ಈ ಕುರಿತು ಒಂದು ವರದಿ ಇಲ್ಲಿದೆ. ಅದು ಮಾರ್ಚ್ 1 2022 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಕನ್ನಡಿಗ ನವೀನ ಬಲಿಯಾಗಿದ್ದ. ಇದರಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ನವೀನ ಗ್ಯಾನಗೌಡರ ಎಂಬಾತ ಮೃತಪಟ್ಟಿದ್ದ. ಮೃತ ನವೀನ ಉಕ್ರೇನ್ ನಲ್ಲಿ ಎಂಬಿಬಿಎಸ್ ನಾಲ್ಕನೆ ಸೆಮಿಸ್ಟರ್ ನಲ್ಲಿ ಓದುತ್ತಿದ್ದ. ನವೀನ (Naveen Gyanagoudar) ಮೃತಪಟ್ಟ ಸುದ್ದಿ ಆತನ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿತ್ತು.
ನವೀನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರು, ಸಿ.ಎಂ. ಬಸವರಾಜ ಬೊಮ್ಮಾಯಿ, ಮಾಜಿ ಸಿ.ಎಂ.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆದರೆ ನವೀನ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವೇಳೆ ತಂದೆ ತಾಯಿಗೆ ಮಾತು ಕೊಟ್ಟಿದ್ದನಂತೆ. ನಾನು ವೈದ್ಯನಾದ ಬಳಿಕ ಮನೆ ಕಟ್ಟಿಸುತ್ತೇನೆ. ಈಗ ಇರುವ ಮನೆಯಲ್ಲಿ ಕ್ಲಿನಿಕ್ ನಡೆಸುತ್ತೇನೆ ಅಂತಾ ಮಾತುಕೊಟ್ಟಿದ್ದ. ಈಗ ಮಗನ ಆಸೆಯಂತೆ ತಂದೆ ತಾಯಿ ನೂತನ ಮನೆಯನ್ನ ಕಟ್ಟಿಸಿದ್ದಾರೆ. ಮಗನ ಹೆಸರನ್ನೇ ಮನೆಗೆ ನಾಮಕರಣ ಮಾಡಿದ್ದಾರೆ. ಮಗನ ನೆರಳಿನಲ್ಲಿ ಸದಾ ಇರುತ್ತೇವೆ ಅಂತಾ ಕೆಲಕಾಲ ಭಾವುಕರಾದರು ನವೀನ್ ತಂದೆ ಶೇಖರಗೌಡ ಗ್ಯಾನಗೌಡರ.
ಸುಮಾರು 27 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯನ್ನ ಕಟ್ಟಿಸಿದ್ದಾರೆ. ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ, ಮೃತ ನವೀನನ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivas) ಎಂದು ನಾಮಕರಣ ಮಾಡಿದ್ದು, ಮನೆಯ ಮುಂಭಾಗದಲ್ಲಿಯೇ ನವೀನನ ಭಾವಚಿತ್ರವನ್ನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಿ ಹಾಕಲಾಗಿದೆ. ಇಂದು ಶುಕ್ರವಾರ ಗೃಹಪ್ರವೇಶ ಮಾಡಲಿದ್ದಾರೆ. ಡಾಕ್ಟರ್ ಆಗಿ ಬರ್ತೆನಿ ಅಂತ ಹೋಗಿದ್ದ ಮಗ ಹೆಣವಾಗಿ ಮನೆಗೆ ಬಂದ ಕಹಿ ಘಳಿಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆತನಿಗೆ ಎರಡು ಕನಸುಗಳಿದ್ದವು. ತಾನು ಡಾಕ್ಟರ್ ಆಗಬೇಕು… ಡಾಕ್ಟರ್ ಆಗಿ, ಆರ್ ಸಿ ಸಿ ಮನೆ ಕಟ್ಟಿಸಬೇಕು. ಆದ್ರೆ ಮಗನ ಅರ್ಧ ಆಸೆ ಅಷ್ಟೇ ಈಡೇರಿದೆ ಎಂದು ಮಗನ ತಾಯಿ ವಿಜಯಲಕ್ಷ್ಮಿ ಭಾವುಕರಾದರು.
ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನಮ್ಮ ಕನ್ನಡದ ಕುವರ ನವೀನನ್ನು ಬಲಿ ಪಡೆಯಿತು. ಆ ಕುಟುಂಬದ ಕನಸು ಕಮರುವಂತೆ ಮಾಡಿತು. ಈಗ ಮಗನ ಕನಸು ನನಸು ಮಾಡಿ ನೂತನ ಮನೆ ನಿರ್ಮಿಸಿ, ಮನೆಗೆ ನವೀನ್ ನಿವಾಸ ನಾಮಕರಣ ಮಾಡಿ ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.
ವರದಿ: ಸೂರಜ್ ಉತ್ತೂರೆ, ಟಿವಿ 9, ಹಾವೇರಿ
Published On - 12:59 pm, Fri, 17 February 23