ಹಾವೇರಿ: ಬೆಳೆದು ನಿಂತಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಪರಾರಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. ಖಲೀಲ ಅಹಮ್ಮದ ವಾಲೀಕಾರ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿದ್ದ 700 ಕ್ಕೂ ಅಧಿಕ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ.
ಜಮೀನಿನಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ರಾತ್ರೋರಾತ್ರಿ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ಆರು ವರ್ಷಗಳಿಂದ ಕಷ್ಟಪಟ್ಟು ಅಡಿಕೆ ಮರಗಳನ್ನು ಬೆಳೆಸಿದ್ದ ರೈತ ಖಲೀಲ ಅಹಮ್ಮದ್ ಸದ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೆನ್ನು ಫಸಲು ಬಿಡುತ್ತಿದ್ದ ಅಡಿಕೆ ಮರಗಳನ್ನು ಕಡಿದು ಹಾಕಲಾಗಿದ್ದು, ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಈ ರೀತಿ ಯಾವುದೋ ದ್ವೇಷಕ್ಕೆ ಬೆಳೆ ನಾಶ ಪಡಿಸುವುದು, ಗುಡಿಸಲಿಗೆ ಹಾನಿ ಮಾಡುವುದು, ಅಲ್ಲದೇ ಅಡಿಕೆ ಮರಗಳನ್ನೇ ಈ ಹಿಂದೆ ಇದೇ ರೀತಿ ಕಡಿದ ಅನೇಕ ಉದಾಹರಣೆಗಳಿವೆ. ಅದರಲ್ಲೂ ಕಳೆದ ಯುಗಾದಿ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಇಂತದ್ದೇ ಘಟನೆ ನಡೆದಿದ್ದು, ದಾಣಗೆರೆಯ ರೈತ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು.
ದಾವಣಗೆರೆ: 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು
ರೈತನಿಗೆ ಸಮಸ್ಯೆಗಳು ಒಂದೆರೆಡಲ್ಲ. ಕೆಲವೊಮ್ಮೆ ಬೆಳೆ ಕೈಕೊಟ್ಟರೆ, ಇನ್ನೊಮ್ಮೆ ಬೆಲೆ ಕೈಕೊಡುತ್ತದೆ. ಈ ಮಧ್ಯೆ ಬಂದು ಹೋಗುವ ತೊಂದರೆಗಳನ್ನು ಹೇಳಲು ಸಾಧ್ಯವಿಲ್ಲ. ಆದರೆ ದಾವಣಗೆರೆ ತಾಲೂಕಿನ ಮುಡೇನಹಳ್ಳಿಯ ರೈತರಿಗೆ ಎದುರಾದ ಸಮಸ್ಯೆ ಎಲ್ಲರ ಮನ ಕಲುಕುತ್ತದೆ. ರೈತರು ಕಷ್ಟ ಪಟ್ಟು ಬೆವರು ಸುರಿಸಿ ಮಗುವಂತೆ ಅಡಿಕೆ ಮರಗಳನ್ನು ಸಾಕಿದ್ದರು. ಆದರೆ ದುಷ್ಕರ್ಮಿಗಳು ಫಲಕ್ಕೆ ಬಂದ ಅಡಿಕೆ ಮರಗಳನ್ನ ಕಡಿದು ಪರಾರಿಯಾಗಿದ್ದಾರೆ. ನೆಲಕ್ಕೆ ಉರುಳಿದ ಅಡಿಕೆ ಮರಗಳನ್ನು ನೋಡಿ ರೈತರು ಕಂಗಾಲಾಗಿದ್ದಾರೆ.
ಆನಗೋಡು ಸಮೀಪದ ಮುಡೇನಹಳ್ಳಿಯ ಎನ್.ಬಸವರಾಜಪ್ಪ ಎಂಬುವವರು ಸೇರಿದಂತೆ ನಾಲ್ಕು ರೈತರಿಗೆ ಸೇರಿದ ಸುಮಾರು 100ಕ್ಕೂ ಹೆಚ್ಚು ಮರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳು ತಡ ರಾತ್ರಿ ಬಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ರೈತರು ಬೆಳಿಗ್ಗೆ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರೈತರಿಗೆ ಇದೀಗ ದುಃಖದ ಸಂಗತಿ ಎದುರಾಗಿದ್ದು, ಈ ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
35 ಅಡಿಕೆ ಮರ ಕಡಿದ ದುಷ್ಕರ್ಮಿಗಳು; ದೂರು ನೀಡಿದರೂ ಕ್ರಮ ಕೈಗೊಳ್ಳದೆ ಪೊಲೀಸರ ನಿರ್ಲಕ್ಷ್ಯ
Published On - 11:50 am, Sun, 12 September 21