ಹಾವೇರಿ: ಈಗ ಎಲ್ಲೆಲ್ಲೂ ಎಸಿಬಿ ಅಧಿಕಾರಿಗಳ (ACB) ದಾಳಿಯದ್ದೇ ಮಾತು. ಅದರಲ್ಲೂ ಕಳೆದ ಕೆಲವು ದಿನಗಳ ಹಿಂದೆ ಎಸಿಬಿ ಅಧಿಕಾರಿಗಳು ಭರ್ಜರಿ ಭ್ರಷ್ಟರ ಭೇಟೆಯಾಡಿದ್ದಾರೆ. ಎಸಿಬಿ ಅಧಿಕಾರಿಗಳು ಭ್ರಷ್ಟರ ವಿರುದ್ಧ ದಾಳಿ ಮಾಡುತ್ತಿರುವುದನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ, ತಾನು ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರಸಭೆ ಅಧಿಕಾರಿಗಳನ್ನು ವಂಚನೆ ಮಾಡಲು ಹೋಗಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದು, ಜೈಲು ಸೇರಿದ್ದಾನೆ. ಹೌದು ಬೆಂಗಳೂರಿನ ಹಲಸೂರು ನಿವಾಸಿಯಾದ ಜಾನಮೇಕ ಅಲಿಯಾಸ್ ಜಾನ ಮ್ಯಾಥೀವ್ ಎಂಬ ವ್ಯಕ್ತಿಯೇ ಪೊಲೀಸರ ಕೈಗೆ ಸಿಕ್ಕು ಜೈಲು ಸೇರಿದ ನಕಲಿ ಎಸಿಬಿ ಅಧಿಕಾರಿ.
ರಾಣೆಬೆನ್ನೂರು ನಗರಸಭೆಯ ಆಯುಕ್ತ ಉದಯಕುಮಾರ ತಳವಾರರ ಬಳಿ ಬಂದಿದ್ದ ಆರೋಪಿ, ನಗರಸಭೆ ಕಚೇರಿಯಲ್ಲಿ ಇಂಜನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ ಗುಡಿಸಲಮನಿಯವರ ಹೆಸರು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಪಟ್ಟಿಯಲ್ಲಿದೆ ಎಂದು ಹೆದರಿಸಿದ್ದಾನೆ. ಹಣ ನೀಡಿದರೆ ನಮ್ಮ ಮೇಲಿನ ಎಸಿಬಿ ಅಧಿಕಾರಿಗಳಿಗೆ ಹೇಳಿ ಅವರ ಹೆಸರನ್ನು ಆ ಪಟ್ಟಿಯಿಂದ ತೆಗೆಸುತ್ತೇನೆ ಎಂದು ನಕಲಿ ಎಸಿಬಿ ಅಧಿಕಾರಿ ಹಣದ ಆಮೀಷವೊಡ್ಡಿ ಮೋಸದಿಂದ ಹಣ ಪಡೆಯಲು ಪ್ರಯತ್ನಿಸಿದ್ದಾನೆ.
ಜಾನಮೇಕ ಅಲಿಯಾಸ್ ಜಾನ ಮ್ಯಾಥೀವ್ ನಕಲಿ ಎಸಿಬಿ ಅಧಿಕಾರಿ ಎಂಬುದನ್ನು ಅರಿತ ಪೌರಾಯುಕ್ತರು ತಕ್ಷಣವೇ ರಾಣೆಬೆನ್ನೂರು ನಗರಠಾಣೆಯ ಪೊಲೀಸರ ಗಮನಕ್ಕೆ ತಂದು ಪ್ರಕರಣ ದಾಖಲಿಸಿದ್ದಾರೆ. ನಕಲಿ ಎಸಿಬಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೆ ಕಾರ್ಯಾಚರಣೆ ನಡೆಸಿ ಜಾನಮೇಕ ಅಲಿಯಾಸ್ ಜಾನ ಮ್ಯಾಥೀವ್ ಎಂಬ ನಕಲಿ ಎಸಿಬಿ ಅಧಿಕಾರಿಯನ್ನು ಬಂಧಿಸಿದ್ದಾರೆ.
ಬಂಧಿತನ ಮೇಲೆ ಐಪಿಸಿ ಸೆಕ್ಷನ್ 385, 418, 419, 420, 511 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಬಂಧಿತ ಆರೋಪಿ ಜಾನಮೇಕ ಅಲಿಯಾಸ್ ಜಾನ ಮ್ಯಾಥೀವ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ವರದಿ: ಪ್ರಭುಗೌಡ.ಎನ್.ಪಾಟೀಲ
ಇದನ್ನೂ ಓದಿ:
ಮನೆ ಮನೆ ಸುತ್ತಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; ಬಂಧಿತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ