Mysore Tiger: ರಾಣೇಬೆನ್ನೂರು ನಗರದ ಮೈಸೂರು ಹುಲಿ ಖ್ಯಾತಿಯ ಹೋರಿ ಸಾವು, ಅಭಿಮಾನಿಗಳು ಕಣ್ಣೀರು
Ranebennur: ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಆದ ಹೆಸರು ಮಾಡಿದ್ದ ಮೈಸೂರು ಹುಲಿ ಹೆಸರಿನ ಹೋರಿ, ಬೈಕ್ ಗಳು, ಹತ್ತು ಗಾಡ್ರೇಜ್ ಗಳು, ಐದು ತೊಲೆ ಬಂಗಾರ ಸೇರಿದಂತೆ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು.
ಉತ್ತರ ಕರ್ನಾಟಕದಲ್ಲಿ ಹೋರಿ ಬೆದರಿಸುವ ಹಬ್ಬ ತುಂಬಾ ಪ್ರಸಿದ್ಧ. ಮೈಸೂರು ಹುಲಿ ಹೋರಿ (Mysuru Huli Ox) ಅಂದರೆ ಅಖಾಡದಲ್ಲಿನ ಅಭಿಮಾನಿಗಳಿಗೆ ಖುಷಿಯೋ ಖುಷಿ. ಆದರೆ ಮೈಸೂರು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಹೋರಿಯ ಸಾವಿಗೆ (bullock Hori) ಅಭಿಮಾನಿಗಳು ಕಣ್ಣೀರಾಗಿದ್ದಾರೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಹೌದು ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರು (Ranebennur) ನಗರದ ಕುರುಬಗೇರಿ ಓಣಿಯಲ್ಲಿ ಕಂಡುಬಂದ ದೃಶ್ಯಗಳಿವು. ಈ ಕುರಿತು ಒಂದು ವರದಿ. ಪ್ರಸಿದ್ಧ ಕುಸ್ತಿ ಪೈಲ್ವಾನ್ ಕುಟುಂಬದ ನಂಜಪ್ಪ ಗೂಳಣ್ಣನವರ ಹೆಸರಾಂತ ಕುಸ್ತಿ ಪಟುವಾಗಿದ್ದರು. ನಾಡಹಬ್ಬ ದಸಾರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು ಅವರು ಮೈಸೂರು ಹುಲಿ ಎಂದು ಹೆಸರು ಪಡೆದಿದ್ದರು. ನಂತರ ಪೈಲ್ವಾನ್ ನಂಜಪ್ಪರ ಹೆಸರಿನ ಮೂಲಕ ಹೋರಿಗೆ “ಮೈಸೂರು ಹುಲಿ” (Mysore Tiger) ಎಂದು ನಾಮಕರಣ ಮಾಡಲಾಗಿತ್ತು. ಮೈಸೂರು ಹುಲಿ ಹೆಸರಿನ ಹೋರಿ 13 ವರ್ಷಗಳ ಕಾಲ ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಆದ ಹೆಸರು ಮಾಡಿ ಇಂದು ಉಸಿರು ನಿಲ್ಲಿಸಿದೆ. ಹೋರಿ ಹಬ್ಬದಲ್ಲಿ ಆಕಾಶದಗಲಕ್ಕೆ ಬಲೂನ್ ಗಳ ಪೀಪಿಯನ್ನು ಕಟ್ಟಿಕೊಂಡು ಓಡುತ್ತಿದ್ದರೆ ಅಭಿಮಾನಿಗಳ ಕೇಕೆ, ಸಿಳ್ಳೆ ಮೇರೆ ಮೀರುತ್ತಿತ್ತು. ಹೋರಿಯ ನಿಧನಕ್ಕೆ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯ ಹಾಗೂ ಬೇರೆ ಬೇರೆ ಕಡೆಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಮೈಸೂರು ಹುಲಿ ಹೋರಿಗೆ ಸಾವಿರಾರು ಜನ ಅಭಿಮಾನಿಗಳು ನೆರೆದಿರುತ್ತಿದ್ದರು. ಮೈಸೂರು ಹುಲಿಯು ಧೂಳೆಬ್ಬಿಸಿಕೊಂಡು ಓಡುತ್ತಿದ್ದ ಮಿಂಚಿನ ಓಟ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.
ಹೀಗೆ ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಆದ ಹೆಸರು ಮಾಡಿದ್ದ ಮೈಸೂರು ಹುಲಿ ಹೆಸರಿನ ಹೋರಿ, ಬೈಕ್ ಗಳು, ಹತ್ತು ಗಾಡ್ರೇಜ್ ಗಳು, ಐದು ತೊಲೆ ಬಂಗಾರ ಸೇರಿದಂತೆ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು. ಈಗ ಹೋರಿ ಹಬ್ಬದ ಹುಲಿ ಮೈಸೂರು ಹುಲಿ ಉಸಿರು ನಿಲ್ಲಿಸಿರುವುದು ಹೋರಿ ಮಾಲೀಕರ ಕುಟುಂಬ ಸೇರಿದಂತೆ ಸಾವಿರಾರು ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಒಟ್ಟಿನಲ್ಲಿ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಮೈಸೂರಿನ ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ. ನೂರಾರು ಅಭಿಮಾನಿಗಳು ಹೋರಿ ಅಂತಿಮ ದರ್ಶನ ಪಡೆದು, ಹಿಂದೂ ಸಂಪ್ರದಾಯದಂತೆ ಮೈಸೂರಿನ ಹುಲಿಯ ಅಂತ್ಯಕ್ರಿಯೆಯನ್ನ ನೆರವೇರಿಸಲಾಯಿತು.
ವರದಿ: ಸೂರಜ್ ಉತ್ತೂರೆ, ಟಿವಿ9, ಹಾವೇರಿ