ಹಾವೇರಿ: ಉಕ್ರೇನ್ ಹಾಗೂ ರಷ್ಯಾ ಯುದ್ಧ ಭೂಮಿಯಲ್ಲಿ ಮೃತಪಟ್ಟ ಕರ್ನಾಟಕದ ನವೀನ್ ನಿವಾಸಕ್ಕೆ ಇಂದು (ಮಾರ್ಚ್ 9) ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ್ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ನವೀನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಕನ್ನಡಿಗ ನವೀನ್ ಸಾವನ್ನಪ್ಪಿದ್ದಾರೆ. ನವೀನ್ ತಂದೆ ತಾಯಿ ದೊಡ್ಡ ಆಸೆ ಇಟ್ಟುಕೊಂಡಿದ್ರು. ದುರದೃಷ್ಟವಶಾತ್ ನವೀನ್ ಓದನ್ನ ಮುಗಿಸಲಾಗಲಿಲ್ಲ. ನವೀನ್ ಮೃತದೇಹವನ್ನ ಭಾರತಕ್ಕೆ ತರುವ ಪ್ರಯತ್ನ ಮಾಡಬೇಕು. ಸರಕಾರ ಕೂಡಲೆ ಮೃತದೇಹ ತರಲು ಪಯತ್ನಿಸಬೇಕು. ಮೃತದೇಹ ತರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವೆ. ಕೋಳಿವಾಡರ ಪುತ್ರ ಅನುಮತಿ ಕೇಳಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ತಮ್ಮ ವಿಮಾನದಲ್ಲಿ ಮೃತದೇಹ ತರಲು ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೃತ ನವೀನ್ ನಮ್ಮ ಮೈಸೂರಿನಲ್ಲಿ ಓದಿದ ಹುಡುಗ ಎಂದು ಚಳಗೇರಿ ಗ್ರಾಮದ ನಿವಾಸದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ನವೀನ್ ಮೃತದೇಹ ಸಿಕ್ಕಿದೆ, ಉಕ್ರೇನಿನ ಶವಾಗಾರದಲ್ಲಿ ಇಡಲಾಗಿದೆ: ಬಸವರಾಜ ಬೊಮ್ಮಾಯಿ ಮಾಹಿತಿ
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧಭೂಮಿಯಲ್ಲಿ (Russia Ukraine War) ಸಾವನ್ನಪ್ಪಿದ ನವೀನ್ (Naveen) ಮೃತದೇಹ ತರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾರ್ಚ್ 8ರಂದು ಪ್ರತಿಕ್ರಿಯೆ ನೀಡಿದ್ದರು. ಕೇಂದ್ರ ಸಚಿವ ಜೈಶಂಕರ್ ಅವರ ಜೊತೆ ಮಾತಾಡಿದ್ದೇನೆ. ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ (Ukraine) ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ. ಯುದ್ಧ ಇನ್ನೂ ನಡೀತಿದೆ. ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ. ನವೀನ್ ಮೃತದೇಹ ತರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಈ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ಹಂಚಿಕೊಂಡಿದ್ದರು.
ಈ ಮೊದಲು, ಉಕ್ರೇನ್ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಜತೆಗೆ ನವೀನ್ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್ ನೀಡಿದ್ದರು. ನವೀನ್ ಭಾವಚಿತ್ರಕ್ಕೆ ಹೂವು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದರು. ಈ ವೇಳೆ ಸಿಎಂ ಜೊತೆ ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ನವೀನ್ ಮೃತದೇಹ ಸಿಕ್ಕಿದೆ, ಉಕ್ರೇನಿನ ಶವಾಗಾರದಲ್ಲಿ ಇಡಲಾಗಿದೆ: ಬಸವರಾಜ ಬೊಮ್ಮಾಯಿ ಮಾಹಿತಿ
ಇದನ್ನೂ ಓದಿ: Russia Ukraine War: ನಾನು ನವೀನ್ ಒಳ್ಳೆಯ ಸ್ನೇಹಿತರಾಗಿದ್ದೇವು; ವಿದ್ಯಾರ್ಥಿನಿ ವರ್ಷಿತಾ ಹೇಳಿಕೆ
Published On - 1:04 pm, Wed, 9 March 22