ನವೀನ್ ಮೃತದೇಹ ಸಿಕ್ಕಿದೆ, ಉಕ್ರೇನಿನ‌ ಶವಾಗಾರದಲ್ಲಿ ಇಡಲಾಗಿದೆ: ಬಸವರಾಜ ಬೊಮ್ಮಾಯಿ ಮಾಹಿತಿ

ಯುದ್ಧ ಇನ್ನೂ ನಡೀತಿದೆ. ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ.

ನವೀನ್ ಮೃತದೇಹ ಸಿಕ್ಕಿದೆ, ಉಕ್ರೇನಿನ‌ ಶವಾಗಾರದಲ್ಲಿ ಇಡಲಾಗಿದೆ: ಬಸವರಾಜ ಬೊಮ್ಮಾಯಿ ಮಾಹಿತಿ
ಮೃತ ವಿದ್ಯಾರ್ಥಿ ನವೀನ್​
Follow us
TV9 Web
| Updated By: ganapathi bhat

Updated on:Mar 09, 2022 | 1:10 PM

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧಭೂಮಿಯಲ್ಲಿ (Russia Ukraine War) ಸಾವನ್ನಪ್ಪಿದ ನವೀನ್ (Naveen) ಮೃತದೇಹ ತರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಂದು (ಮಾರ್ಚ್ 8) ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಜೈಶಂಕರ್ ಅವರ ಜೊತೆ ಮಾತಾಡಿದ್ದೇನೆ. ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ‌ (Ukraine) ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ. ಯುದ್ಧ ಇನ್ನೂ ನಡೀತಿದೆ. ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ. ನವೀನ್ ಮೃತದೇಹ ತರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಈ ಬಗ್ಗೆ ಸಿಎಂ ಬೊಮ್ಮಾಯಿ ಇಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಮೊದಲು, ಉಕ್ರೇನ್​ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್​ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಜತೆಗೆ ನವೀನ್​ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್​ ನೀಡಿದ್ದರು. ನವೀನ್​ ಭಾವಚಿತ್ರಕ್ಕೆ ಹೂವು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದರು. ಈ ವೇಳೆ ಸಿಎಂ ಜೊತೆ ಕೃಷಿ ಸಚಿವ‌ ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

ಸಿಎಂ ಬೊಮ್ಮಾಯಿ ಮಾತ್ರವಲ್ಲದೆ, ವಿವಿಧ ರಾಜಕೀಯ ನಾಯಕರು ನವೀನ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ನವೀನ್ ಕುಟುಂಬಸ್ಥರು ಮಾತ್ರ ನವೀನ್ ಮೃತದೇಹವಾದರೂ ಭಾರತಕ್ಕೆ ಮರಳಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಅದು ಸಾಧ್ಯವೇ ಇಲ್ಲವೇ ಎಂಬ ಬಗ್ಗೆ ಹಲವು ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದರು. ಸರ್ಕಾರ ತನ್ನ ಪ್ರಯತ್ನ ತಾನು ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿತ್ತು. ಈ ಮಧ್ಯೆ ಇದೀಗ ನವೀನ್ ಮೃತದೇಹವನ್ನು ಶವಾಗಾರದಲ್ಲಿ ಇಟ್ಟಿರುವ ಬಗ್ಗೆ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

5 ರಾಜ್ಯಗಳ ಮತದಾನೋತ್ತರ ಸಮೀಕ್ಷೆ ಪ್ರಕಟ ವಿಚಾರವಾಗಿ ಕೂಡ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ಬಗ್ಗೆ ವಿಶ್ವಾಸವಿತ್ತು. ಆ ನಿರೀಕ್ಷೆಗೆ ಅನುಗುಣವಾಗಿ ಎಕ್ಸಿಟ್ ಪೋಲ್ ಹೇಳುತ್ತಿವೆ. ಇನ್ನೂ ಎರಡು ದಿನ ಕಾದು ನೋಡೋಣ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: ರ್ಯಾಂಕ್ ಸ್ಟೂಡೆಂಟ್ ನವೀನ್ ನಮಗೋಸ್ಕರ ದಿನಸಿ ತರೋಕೆ ಹೋಗಿದ್ದರು; ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿನಿ ಮಾಹಿತಿ

ಇದನ್ನೂ ಓದಿ: ಉಕ್ರೇನಲ್ಲಿ ಇನ್ನೂ ಸಿಲುಕಿದ್ದಾರಲ್ಲ, ಅವರೂ ನನ್ನ ಮಕ್ಕಳೇ, ಅವರನ್ನಾದರೂ ಸುರಕ್ಷಿತವಾಗಿ ಕರೆತನ್ನಿ ಎಂದರು ನವೀನ್ ಅಮ್ಮ

Published On - 9:46 am, Tue, 8 March 22