ಉಕ್ರೇನಲ್ಲಿ ಇನ್ನೂ ಸಿಲುಕಿದ್ದಾರಲ್ಲ, ಅವರೂ ನನ್ನ ಮಕ್ಕಳೇ, ಅವರನ್ನಾದರೂ ಸುರಕ್ಷಿತವಾಗಿ ಕರೆತನ್ನಿ ಎಂದರು ನವೀನ್ ಅಮ್ಮ
ನವೀನ್ ದೇಹ ಭಾರತಕ್ಕೆ ಯಾವಾಗ ತರಲಾಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಖಾರ್ಕಿವ್ನಲ್ಲಿ ನವೀನ್ ಅವರೊಂದಿಗೆ ಓದುತ್ತಿದ್ದ ಕನ್ನಡಿಗ ವಿದ್ಯಾರ್ಥಿಗಳು ಸದ್ಯಕ್ಕಂತೂ ಪಾರ್ಥೀವ ಶರೀರ ಸ್ವದೇಶಕ್ಕೆ ತರುವುದು ಸಾಧ್ಯವಿಲ್ಲ ಎನ್ನುತ್ತಾರೆ.
ಉಕ್ರೇನಲ್ಲಿ ಹತರಾದ ಕನ್ನಡದ ಹುಡುಗ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyangoudar) ಅವರ ಮನೆಗೆ ರಾಜಕೀಯ ನಾಯಕರು ಭೇಟಿಯಾಗಿ ತಂದೆತಾಯಿಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯಲ್ಲಿರುವ ನವೀನ್ ಮನೆಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಎಚ್ ಕೆ ಪಾಟೀಲ (HK Patil) ಅವರು ಶನಿವಾರ ಭೇಟಿ ನೀಡಿ ಶೇಖರಪ್ಪಮ ಅವರ ಪತ್ನಿ ಮತ್ತು ಹಿರಿಮಗ ಹರ್ಷನೊಂದಿಗೆ ಮಾತಾಡಿ ಸಂತಾಪ ಸೂಚಿಸಿದರು. ಈ ಕುಟುಂಬ ಈಗಲೂ ನವೀನ್ ಸಾವಿನ ಆಘಾತದಿಂದ ಚೇತರಿಕೊಂಡಿಲ್ಲ. ನವೀನ್ ದೇಹ ಭಾರತಕ್ಕೆ ಯಾವಾಗ ತರಲಾಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಖಾರ್ಕಿವ್ನಲ್ಲಿ (Kharkiv) ನವೀನ್ ಅವರೊಂದಿಗೆ ಓದುತ್ತಿದ್ದ ಕನ್ನಡಿಗ ವಿದ್ಯಾರ್ಥಿಗಳು ಸದ್ಯಕ್ಕಂತೂ ಪಾರ್ಥೀವ ಶರೀರ ಸ್ವದೇಶಕ್ಕೆ ತರುವುದು ಸಾಧ್ಯವಿಲ್ಲ ಎನ್ನುತ್ತಾರೆ. ಯುದ್ಧವಿರಾಮ ಘೋಷಣೆಯಾಗುವವರೆಗೆ ಕಾಯಬೇಕು ಅಂತ ಅವರು ಹೇಳುತ್ತಾರೆ.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಸಭೆಯಲ್ಲಿಇ 2022-23 ಸಾಲಿನ ಆಯವ್ಯಯ ಪತ್ರ ಮಂಡಿಸುವಾಗ ಸದನದಲ್ಲಿದ್ದ ಶಾಸಕ ಪಾಟೀಲ್ ಅವರು ಶನಿವಾರ ಬೆಳಗ್ಗೆ ಶೇಖರಪ್ಪ ಅವರ ಮನೆಗೆ ಆಗಮಿಸಿದರು. ನಾಲ್ಕು ವರ್ಷಗಳ ಹಿಂದೆ ನವೀನ್ ಮೆಡಿಕಲ್ ಓದಲು ಉಕ್ರೇನ್ ಗೆ ಹೋಗಿದ್ದು, ಪ್ರತಿವರ್ಷ ಉತ್ತಮ ಗ್ರೇಡ್ನೊಂದಿಗೆ ಪಾಸಾಗಿದ್ದು ಮೊದಲಾದ ಸಂಗತಿಗಳೊಂದಿಗೆ ಅವರ ಸಾವಿನ ವಿಷಯ ಹೇಗೆ ಗೊತ್ತಾಯಿತು, ಅನ್ನೋದನ್ನು ಹರ್ಷ ಶಾಸಕರಿಗೆ ವಿವರಿಸಿದರು.
ಮಗನ ಜೊತೆ ನೀವು ಮಾತಾಡಿದ್ರಾ ಅಂತ ಪಾಟೀಲ್ ಅವರು ನವೀನ್ ತಾಯಿಯನ್ನು ಕೇಳಿದಾಗ ಹೌದೆಂದ ಅವರು ಆಮೇಲೆ ಆಡುವ ಮಾತಗಳು ಮನಕಲಕುತ್ತವೆ.
‘ನನಗೆ ಮಗನನ್ನು ಕೊನೆಯ ಬಾರಿ ನೋಡಲು ಆಗಲಿಲ್ಲ, ಅವನ ದೇಹ ನೋಡುವ ಬಗ್ಗೆಯೂ ಖಾತ್ರಿಯಿಲ್ಲ. ಅಲ್ಲಿ (ಉಕ್ರೇನಲ್ಲಿ) ಇನ್ನೂ ಮಕ್ಕಳು ಉಳಿದಿದ್ದಾರಲ್ಲ, ಅವರೂ ನನ್ನ ಮಕ್ಕಳೇ, ಅವರನ್ನಾದರೂ ಸುರಕ್ಷಿತವಾಗಿ ಕರೆತನ್ನಿ,’ ಎಂದು ಅವರು ಹೇಳಿದರು.
ಇದನ್ನೂ ಓದಿ: Russia- Ukraine War: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಿದ್ಧ ಎಂದ ರಷ್ಯಾ