ನವದೆಹಲಿ: ರಷ್ಯಾ ಮತ್ತು ಉಕ್ರೇನ್ (Ukraine) ನಡುವೆ ನಡೆಯುತ್ತಿರುವ ಘರ್ಷಣೆಯ ನಡುವೆ, ಭಾರತೀಯ ವಿದ್ಯಾರ್ಥಿಗಳು ಮತ್ತು ಉಕ್ರೇನ್‌ನಲ್ಲಿ ಸಿಲುಕಿರುವ ಇತರ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಪೂರ್ವ ಉಕ್ರೇನ್ ನಗರಗಳಾದ ಖಾರ್ಕಿವ್ ಮತ್ತು ಸುಮಿಗೆ ಹೋಗಲು ರಷ್ಯಾದ (Russia) ಬಸ್‌ಗಳು ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಸಿದ್ಧವಾಗಿವೆ ಎಂದು ರಷ್ಯಾ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಖಾರ್ಕಿವ್ ಮತ್ತು ಸುಮಿಗೆ ಹೋಗಲು ಸಿದ್ಧವಾಗಿರುವ ‘ನೆಖೋಟೀವ್ಕಾ’ ಮತ್ತು ‘ಸುಡ್ಜಾ’ ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಇಂದು ಬೆಳಿಗ್ಗೆ 6ರಿಂದ 130 ಆರಾಮದಾಯಕ ಬಸ್‌ಗಳು ಕಾಯುತ್ತಿವೆ.
ಉಕ್ರೇನ್‌ನ ವಿವಿಧ ಪ್ರದೇಶಗಳಲ್ಲಿ ಇನ್ನೂ 2,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಇದೀಗ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವೂ ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ನಿರ್ಧರಿಸಿದ್ದು, ಅಕ್ಕಪಕ್ಕದ ದೇಶಗಳಲ್ಲಿರುವ ರಾಯಭಾರ ಕಚೇರಿ ಸಿಬ್ಬಂದಿಯನ್ನು ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರ ನಿಯೋಜಿಸಲು ಮುಂದಾಗಿದೆ. ರಷ್ಯಾ ಗಡಿಯ ಮೂಲಕ ರಷ್ಯಾದ ದೇಶದ ಸಮೀಪದ ವಿಮಾನ ನಿಲ್ದಾಣಕ್ಕೆ ಭಾರತೀಯರನ್ನು ಅಲ್ಲಿಂದ ಸ್ವದೇಶಕ್ಕೆ ಕರೆತರುವ ಬಗ್ಗೆಯೂ ಪ್ರಯತ್ನಗಳು ತೀವ್ರಗೊಂಡಿವೆ.
ಯುರೋಪ್‌ನ ಅತಿದೊಡ್ಡ ಉಕ್ರೇನ್‌ನ ಜಪೋರಿಜ್ಜ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ದಾಳಿಯ ನಂತರ ಅಲ್ಬೇನಿಯಾ, ಫ್ರಾನ್ಸ್, ಐರ್ಲೆಂಡ್, ನಾರ್ವೆ, ಇಂಗ್ಲೆಂಡ್ ಮತ್ತು ಅಮೆರಿಕ ಮುಂತಾದ 15 ರಾಷ್ಟ್ರಗಳ ಕೌನ್ಸಿಲ್ ಶುಕ್ರವಾರ ತುರ್ತು ಸಭೆಯನ್ನು ನಡೆಸಿವೆ. ಪೂರ್ವ ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಉಕ್ರೇನ್ ರಾಷ್ಟ್ರೀಯತಾವಾದಿಗಳು 3,700ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಬಲವಂತದಿಂದ ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಉಕ್ರೇನಿಯನ್ ಪ್ರಜೆಗಳು ಬಲವಂತವಾಗಿ ಇಟ್ಟುಕೊಂಡಿರುವ ವಿದೇಶಿ ಪ್ರಜೆಗಳ ಸಂಖ್ಯೆ ಆಘಾತಕಾರಿಯಾಗಿದೆ. ಖಾರ್ಕಿವ್ ಭಾರತದ 3,189 ಪ್ರಜೆಗಳು, ವಿಯೆಟ್ನಾಂನ 2,700 ಪ್ರಜೆಗಳು, 202 ಚೀನಾದ ಪ್ರಜೆಗಳು, ಸುಮಿ ಭಾರತದ 576 ಪ್ರಜೆಗಳು, ಘಾನಾದ 101 ಪ್ರಜೆಗಳು, ಚೀನಾದ 121 ಪ್ರಜೆಗಳು ಉಕ್ರೇನ್ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚೆಕ್‌ಪೋಸ್ಟ್‌ಗಳು ತಾತ್ಕಾಲಿಕ ವಸತಿ, ವಿಶ್ರಾಂತಿಗಾಗಿ ಸ್ಥಳ ಮತ್ತು ಬಿಸಿ ಆಹಾರವನ್ನು ಒದಗಿಸಲು ಸಜ್ಜುಗೊಂಡಿವೆ ಎಂದು ರಷ್ಯಾದ ರಾಯಭಾರಿ ಹೇಳಿದ್ದಾರೆ. ಔಷಧಿಗಳ ದಾಸ್ತಾನು ಹೊಂದಿರುವ ಮೊಬೈಲ್ ವೈದ್ಯಕೀಯ ಕೇಂದ್ರಗಳೂ ಇವೆ. ಸ್ಥಳಾಂತರಿಸಿದ ಪ್ರತಿಯೊಬ್ಬರನ್ನೂ ನಂತರ ಬೆಲ್ಗೊರೊಡ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ವಿಮಾನದ ಮೂಲಕ ಅವರ ತಾಯ್ನಾಡಿಗೆ ಸಾಗಿಸಲಾಗುತ್ತದೆ.
ಆದರೆ, ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಪರಿಸ್ಥಿತಿಯ ಬಗ್ಗೆ ಭಾರತಕ್ಕೆ ಯಾವುದೇ ವರದಿಗಳು ಬಂದಿಲ್ಲ ಎಂದು ಹೇಳಿದ್ದಾರೆ. ಖಾರ್ಕಿವ್ ಮತ್ತು ನೆರೆಯ ಪ್ರದೇಶಗಳಿಂದ ದೇಶದ ಪಶ್ಚಿಮ ಭಾಗಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವಲ್ಲಿ ನಾವು ಉಕ್ರೇನಿಯನ್ ಅಧಿಕಾರಿಗಳ ಬೆಂಬಲವನ್ನು ಕೋರಿದ್ದೇವೆ ಎಂದು ಬಾಗ್ಚಿ ಹೇಳಿದ್ದಾರೆ.
ರಷ್ಯಾ, ರೊಮೇನಿಯಾ, ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಮೊಲ್ಡೊವಾ ಸೇರಿದಂತೆ ಈ ಪ್ರದೇಶದ ದೇಶಗಳೊಂದಿಗೆ ಭಾರತವು ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಜೆಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. ಇದಕ್ಕೆ ಸಹಾಯ ಮಾಡಿ ಉಕ್ರೇನಿಯನ್ ಅಧಿಕಾರಿಗಳನ್ನು ನಾವು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಫಿರಂಗಿ ದಾಳಿ ನಡೆಯುತ್ತಿದೆ. ಅಲ್ಲಿನ ಪರಿಸ್ಥಿತಿ ಅಪಾಯಕಾರಿಯಾಗಿದ್ದು, ಇಂತಹ ಸನ್ನಿವೇಶದಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರಯಾಣಿಸುವುದು ನಮಗೆ ಇಷ್ಟವಿಲ್ಲ. ಅವರ ಪ್ರಯಾಣಕ್ಕೆ ಸುರಕ್ಷಿತ ಮಾರ್ಗ ಬೇಕಾದ್ದರಿಂದ ಎರಡೂ ಕಡೆಯವರು ಸ್ಥಳೀಯ ಕದನ ವಿರಾಮ ಘೋಷಿಸಿ ಎಂದು ಭಾರತ ರಷ್ಯಾ ಹಾಗೂ ಉಕ್ರೇನ್‌ಗೆ ಮನವಿ ಮಾಡಿತ್ತು. ಅದರ ಬೆನ್ನಲ್ಲೇ ರಷ್ಯಾ ಉಕ್ರೇನ್‌ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಸ್ಥಳೀಯ ಕಾಲಮಾನ ಇಂದು ಶನಿವಾರ ಬೆಳಗ್ಗೆ 11.30ರ ವೇಳೆಗೆ ರಷ್ಯಾ ಉಕ್ರೇನ್ ವಿರುದ್ಧದ ಕದನ ವಿರಾಮ ಘೋಷಣೆ ಮಾಡಿದೆ.
ಮಾನವೀಯ ದೃಷ್ಟಿಯಿಂದ ಉಕ್ರೇನ್ನಾದ್ಯಂತ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ರಷ್ಯಾ ಘೋಷಣೆ ಮಾಡಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್ ಗಳನ್ನು ಮುಕ್ತಗೊಳಿಸಲಾಗುವುದು ಎಂದು ಹೇಳಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿ 10 ದಿನಗಳ ನಂತರ ರಷ್ಯಾ ಕದನ ವಿರಾಮ ಘೋಷಿಸಿದೆ.
ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೇ ಏಕೆ ಹೋಗುತ್ತಾರೆ?
Russia Ukraine War Live: ಕದನ ವಿರಾಮ ಘೋಷಿಸಿದ ರಷ್ಯಾ, ಭಾರತೀಯರ ತೆರವು ಕಾರ್ಯಾಚರಣೆಗೆ ಹೊಸ ವೇಗ