
ಬೆಂಗಳೂರು: ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ಜವಾಬ್ದಾರಿ ಇದ್ದಿದ್ದರೆ ಶಿರಾ ಹಾಗೂ RR ನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸ್ತಿರಲಿಲ್ಲ. ಕೊರೊನಾ ವೇಳೆ ಉಪಚುನಾವಣೆ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೂ ಸ್ವಲ್ಪದಿನ ಬೈಎಲೆಕ್ಷನ್ ಮುಂದೂಡಿದ್ರೆ ಏನಾಗ್ತಿತ್ತು? ದೇಶದಲ್ಲಿ ಚುನಾವಣೆ ನಡೆಸುವ ಅವಶ್ಯಕತೆಯೇ ಇರಲಿಲ್ಲ. ಮೊನ್ನೆ ಶಿರಾ ಕ್ಷೇತ್ರದಲ್ಲಿ ನಾನು ಸಭೆಯನ್ನು ನಡೆಸಿದ್ದೆ. ನಂತರ ಎರಡು ದಿನ ಜ್ವರ ಬಂದು ಮನೆಯಲ್ಲಿ ಮಲಗಿದ್ದೆ. ಕೊರೊನಾ ವೇಳೆ ಕೇಂದ್ರ ಸರ್ಕಾರ ಜನಗಳ ಜೀವದ ಜತೆ ಆಟವಾಡ್ತಿದೆ ಎಂದು ಹೇಳಿದರು.
ಚುನಾವಣೆ ಹಿನ್ನೆಲೆ ನಾವು ಪ್ರಚಾರಕ್ಕೆ ಹೋಗಲೇಬೇಕಾಗುತ್ತದೆ. ಅಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಆಗುತ್ತಾ? ಎಲ್ಲರೂ ಮಾಸ್ಕ್ ಹಾಕಿ ಬರ್ತಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನಮ್ಮ ಕಥೆ ಬಿಡಿ. ಸಾಮಾನ್ಯ ಜನರ ಆರೋಗ್ಯ ಏನಾಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಸ್ವಲ್ಪನೂ ಯೋಚನೆ ಮಾಡಲಿಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.