ಬೆಂಗಳೂರು: ಶಾಸಕರಿಗೆ ವಿಷಯವನ್ನೇ ತಿಳಿಸದೇ ಸಂಸದರು ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರ ಸಭೆ ನಡೆಸಬಹುದು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದು ಸರಿಯೇ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿಧಾಸಭೆಯಲ್ಲಿ ಸಂಸದರ ಕಾರ್ಯವ್ಯಾಪ್ತಿಯ ಬಗ್ಗೆ ಪ್ರಶ್ನಿಸಿದರು.
ಇವರ ಪತ್ರ ಆಧರಿಸಿ ಸಂಸದರ ಸಭೆಗೆ ಹೋಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸುತ್ತಾರೆ. ಲೋಕಸಭಾ ಸದಸ್ಯರು ಶಾಸಕರ ಗಮನಕ್ಕೆ ಬಾರದಂತೆ ಅಧಿಕಾರಿಗಳ ಸಭೆ ಕರೆಯಬಹುದಾ? ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ಮಾಡಬಹುದಾ? ಇ-ಖಾತೆ ಬಗ್ಗೆಯೂ ಅಂಥ ಸಭೆಗಳಲ್ಲಿ ಚರ್ಚೆ ನಡೆಸುತ್ತಾರೆ. ಅವರಿಗೆ ಏನು ಅಧಿಕಾರ ಇದೆ? ಎಂದ ಕುಮಾರಸ್ವಾಮಿ ಪ್ರಶ್ನಿಸಿದರು.
ಮಾತಿಗೆ ಮುಂಚೆ ರೈಲ್ವೆ ಯೋಜನೆ ಎಂದು ಹೇಳುತ್ತಿರುತ್ತಾರೆ. ಚನ್ನಪಟ್ಟಣದ ಮಧ್ಯೆ ಏನಾದ್ರೂ ರೈಲು ಬಿಡ್ತಾರಾ? ಇವತ್ತೂ ಅಲ್ಲಿ ಸಭೆ ಮಾಡುತ್ತಿದ್ದಾರೆ. ಈಗಲೂ ಸಭೆ ನಡೆಯುತ್ತಿದೆ. ಶಾಸಕರನ್ನು ಬದಿಗಿಟ್ಟು ಹೀಗೆ ಸಭೆ ನಡೆಸುವುದು ಸರಿಯೇ ಎಂದು ಚನ್ನಪಟ್ಟಣ ಶಾಸಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸಿದ್ದರಾಮಯ್ಯ-ಕುಮಾರಸ್ವಾಮಿ ಮಾತಿನ ಸಂಘರ್ಷ
ವಸತಿ ಮತ್ತು ಅನ್ನಭಾಗ್ಯ ಯೋಜನೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. ‘ಸರ್ಕಾರದಲ್ಲಿ ಯಾರೇ ಇದ್ದರೂ ದುಡ್ಡು ಕೊಡಬೇಕಾಗುತ್ತದೆ. ವಸತಿ ಇಲಾಖೆಗೆ ಹಣ ಕೊಟ್ಟೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅದು ನಮ್ಮ ಸರ್ಕಾರ, ಆಗ ಇದ್ದುದು ಸಮ್ಮಿಶ್ರ ಸರ್ಕಾರ. ನೀವು ಕೊಟ್ಟಿದ್ದಲ್ಲ’ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು. ಈ ವೇಳೆ ಎಚ್‌ಡಿಕೆ ಮಧ್ಯಪ್ರವೇಶಿಸಲು ಮುಂದಾದಾಗ ಕೂತ್ಕೊಳಿ ಕೂತ್ಕೊಳಿ ಎಂದರು. ಅನ್ನಭಾಗ್ಯದ ಅಕ್ಕಿಗೆ ಹಣ ಒದಗಿಸಲು ನಾನು ಕಷ್ಟಪಟ್ಟಿದ್ದೆ ಎಂದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಆಕ್ಷೇಪಿಸಿದ ಪರಿಯಿದು.
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ವಸತಿ ಸಮಸ್ಯೆ ಬಗ್ಗೆ ಚರ್ಚೆಯಾಗಲಿ ಎಂದಷ್ಟೇ ನಾನು ಮಾತನಾಡಿದ್ದೆ. ನನ್ನ ಮಾತಿನ ಹಿಂದೆ ಯಾವುದೇ ದುರುದ್ದೇಶ ಇದರಲಿಲ್ಲ. ಯಾವ ಸರ್ಕಾರ ಬಂದರೂ ಯೋಜನೆ ಮುಂದುವರಿಸಬೇಕೆಂಬ ವಿಷಯ ನನಗೆ ಗೊತ್ತಿದೆ ಎಂದರು. ಈ ಮಾತಿಗೆ ಸಿಟ್ಟಾದ ಸಿದ್ದರಾಮಯ್ಯ, ಯಾವ ಸರ್ಕಾರದ ಅವಧಿಯಲ್ಲಿ ಏನೇನಾಗಿದೆ ಎಂಬ ದಾಖಲೆ ಕೊಡಿ ಎಂದು ಆಗ್ರಹಿಸಿದರು. ಕಟ್ಟಿದ ಮನೆ ಎಷ್ಟು, ಎಷ್ಟು ಕೊರತೆಯಾಗಿದೆ ದಾಖಲೆ ಇಡಿ ಎಂದರು. ವಸತಿ ಸಚಿವ ಸೋಮಣ್ಣ ಮಧ್ಯಪ್ರವೇಶಿಸಲು ಯತ್ನಿಸಿದಾಗ ‘ವಸತಿ ಸಚಿವರೇ ನೀವು ಗಡಿಬಿಡಿ ಮಾಡಬೇಡಿ’ ಎಂದು ಸಿದ್ದರಾಮಯ್ಯ ಗದರಿದರು.
ಕುಮಾರಸ್ವಾಮಿಯವರೇ ನಿಮ್ಮ ಬಳಿಯಿರುವ ದಾಖಲೆ ಇಡಿ ಎಂದು ಸದನದಲ್ಲಿಯೇ ಸವಾಲು ಹಾಕಿದರು. ನನ್ನ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸವೆಷ್ಟು? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸವೆಷ್ಟು ಬಹಿರಂಗಪಡಿಸಿ ಎಂದು ಕೋರಿದರು.
ಇದನ್ನೂ ಓದಿ: ಬಿಜೆಪಿ ಸುಳ್ಳು ಹೇಳ್ಕೊಂಡು ಅಧಿಕಾರ ಮಾಡ್ತಿದೆ, ಚಿನ್ನವನ್ನೆಲ್ಲಾ ಬ್ಯಾಂಕ್ನಲ್ಲಿ ಇಟ್ಟು ಜನ ಜೀವನ ಮಾಡಬೇಕಿದೆ: ಸಿದ್ದರಾಮಯ್ಯ
ಇದನ್ನೂ ಓದಿ: ರೈತ ಚಳವಳಿ ಸ್ಪಾನ್ಸರ್ಡ್: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರೈತರ ಹೋರಾಟ
(HD Kumaraswamy Questions Act of Bengaluru Rural MP calling Meetings in Channapatna Ramanagara)
Published On - 4:49 pm, Mon, 20 September 21