ದೇವೇಗೌಡ ಆಸ್ಪತ್ರೆಗೆ ದಾಖಲು: ತಂದೆಯನ್ನು ನೋಡಲು ದಿಲ್ಲಿಯಿಂದ ದೌಡಾಯಿಸಿದ ಕುಮಾರಸ್ವಾಮಿ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ ಡಿ ದೇವೇಗೌಡ ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿ ತಂದೆಯ ಆರೋಗ್ಯ ವಿಚಾರಿಸಿದರು. ಇನ್ನು ತಂದೆಯ ಆರೋಗ್ಯದ ಮಾಹಿತಿ ಪಡೆದುಕೊಂಡು ಮಾಧ್ಯಮಗಳಿಗೂ ಮಾಹಿತಿ ಹಂಚಿಕೊಂಡಿದ್ದಾರೆ.

ದೇವೇಗೌಡ ಆಸ್ಪತ್ರೆಗೆ ದಾಖಲು: ತಂದೆಯನ್ನು ನೋಡಲು ದಿಲ್ಲಿಯಿಂದ ದೌಡಾಯಿಸಿದ ಕುಮಾರಸ್ವಾಮಿ
Kumaraswamy And Devegowda

Updated on: Oct 09, 2025 | 4:04 PM

ಬೆಂಗಳೂರು, (ಅಕ್ಟೋಬರ್ 09): ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ (HD Devegowda) ಅವರು ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ (Bengaluru) ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದ ದೇವೇಗೌಡರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ದೊಡ್ಡಗೌಡರು ಚೇತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ(ಅಕ್ಟೊಬರ್ 08) ರಾತ್ರಿ ತೀವ್ರ ನಿಗಾ ಘಟಕದಿಂದ ವಾರ್ಡ್​ ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ತಂದೆಯನ್ನು ನೋಡಲು ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಅವರು ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದು, ಸಹೋದರರಾದ ರೇವಣ್ಣ ಹಾಗೂ ಕುಮಾರಸ್ವಾಮಿ ಒಟ್ಟಿಗೆ ಆಸ್ಪತ್ರೆಗೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ.

ಇನ್ನು ತಂದೆಯ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈಗ ವೈದ್ಯರ ಚಿಕಿತ್ಸೆ ನಡೆಯುತ್ತಿದ್ದು, ಸದ್ಯ ಅವರಿಗಿದ್ದ ಸಮಸ್ಯೆ ನಿವಾರಿಸಿದ್ದಾರೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯತೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ಒಂದು ಇಸ್ಚಾರ್ಜ್ ಆಗಬಹುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್​​​ ಡಿ ದೇವೇಗೌಡರ ಆರೋಗ್ಯ ಈಗ ಹೇಗಿದೆ? ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಇಲ್ಲಿದೆ

ಅನಾರೋಗ್ಯದ ಹಿನ್ನೆಲೆ ಮಂಗಳವಾರ ರಾತ್ರಿ ಮಾಜಿ ಪ್ರಧಾನಿಗಳಾದ ಹೆಚ್‌ಡಿ ದೇವೇಗೌಡರನ್ನು ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಡಾ.ಸುದರ್ಶನ್ ಬಲ್ಲಾಳ್ ಅವರು ದೇವೇಗೌಡರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ದೇವೇಗೌಡರ ಆರೋಗ್ಯ ಈಗ ಹೇಗಿದೆ?

ಸದ್ಯ ಹೆಚ್‌ಡಿ ದೇವೇಗೌಡರ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ನಿನ್ನೆ(ಅಕ್ಟೋಬರ್ 08) ರಾತ್ರಿ  ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು. ನುರಿತ ವೈದ್ಯರ ತಂಡದಿಂದ ದೇವೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ವೈದ್ಯರ ತಂಡದ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದು, ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಇನ್ನು ದೇವೇಗೌಡರು ದಾಖಲಾಗುತ್ತಿದ್ದಂತೆ ಪುತ್ರ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಆಸ್ಪತ್ರೆಗೆ ದೌಡಾಯಿಸಿದ್ದರು. ತಂದೆಯ ಆರೋಗ್ಯ ವಿಚಾರಿಸಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೇ ಹಿಂದಿರುಗಿದ್ದರು. ನಂತರ ಆಪ್ತರಿಂದ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸಂದೇಶ ರವಾನಿಸಿದ್ದರು. ಇನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ