ಕರ್ನಾಟಕ ರಾಜಕಾರಣದಲ್ಲಿ ಜೋರಾಯ್ತು ಎಫ್​ಐಆರ್ ಪಾಲಿಟಿಕ್ಸ್: ಹೆಚ್​ಡಿಕೆ vs ವಿಜಯ್ ಟಾಟಾ ಪ್ರಕರಣದ ಸಮಗ್ರ ವಿವರ ಇಲ್ಲಿದೆ

|

Updated on: Oct 04, 2024 | 1:03 PM

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ಮಾಡಿರುವ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಒಂದೆಡೆ ಸಚಿವರ ವಿರುದ್ಧ ಉದ್ಯಮಿ ವಿಜಯ್ ದೂರು ದಾಖಲಿಸಿದ್ದರೆ, ಇತ್ತ ವಿಜಯ್ ವಿರುದ್ಧವೂ ದೂರು ದಾಖಲಾಗಿದೆ. ವಿಜಯ್ ಟಾಟಾ ಮತ್ತು ಹೆಚ್​ಡಿಕೆ ನಡುವಿನ ಎಫ್​ಐಆರ್ ಜಟಾಪಟಿಯ ಸಮಗ್ರ ವಿವರ ಇಲ್ಲಿದೆ.

ಕರ್ನಾಟಕ ರಾಜಕಾರಣದಲ್ಲಿ ಜೋರಾಯ್ತು ಎಫ್​ಐಆರ್ ಪಾಲಿಟಿಕ್ಸ್: ಹೆಚ್​ಡಿಕೆ vs ವಿಜಯ್ ಟಾಟಾ ಪ್ರಕರಣದ ಸಮಗ್ರ ವಿವರ ಇಲ್ಲಿದೆ
ವಿಜಯ್ ಟಾಟಾ vs ಹೆಚ್​ಡಿಕೆ
Follow us on

ಬೆಂಗಳೂರು, ಅಕ್ಟೋಬರ್ 4: ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ಗಂಭೀರ ಆರೋಪ ಮಾಡಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಿಖಿಲ್ ಕುಮಾರಸ್ವಾಮಿಯನ್ನ ಚನ್ನಪಟ್ಟಣ ಉಪ ಚುನಾವಣೆಗೆ ಕಣಕ್ಕಿಳಿಸುತ್ತಾ ಇದ್ದೇನೆ, 50 ಕೋಟಿ ಕೊಡದೇ ಇದ್ದರೆ ನಿಮ್ಮ ಪ್ರಾಜೆಕ್ಟ್​ಗಳನ್ನು ಪೂರ್ಣಗೊಳಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ದೂರಿನ ಅನ್ವಯ ಕುಮಾರಸ್ವಾಮಿ ಮತ್ತು ಪರಿಷತ್ ಮಾಜಿ ಸದಸ್ಯ ರಮೇಶ್​​ಗೌಡ ವಿರುದ್ಧ ಈಗ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಮೇಶ್ ಗೌಡ ಎ1 ಆಗಿದ್ದರೆ, ಕುಮಾರಸ್ವಾಮಿ ಎ2 ಆಗಿದ್ದಾರೆ.

ಎಫ್ಐಆರ್​​ನಲ್ಲಿ ಏನಿದೆ?

ಆಗಸ್ಟ್ 24ರಂದು ಮನೆಗೆ ಮಾಜಿ ಎಂಎಲ್​ಸಿ ರಮೇಶ್ ಗೌಡ ಬಂದಿದ್ದರು. ಊಟ ಮಾಡುತ್ತಾ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ವಿವರಿಸತೊಡಗಿದರು. ನಿಖಿಲ್​ಗೆ ಟಿಕೆಟ್ ಅಂತಿಮವಾಗಿದ್ದು, ಸಕ್ರಿಯವಾಗಿರಲು ಮನವಿ ಮಾಡಿದರು. ಇದೇ ವೇಳೆ ಹೆಚ್​ಡಿ ಕುಮಾರಸ್ವಾಮಿಗೆ ರಮೇಶ್ ಕರೆ ಮಾಡಿದ್ದರು. ಬಳಿಕ ಕುಮಾರಸ್ವಾಮಿ ಜೊತೆ ಮಾತನಾಡಲು ಫೋನ್ ಕೊಟ್ಟರು. ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ವೇಳೆ ಉಪಚುನಾವಣೆ ಖರ್ಚಿಗೆ 50 ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎಂದರು. ಸರ್ ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಹೇಳಿದೆ. ನನ್ನ ಮಾತಿನಿಂದ ಕುಮಾರಸ್ವಾಮಿ ಕೋಪಗೊಂಡು, 50 ‌ಕೋಟಿ ರೂಪಾಯಿ ರೆಡಿ ಮಾಡು, ಇಲ್ಲವಾದರೆ ನಾನೇನ್ ಮಾಡುತ್ತೇನೋ ಗೊತ್ತಿಲ್ಲ. ರಿಯಲ್ ಎಸ್ಟೇಟ್ ಮಾತ್ರವಲ್ಲ, ಬದುಕೋದು ಕಷ್ಟ ಎಂದು ಬೆದರಿಸಿ, ಕುಮಾರಸ್ವಾಮಿ ಫೋನ್ ಇಟ್ಟರು. ಬಳಿಕ ರಮೇಶ್ ಗೌಡ ದೇವಸ್ಥಾನ, ಶಾಲೆ ಕಟ್ಟಿಸಲು 5 ಕೋಟಿ ರೂಪಾಯಿ ಕೊಡಿ ಎಂದರು. ಹಣ ನೀಡದೇ ಇದ್ದರೆ ನಿಮಗೆ ತೊಂದರೆ ಎಂದು ಧಮ್ಕಿ ಹಾಕಿದ್ದರು ಎಂದು ವಿಜಯ್ ಟಾಟಾ ಮಾಡಿರುವ ಆರೋಪದ ಬಗ್ಗೆ ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ರಮೇಶ್ ಗೌಡ ಪ್ರತಿ ದೂರು: ದೂರಿನಲ್ಲೇನಿದೆ?

ಇದಾದ ಬೆನ್ನಲ್ಲೇ ರಮೇಶ್ ಗೌಡ ಸಹ ಅಮೃತಹಳ್ಳಿ ಠಾಣೆಗೆ ವಿಜಯ್ ಟಾಟಾ ವಿರುದ್ಧ ಪ್ರತಿದೂರು ನೀಡಿದ್ದಾರೆ. ವಿಜಯ್ ಟಾಟಾ ಅವರೇ ನನ್ನ ಬಳಿ 100 ಕೋಟಿ ರೂಪಾಯಿ ಕೊಡುವಂತೆ ಹೇಳಿದ್ದರು. ಆಗಸ್ಟ್ 24 ರಂದು ಮನೆಗೆ ಊಟಕ್ಕೆ ಕರೆಸಿದ್ದರು. ಈ ವೇಳೆ ಉದ್ಯಮಿ ವಿಜಯ್, ನಾನು ಲಾಸ್​ನಲ್ಲಿದ್ದೇನೆ, ನನಗೆ ಹಣ ಬೇಕು. ನೂರು ಕೋಟಿ ರೂಪಾಯಿ ಕೊಡಿ, ಇಲ್ಲವಾದರೆ ನಿಮ್ಮನ್ನ ಮತ್ತು ಕುಮಾರಸ್ವಾಮಿ ಅವರನ್ನ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ರಮೇಶ್​ಗೌಡ ದೂರು ನೀಡಿದ್ದಾರೆ.

ಬೀದಿ ನಾಯಿ, ನರಿಗೆಲ್ಲಾ ಉತ್ತರ ಕೊಡಲ್ಲ: ಕುಮಾರಸ್ವಾಮಿ

ವಿಜಯ್ ಟಾಟಾ ಆರೋಪದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸುತ್ತಿದ್ದಂತೆಯೇ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕನಲಿ ಕೆಂಡವಾದರು. ‘ಬೀದಿ ನಾಯಿ, ನರಿಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ?ಅವನು ಯಾರು? ಅವನ ಬಗ್ಗೆ ಯಾಕೆ ಚರ್ಚೆ ಮಾಡ್ಲಿ’ ಎಂದರು.

ವಿಶೇಷ ಅಂದರೆ, ಸೆಪ್ಟೆಂಬರ್ 28 ರಂದು ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಆರೋಪ ಮಾಡಿದ್ದರು. ಅಂದು ವಿಜಯ್ ಟಾಟಾ ಹೆಸರನ್ನೂ ಉಲ್ಲೇಖಿಸಿದ್ದರು.

ವಿಜಯ್ ಟಾಟಾ ಹೇಳಿದ್ದೇನು?

ತಮ್ಮ ವಿರುದ್ಧ ಪ್ರತಿದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉದ್ಯಮಿ ವಿಜಯ್, ನನ್ನ ವಿರುದ್ಧ 100 ಕೋಟಿ ಕೇಳೀರೋ ಆರೋಪ ಮಾಡಿದ್ದಾರೆ. ಇದಕ್ಕೆ ಅರ್ಥಬೇಡವಾ? 100 ಕೋಟಿ ರೂಪಾಯಿ ಕೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ನಾನು ಯಾರು ಎಂದೇ ಗೊತ್ತಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಈಗ ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದಿದ್ದಾರೆ.

ವಿಜಯ್ ಟಾಟಾಗೆ ಪೊಲೀಸ್ ನೋಟಿಸ್

ಈ ಮಧ್ಯೆ, ವಿಜಯ್ ತಾತಾಗೆ ಅಮೃತಹಳ್ಳಿ ಪೊಲೀಸರಿಂದ ನೋಟಿಸ್ ನೀಡಲಾಗಿದ್ದು, ನೀಡಿದ ದೂರಿನ ಸಂಬಂಧ ದಾಖಲೆ ಒದಗಿಸುವಂತೆ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಈ ಮಧ್ಯೆ ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಎಫ್​ಐಆರ್ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ, 2018ರಲ್ಲಿ ಕಾಂಗ್ರೆಸ್​ನವರು ಕುಮಾರಸ್ವಾಮಿ ಅವರನ್ನ ಕುಚಿಕು ಕುಚಿಕು ಅಂತಿದ್ದರು. ಈಗ ಅದೆಲ್ಲ ಮರೆತು ಹೋಗಿದೆಯಾ ಎಂದು ಮಾತಿನಲ್ಲೇ ಚುಚ್ಚಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು ನೋಡಿ

ಈ ಮಧ್ಯೆ ಮೈಸೂರಿನಲ್ಲಿ ಜೆಡಿಎಸ್ ಮಾಜಿ ಶಾಸಕ ಸಾರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲಿಸಿರುವುದಕ್ಕೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಾರೆಯಾಗಿ, ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಎಫ್​ಐಆರ್​ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಜಟಾಪಟಿಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:02 pm, Fri, 4 October 24