ಸ್ಯಾಂಟ್ರೋ ರವಿ ಬಗ್ಗೆ ಎಚ್​ಡಿಕೆ ಬಳಿ ಸಾಕಷ್ಟು ಮಾಹಿತಿ ಇದೆ, ಪೊಲೀಸರಿಗೆ ಕೊಟ್ಟು ಸಹಕರಿಸಲಿ ಎಂದ ಗೃಹ ಸಚಿವ

| Updated By: Rakesh Nayak Manchi

Updated on: Jan 08, 2023 | 9:56 AM

ಸ್ಯಾಂಟ್ರೋ ರವಿ ಬಗ್ಗೆ ಹೆಚ್​​ಡಿಕೆ ಬಳಿ ಸಾಕಷ್ಟು ಮಾಹಿತಿ ಇದ್ದು, ತಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಲಿ ಆತನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸ್ಯಾಂಟ್ರೋ ರವಿ ಬಗ್ಗೆ ಎಚ್​ಡಿಕೆ ಬಳಿ ಸಾಕಷ್ಟು ಮಾಹಿತಿ ಇದೆ, ಪೊಲೀಸರಿಗೆ ಕೊಟ್ಟು ಸಹಕರಿಸಲಿ ಎಂದ ಗೃಹ ಸಚಿವ
ಆರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ
Follow us on

ಶಿವಮೊಗ್ಗ: ಸ್ಯಾಂಟ್ರೋ ರವಿ (Santro Ravi) ವಶಕ್ಕೆ ಪಡೆದು ವಿಚಾರಣೆ ಮಾಡಲು ಈಗಾಗಲೇ ಮೈಸೂರಿನ ಪೊಲೀಸ್ ಕಮಿಷನರ್​ಗೆ ಸೂಚನೆಯನ್ನ ನೀಡಿದ್ದೇನೆ. ಆತನ ವಿರುದ್ಧ ಯಾರೆಲ್ಲ ದೂರು ನೀಡಿದ್ದಾರೆ, ಏನೆಲ್ಲ ಮೋಸ ಮಾಡಿದ್ದಾನೆ ಎಂಬುದರ ಕುರಿತು ಮಾಹಿತಿ ಪಡೆದು ಸವಿಸ್ತಾರ ತನಿಖೆ ಮಾಡಲು ಹೇಳಿದ್ದೇನೆ. ಈ ಹಿಂದೆ ಆತನ ಮೇಲೆ ಗೂಂಡಾ ಕೇಸ್ ಕೂಡ ದಾಖಲಾಗಿದ್ದು, ತಕ್ಷಣ ಆತನ ಮೇಲೆ ಕ್ರಮಕ್ಕೆ ಸೂಚನೆಯನ್ನ ಕೊಟ್ಟಿದ್ದೇನೆ. ತನಿಖೆ ನಡೆಸಿ ಸ್ಯಾಂಟ್ರೋ ರವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು.

ನಗರದಲ್ಲಿ ಮಾತನಾಡಿದ ಗೃಹ ಸಚಿವರು, ಕುಮಾರಸ್ವಾಮಿಯವರ ಬಳಿ ಸ್ಯಾಂಟ್ರೋ ರವಿಯ ಬಗ್ಗೆ ತುಂಬಾ ಮಾಹಿತಿ ಇದೆ. 20 ವರ್ಷದಿಂದ ಆತ ಬಹಳ ರಾಜಕಾರಣಿಗಳ ಜೊತೆ ಒಡನಾಟ ಹೊಂದಿದ್ದಾನೆ. ರವಿಯದ್ದೂ ಕುಮಾರಸ್ವಾಮಿ ಜೊತೆ ಅದ್ಯಾವ ರೀತಿ ಸಂಬಂಧ ಇದೆ ಎನ್ನುವುದು ಗೊತ್ತಾಗಬೇಕಾಗಿದೆ. ಅವರಿಗೆ ಮಾತ್ರ ಫೋಟೋ, ಆಡಿಯೋ ಹೇಗೆ ಸಿಗುತ್ತದೆ. ಇದು ಆಲೋಚಿಸುವ ಸಂಗತಿ. ಅವರ ಬಳಿ ರವಿ ಕುರಿತು ಇರುವ ಮಾಹಿತಿಯನ್ನ ತನಿಖಾಧಿಕಾರಿಗೆ ಕೊಟ್ಟು ಸಹಕರಿಸಬೇಕು. ಆತ ದುಷ್ಟ ಆಗಿದ್ದರೆ ಕ್ರಮ ಕೈಗೊಳ್ಳಲು ಅನುಕೂಲ ಆಗುತ್ತದೆ. ಇದರ ಹಿನ್ನಲೆ ತನಿಖೆಯಿಂದ ಹೊರಬರಬೇಕಾಗಿದೆ. ಬಳಿಕ ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:Santro Ravi Case: ಸ್ಯಾಂಟ್ರೋ ರವಿ ಪ್ರಕರಣ ಬಗ್ಗೆ ಸಿಎಂ ಬೊಮ್ಮಾಯಿಗೆ ಗುಟ್ಟಾಗಿ ಮಾಹಿತಿ ನೀಡಿದ ಶಾಸಕ ಜಿ ಟಿ ದೇವೇಗೌಡ

ಯಾರು ಈ ಸ್ಯಾಂಟ್ರೋ ರವಿ

ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಮೈಸೂರು, ಬೆಂಗಳೂರಿನಲ್ಲಿ ವಾಸವಾಗಿರುವ ಈತ ಮೂಲತಃ ಮಂಡ್ಯದವನು. ವಯಸ್ಸು 52. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ‌ ವಾಸವಾಗಿದ್ದ. ಓದು ಈತನ ತಲೆಗೆ ಹತ್ತಲಿಲ್ಲ. ಪಿಯುಸಿ ಡ್ರಾಪ್ ಔಟ್ ಆಗಿದ್ದ ಮಂಜುನಾಥಗೆ ಮದುವೆಯಾಗಿ ಒಂದು ಹೆಣ್ಣು ಒಂದು ಗಂಡು ಮಗು ಇದೆ. ಈತ 1995ರಿಂದ ಹಲವಾರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಮೈಸೂರು ಬೆಂಗಳೂರು ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದೆ. ದ್ವಿಚಕ್ರ ವಾಹನ ಕಳ್ಳತನ, ಕಾರು ಕಳ್ಳತನ, ಅಪಹಣರಣ, ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ‌ ಈತ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. 1995ರಲ್ಲಿ ಮೊದಲ ಬಾರಿಗೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಂಜುನಾಥ್ ಆ ನಂತರ, ರವಿ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದ.

ಸ್ಯಾಂಟ್ರೋ ಕಾರಿನಲ್ಲಿ ವೇಶ್ಯಾವಾಟಿಕೆ ಹಿನ್ನೆಲೆ ಈತನಿಗೆ ಸ್ಯಾಂಟ್ರೋ ರವಿ ಎಂದು ಹೆಸರು ಬಂದಿತ್ತು. ಈತ ಸ್ಯಾಂಟ್ರೋ ಕಾರು ಸಮೇತ ಯುವತಿಯರನ್ನು ಸರಬರಾಜು‌ ಮಾಡುತ್ತಿದ್ದ.‌ ಅದರಲ್ಲೂ ರಷ್ಯಾ, ಇರಾನ್, ದೆಹಲಿ, ಮುಂಬೈ, ಕೊಲ್ಕಾತ್ತಾದಿಂದ ದಂಧೆಗೆ ಯುವತಿಯರನ್ನು ಕರೆಸುತ್ತಿದ್ದ. 2005ರಲ್ಲಿ ಈತನ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಮೈಸೂರು ಕಮಿಷನರ್ ಆಗಿದ್ದ ಪ್ರವೀಣ್ ಸೂದ್‌ ಈ‌ ಆದೇಶ ಹೊರಡಿಸಿದ್ದರು. ಅದಾದ ನಂತರ ಈತ ಒಂದು ವರ್ಷ ಬೆಂಗಳೂರು ಪರಪ್ಪನ ಜೈಲು ಸೇರಿದ್ದ. ಅಷ್ಟೇ ಅಲ್ಲ ಮೈಸೂರಿನಿಂದ ಗಡಿಪಾರು ಸಹ ಆಗಿದ್ದನು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:13 pm, Sat, 7 January 23