Santro Ravi Case: ಸ್ಯಾಂಟ್ರೋ ರವಿ ಪ್ರಕರಣ ಬಗ್ಗೆ ಸಿಎಂ ಬೊಮ್ಮಾಯಿಗೆ ಗುಟ್ಟಾಗಿ ಮಾಹಿತಿ ನೀಡಿದ ಶಾಸಕ ಜಿ ಟಿ ದೇವೇಗೌಡ

ನಿನ್ನೆಯಷ್ಟೇ ಸ್ಯಾಂಟ್ರೋ ರವಿ ಯಾರೂ ಅಂತಲೇ ನನಗೆ ಗೊತ್ತಿಲ್ಲ ಎಂದಿದ್ದ ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ ಇಂದು ಮೈಸೂರಿನಲ್ಲಿ ಪ್ರಕರಣದ ಕುರಿತು ಸಿಎಂ ಬೊಮ್ಮಾಯಿಗೆ ಗುಟ್ಟಾಗಿ ಮಾಹಿತಿ ನೀಡಿದ್ದಾರೆ.

Santro Ravi Case: ಸ್ಯಾಂಟ್ರೋ ರವಿ ಪ್ರಕರಣ ಬಗ್ಗೆ ಸಿಎಂ ಬೊಮ್ಮಾಯಿಗೆ ಗುಟ್ಟಾಗಿ ಮಾಹಿತಿ ನೀಡಿದ ಶಾಸಕ ಜಿ ಟಿ ದೇವೇಗೌಡ
ಶಾಸಕ ಜಿ ಟಿ ದೇವೇಗೌಡ, ಸಿಎಂ ಬೊಮ್ಮಾಯಿImage Credit source: deccanherald.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 07, 2023 | 5:23 PM

ಮೈಸೂರು: ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಸಿಎಂ ಬಸವರಾಜ ಬೊಮ್ಮಾಯಿ (CM Bommai) ನಾಯಿಮರಿ ತರ ಇರುತ್ತಾರೆ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ರಾಜ್ಯ ರಾಜಕಾರಣದಲ್ಲಿ ಸ್ಯಾಂಟ್ರೋ ರವಿ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದು, ಬಿಜೆಪಿ, ಕಾಂಗ್ರೆಸ್​ ಪಕ್ಷಗಳ ನಾಯಕರು ಪರಸ್ಪರ ಆರೋಪ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಸ್ಯಾಂಟ್ರೋ ರವಿ ಯಾರೂ ಅಂತಲೇ ನನಗೆ ಗೊತ್ತಿಲ್ಲ ಎಂದಿದ್ದ ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ (GT Devegowda) ಇಂದು (ಜ. 7) ಮೈಸೂರಿನ ಮಂಡಕಳ್ಳಿ ಏರ್​​ಪೋರ್ಟ್​ನಲ್ಲಿ ಗುಟ್ಟಾಗಿ ಪ್ರಕರಣದ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಸಿಎಂ ಬೊಮ್ಮಾಯಿಗೆ ಗುಟ್ಟಾಗಿ ಮಾಹಿತಿ ನೀಡಿದ ಶಾಸಕ ಜಿ.ಟಿ.ದೇವೇಗೌಡ   

ಈ ಹಿಂದೆ ಸ್ಯಾಂಟ್ರೋ ರವಿ ನಿವಾಸದ ಮೇಲೆ ದಾಳಿ ಆಗಿತ್ತು. ದಾಳಿ ಮಾಡಿದ್ದ ಪೊಲೀಸ್​​​ ಇನ್ಸ್‌ಪೆಕ್ಟರ್ ಸಸ್ಪೆಂಡ್ ಮಾಡಲಾಗಿತ್ತು. ಆಗ ಸಿದ್ದರಾಮಯ್ಯ ಸಿಎಂ ಆಗಿದ್ರು ಎಂದು ಹಳೆಯ ಪ್ರಕರಣದ ಬಗ್ಗೆ ಶಾಸಕ ಜಿ.ಟಿ.ದೇವೇಗೌಡ ಮಾಹಿತಿ ನೀಡಿದರು. ಎಲ್ಲವನ್ನೂ ಕೇಳಿಸಿಕೊಂಡ ಸಿಎಂ ಬೊಮ್ಮಾಯಿ ಕಾರು ಹತ್ತಿ ಹೊರಟು ಹೋದರು. ನಿನ್ನೆಯಷ್ಟೇ ಸ್ಯಾಂಟ್ರೋ ರವಿ ಯಾರೂ ಅಂತಲೇ ನನಗೆ ಗೊತ್ತಿಲ್ಲ. ನಾನು ಲೈನ್‌ನಲ್ಲಿ ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದರು.

ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ನೆರವು, H.S.ದೇವರಾಜ್ ತೆರವು: ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ನೇಮಕ

ಸ್ಯಾಂಟ್ರೋ ರವಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸೂಚನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಇನ್ನು ಪ್ರಕರಣ ಕುರಿತಾಗಿ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಸ್ಯಾಂಟ್ರೋ ರವಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮೈಸೂರು ಪೊಲೀಸ್ ಕಮಿಷನರ್​ಗೆ ಸೂಚನೆ ನೀಡಿದ್ದೇನೆ. ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಕೇಸ್​ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ಹಿಂದೆ ಸ್ಯಾಂಟ್ರೋ ರವಿ ವಿರುದ್ಧ ಗೂಂಡಾ ಕೇಸ್ ದಾಖಲಾಗಿದೆ. ಸ್ಯಾಂಟ್ರೋ ರವಿ ಬಗ್ಗೆ ಮಾಜಿ ಸಿಎಂ ಹೆಚ್.​​ಡಿ. ಕುಮಾರಸ್ವಾಮಿ ಬಳಿ ಸಾಕಷ್ಟು ಮಾಹಿತಿ ಇದೆ. ಹೆಚ್​​ಡಿಕೆ ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡಲಿ. ತನಿಖೆ ನಡೆಸಿ ಸ್ಯಾಂಟ್ರೋ ರವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ

ಸ್ಯಾಂಟ್ರೋ ರವಿ ಯಾರೂ ಅಂತಾನೇ ನನಗೆ ಗೊತ್ತಿಲ್ಲ: ಮುನಿರತ್ನ 

ವಿಕಾಸಸೌಧದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಹೇಳಿಕೆ ನೀಡಿದ್ದು, ಸ್ಯಾಂಟ್ರೋ ರವಿ ಯಾರೂ ಅಂತಾನೇ ನನಗೆ ಗೊತ್ತಿಲ್ಲ. ಮುಂಬೈಗೆ ಹೋಗಿದ್ದವರ ಸಾಲಿನಲ್ಲಿ ನಾನು ಇಲ್ಲ. ಆ ಸಮಯದಲ್ಲಿ ನಾನು ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿ ಇದ್ದೆ. ನಾನು ಯಾವ ಕೋರ್ಟ್​​ಗೆ ಹೋಗಿಲ್ಲ, ಜಾಮೀನು ಸಹ ಪಡೆದಿಲ್ಲ. ಹೆಚ್​.ಡಿ.ಕುಮಾರಸ್ವಾಮಿ ಖಾಲಿ ಬುಟ್ಟಿಯಲ್ಲಿ ಹಾವು ಇದೆ ಅಂತಾರೆ. 70 ಎಂಎಂ ಸ್ಕ್ರೀನ್ ಹಾಕಿಸಿ ವ್ಯವಸ್ಥೆ ಮಾಡ್ತೀನಿ ಯಾವ ಹಾವು ಇದೆಯೋ ಬಿಡುಗಡೆ ಮಾಡಲಿ. 70 ಎಂಎಂ ಸ್ಕ್ರೀನ್​​ನಲ್ಲಿ ಇನ್ನು ಯಾವ ಸಿನಿಮಾ ಕೂಡ ಬಂದಿಲ್ಲ ಎಂದರು.

H.D.ಕುಮಾರಸ್ವಾಮಿ ಕೂಡ ನಿರ್ಮಾಪಕರು ಅವರು ಬಿಡುಗಡೆ ಮಾಡಲಿ. ಕುಮಾರಸ್ವಾಮಿ ಸ್ಯಾಂಪಲ್ ಬಿಟ್ಟಿದ್ದೀನಿ ಅಂತಾರೆ, ಅದೇನು ಸ್ವೀಟಾ? ಮೈತ್ರಿ ಸರ್ಕಾರ ಹೇಗೋ ಹೋಯ್ತು, ನಮ್ಮ ಪಾಡಿಗೆ ನಾವು ಇದ್ದೇವೆ. ಬಿಜೆಪಿಯವರು ನಮ್ಮನ್ನು ಕುಟುಂಬದ ರೀತಿ ನೋಡ್ತಿದ್ದಾರೆ. ಸ್ಯಾಂಟ್ರೋ ರವಿ ಹಿನ್ನೆಲೆ ಏನು?, ಆತನ ಬಗ್ಗೆ ಯಾಕೆ ಮಾತಾಡಬೇಕು ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:20 pm, Sat, 7 January 23