
ಪ್ರಶ್ನೆ ಅದಲ್ಲ. ಅದಿರೋದು ಜವಾಬದಾರಿಯುತ ಸ್ಥಾನದಲ್ಲಿರುವವರು ಈ ಡ್ರಗ್ಸ್ ಹಾವಳಿಗೆ ನೀಡುತ್ತಿರುವ ಪ್ರತಿಕ್ರಿಯೆಯಲ್ಲಿ. ಉದಾಹರಣೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸದರಿ ಸಮಸ್ಯೆಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಅಂತ ನಿಮಗೆ ಗೊತ್ತಿರಬಹುದು. ಸೋಮವಾರದಂದು ನೀಡಿರುವ ಹೇಳಿಕೆಯೊಂದರಲ್ಲಿ ಕುಮಾರಸ್ವಾಮಿ, ಡ್ರಗ್ಸ್ ಹಣವನ್ನು ತಮ್ಮ ಸಮ್ಮಿಶ್ರ ಸರ್ಕಾರ ಉರುಳಿಸಲು ಬಳಸಲಾಯಿತು ಅಂತ ಹೇಳಿದ್ದಾರೆ. ಮುಂದುವರಿದು ಹೇಳಿರುವ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಡ್ರಗ್ಸ್ ದಂಧೆಯಲ್ಲಿರುವವರನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಬೇಕೆನ್ನುವಷ್ಟರಲ್ಲಿ ಅವರು ಶ್ರೀಲಂಕಾಗೆ ಓಡಿಹೋದರಂತೆ!
ಅವರ ಮೊದಲ ಹೇಳಿಕೆಯನ್ನು ಸ್ವಲ್ಪ ಗಮನಿಸಿ. ಸರ್ಕಾರ ಉರುಳುಸಿವ ಪ್ರಯತ್ನ ನಡೆಯುತ್ತಿದ್ದಾಗ, ಕುಮಾರಣ್ಣ ಒಬ್ಬೊಬ್ಬ ಶಾಸಕನಿಗೆ 30, 50, 100 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಲಾಗುತ್ತಿದೆ ಎಂದು ಅಳುತ್ತಾ ಹೇಳುತ್ತಿದ್ದರೆ ಹೊರತು ಯಾವತ್ತೂ ಅದು ಡ್ರಗ್ಸ್ ಮಾರಾಟದಿಂದ ಬಂದ ಹಣ ಅಂತ ಹೇಳಲಿಲ್ಲ.
ಆದರೆ, ಅವರಿಗೆ ಈಗ ಜ್ಞಾನೋದಯವಾಗಿ ಅದು ಡ್ರಗ್ಸ್ ಹಣ ಅಂತ ಅನಿಸಿದೆ. ಅಥವಾ ಅವರೇನಾದರೂ ಮರೆಗುಳಿತನದ ಕಾಯಿಲೆಯಿಂದ ಬಳಲುತ್ತಿದ್ದಾರೆಯೇ? ಡ್ರಗ್ಸ್ ಎಷ್ಟು ಅಪಾಯಕಾರಿಯಾಗಿ ತನ್ನ ಮೃತ್ಯುಪಾಶವನ್ನು ಯುವಕರ ಮೇಲೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮೇಲೆ ಬೀಸಿದೆ ಅನ್ನೋದರ ಬಗ್ಗೆ ನಮ್ಮ ನಾಯಕರಿಗೆ ಯೋಚನೆಯೇ ಇಲ್ಲ. ಇದರಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ.
ಕುಮಾರಸ್ವಾಮಿ ಅವರ ಎರಡನೇ ಹೇಳಿಕೆಯನ್ನು ನೋಡುವ. ಕಾರ್ಯಾಚರಣೆ ನಡೆಸಿ ಬಂಧಿಸಬೇಕೆನ್ನುವಷ್ಟರಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡವರು, ಶ್ರೀಲಂಕಾಗೆ ಓಡಿಹೋದರೆಂದು ಅವರು ಹೇಳುತ್ತಾರೆ. ಸ್ವಾಮಿ, ಸಾವಿರಾರು ಮೈಲಿದೂರದ ಅಮೇರಿಕಾದ ಯಾವುದೋ ಒಂದು ಮೂಲೆಯಲ್ಲಿ ಅವಿತು ಕೂತಿದ್ದ ಅಂಡರ್ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ನಮ್ಮ ಬೆಂಗಳೂರು ಪೊಲೀಸರು ದರದರನೆ ಎಳೆದುಕೊಂಡು ಬಂದರು. ನಡೆದು ಹೋಗುವಷ್ಟು ದೂರದಲ್ಲಿರುವ ಶ್ರೀಲಂಕಾದಿಂದ ಅವರನ್ನು ಎತ್ಹಾಕಿಕೊಂಡು ಬರೋದು ಪೊಲೀಸರಿಗೆ ಕಷ್ಟವಿತ್ತೇ?