ಬೆಂಗಳೂರು: ನನ್ನ ಹತ್ಯೆಗೆ 60 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ವಡೇರಹಳ್ಳಿ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೆದುರು ತಮ್ಮ ಜೀವ ಭಯದ ವಿಚಾರ ತಿಳಿಸಿದ ವಡೇರಹಳ್ಳಿ ಜಯರಾಮ್ ಬೆಂಗಳೂರು ಉತ್ತರ ತಾಲೂಕು ವಡೇರಹಳ್ಳಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ.
2009ರ ಡಿಸೆಂಬರ್‌ನಲ್ಲಿ ನಡೆದಿತ್ತು ಅಟ್ಯಾಕ್ 2009ರ ಜೂನ್ 12ರಂದು 1 ಕೋಟಿ ರೂಪಾಯಿ ಹಣಕ್ಕಾಗಿ ಜಯರಾಮ್ ಬಳಿ ನಟೋರಿಸ್ ರೌಡಿಶೀಟರ್ ಬೆತ್ತನಗೆರೆ ಶಂಕರ ಬೇಡಿಕೆ ಇಟ್ಟಿದ್ದನಂತೆ. ಆಗ ಜಯರಾಮ್ ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಸುಪಾರಿ ಪಡೆದು ಮುಖಂಡನ ಹತ್ಯೆಗೆ ಬೆತ್ತನಗೆರೆ ಶಂಕರ ಸ್ಕೆಚ್ ಹಾಕಿದ್ದನಂತೆ.
ಮಾಕಳಿ ನಾಗ ಎಂಬಾತನ ಬಳಿ ಸುಪಾರಿ ಪಡೆದಿದ್ದ ಬೆತ್ತನಗೆರೆ ಮಂಜ, ಬೆತ್ತನಗೆರೆ ಶಂಕರ ಹಾಗೂ ಹುಸ್ಕೂರು ಶಿವ ಆಗ 50 ಲಕ್ಷಕ್ಕೆ ಸುಪಾರಿ ಪಡೆದು ಅಟ್ಯಾಕ್ ಮಾಡಿದ್ದರಂತೆ. ಶೂಟ್ ಔಟ್ ನಡೆಸಿ ಜಯರಾಮ್‌ನ ಮುಗಿಸಲು ಸಹ ಬಂದಿದ್ದರಂತೆ. ಆದರೆ, ಗನ್ ಫೈರ್ ಆದರೂ ಅದೃಷ್ಟವಶಾತ್ ವಡೇರಹಳ್ಳಿ ಜಯರಾಮ್ ಎಸ್ಕೇಪ್ ಆಗಿದ್ದರಂತೆ.
ಕಳೆದ ಮಾರ್ಚ್ 14ರಂದು ಮತ್ತೆ ಹತ್ಯೆಗೆ ಪ್ಲಾನ್ ಹಾಕಿದ್ದ ರೌಡಿಗಳು ಜಯರಾಮ್ ಮಂಡ್ಯದಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದಾಗ ಹತ್ಯೆ ಮಾಡಲು ಸಂಚು ರೂಪಿಸಿದ್ದರಂತೆ.
ಆದರೆ, ತಮ್ಮ ಗನ್ಮ್ಯಾನ್ ಸಮಯ ಪ್ರಜ್ಞೆಯಿಂದ ಜಯರಾಮ್ ಅಲ್ಲೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದರಂತೆ. ಜಯರಾಮ್ ಅದೃಷ್ಟಕ್ಕೆ ಮಂಡ್ಯದಲ್ಲಿ ಪೊಲೀಸರ ಕೈಗಿ ಸಿಕ್ಕಿಬಿದ್ದು ಪ್ಲಾನ್ ಬಗ್ಗೆ ಬಾಯ್ಬಿಟ್ಟಿದ್ದ ಗ್ಯಾಂಗ್ ಡಕಾಯತಿ ಕೇಸ್ ಮೇಲೆ ಜೈಲಿಗೆ ಹೋಗಿದ್ದರಂತೆ.
‘ರೌಡಿಗಳಿಗೆ ಶಾಸಕ ವಿಶ್ವನಾಥ್ ಬೆನ್ನುಲುಬಾಗಿದ್ದಾರೆ’ ಆದರೆ, ಈಗ ರೌಡಿಗಳಿಗೆ ಬೆನ್ನುಲುಬಾಗಿ ಯಲಹಂಕ ವಿಧಾನಸಭಾ ಕ್ಷೇತ್ರದ BJP ಶಾಸಕ ವಿಶ್ವನಾಥ್ ಇದ್ದಾರೆ ಎನ್ನುವ ಗಂಭೀರ ಆರೋಪವನ್ನು ಜಯರಾಮ್ ಮಾಡಿದ್ದಾರೆ. ಇದಕ್ಕೆ ಕಾರಣ ಜಯರಾಮ್ ವಿಶ್ವನಾಥ್‌ಗೆ ಪ್ರಬಲ ಎದುರಾಳಿ. ಗ್ರಾಮ ಪಂಚಾಯತಿ ಹಂತದಿಂದಲೂ ಜಯರಾಮ್‌ನ ತುಳಿಯಲು ವಿಶ್ವನಾಥ್ ಯತ್ನಿಸಿದ್ದಾರೆ ಅಂತಾ ಜಯರಾಮ್ ಆರೋಪಿಸಿದ್ದಾರೆ.
ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿ ಆಗಿರುವ ಜಯರಾಮ್, ವಿಶ್ವನಾಥ್‌ಗೆ ಕಂಟಕವಾಗಬಹುದು ಎಂದು ಶಾಸಕರು, ರೌಡಿಗಳ ಜೊತೆ ನಿಕಟ ಸಂಪರ್ಕ ಬೆಳೆಸಿದ್ದಾರೆ ಅಂತಾ ಜಯರಾಮ್ ಆರೋಪಿಸಿದ್ದಾರೆ. ನನ್ನನ್ನ ಹೊಡೆಸೋಕೆ 60 ಲಕ್ಷ ಚಂದ ವಸೂಲಿ ಮಾಡಿದ್ದಾರೆ. ಅದನ್ನ ಬೆತ್ತನಗೆರೆ ಮಂಜನಿಗೆ ಕೊಟ್ಟಿದ್ದಾರೆ. ಅದರಲ್ಲಿ ಕೊಲೆ ಮಾಡಲಿರುವ ಹುಡುಗರಿಗೆ 30 ಲಕ್ಷ ಕೊಡಲಾಗಿದೆ ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಈ ವಿಚಾರ ಪೊಲೀಸರಿಗೂ ತಿಳಿದಿದೆ. ಹೀಗಾಗಿ, ಅವರು ನನ್ನನ್ನ ಉಳಿಸುವ ಪ್ರಯತ್ನ ಮಾಡಿದ್ದಾರೆ.
ಆದ್ರೆ ಅವರ ಮೇಲೆ ರಾಜಕೀಯ ಒತ್ತಡವಿದೆ. ಹಾಗಾಗಿ, ನನಗೆ ಏನ್ ಮಾಡ್ತಾರೆ ಅನ್ನೋ ಭಯ ಶುರುವಾಗಿದೆ. ಕೆಲ ಅಧಿಕಾರಿಗಳು ನಮ್ಮ ಲಿಮಿಟ್‌ನಲ್ಲಿ ಹೊಡೆಯಬೇಡಿ. ಬೇರೆ ಕಡೆ ಕರೆದುಕೊಂಡು ಹೋಗಿ ಹೊಡೆಯಿರಿ ಎಂದಿದ್ದಾರಂತೆ. ಹೀಗೆ, ಪರೋಕ್ಷವಾಗಿ ಮಾದನಾಯಕನಹಳ್ಳಿ ಪೊಲೀಸರ ವಿರುದ್ಧ ಜಯರಾಮ್ ಆರೋಪ ಮಾಡಿದ್ದಾರೆ. ಜೊತೆಗೆ, ತನಗೆ ಇರುವ ಜೀವ ಭಯದ ಕುರಿತು ಮಾಧ್ಯಮಗಳ ಎದುರು ಜಯರಾಮ್ ಕಣ್ಣೀರಿಟ್ಟಿದ್ದಾರೆ.