
ಬೆಂಗಳೂರು, ಆಗಸ್ಟ್ 1: ಇತ್ತೀಚಿಗೆ ಅನೇಕರಲ್ಲಿ, ಅದರಲ್ಲೂ ಯುವ ಸಮೂಹದವರಲ್ಲಿ ಹೃದಯಾಘಾತ (Heart Attack) ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಸರ್ಕಾರವು ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಿತ್ತು. ಜಯದೇವ ಆಸ್ಪತ್ರೆಯ ವೈದ್ಯರ ತಂಡ ಕೂಡ ವರದಿ ನೀಡಿತ್ತು. ಈ ವರದಿಗಳಲ್ಲಿ ಚಾಲಕರಲ್ಲಿಯೇ ಹೃದಯಾಘಾತ ಪ್ರಕರಣಗಳು ಹೆಚ್ಚು ಕಂಡುಬರುತ್ತಿರುವುದು ಉಲ್ಲೇಖವಾಗಿದೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸಲಹೆ ಕೂಡ ನೀಡಲಾಗಿತ್ತು.
ಈ ವರದಿಯ ಬೆನ್ನಲ್ಲೇ ಇದೀಗ ಆರೋಗ್ಯ ಇಲಾಖೆ ಚಾಲಕರ ಆರೋಗ್ಯದ ಮೇಲೆ ನಿಗಾ ವಹಿಸಲು ಮುಂದಾಗಿದೆ. ಇದಕ್ಕಾಗಿ ಹೊಸ ನಿಯಮ ರೂಪಿಸಲು ರೂಪುರೇಷೆ ಸಿದ್ಧಪಡಿಸಿದೆ. ಅದರಂತೆ ಆಟೋ, ಕ್ಯಾಬ್, ಬಸ್ ಚಾಲಕರಿಗೆ ಡಿಎಲ್ (ಚಾಲನಾ ಪರವಾನಗಿ) ಹೇಗೆ ಕಡ್ಡಾಯವೋ ಅದೇ ರೀತಿ ಇನ್ಮುಂದೆ , ಹೆಲ್ತ್ ಚೆಕಪ್ ಸರ್ಟಿಫಿಕೇಟ್ (ಹೆಲ್ತ್ ಕಾರ್ಡ್) ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಚಾಲಕರಿಗೆ ಇಸಿಜಿ, ಬಿಪಿ, ಶುಗರ್ ಪರೀಕ್ಷೆ ಮಾಡಿಸಿ ಅವರು ಫಿಟ್ ಇದ್ದಾರೋ ಇಲ್ಲವೋ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ.
ಡಿಎಲ್ ಪಡೆಯುವಾಗ, ರಿನೀವಲ್ ಮಾಡಿಸುವಾಗ, ಜೊತೆಗೆ ಎಫ್ಸಿ ಮಾಡಿಸುವಾಗ ಚಾಲಕರಿಗೆ ಹೆಲ್ತ್ ಕಾರ್ಡ್ ನೀಡುವಂತೆ ಇಲಾಖೆ ನಿಯಮ ರೂಪಿಸಲಿದೆ. ಈಗಾಗಲೇ ಸಂಬಂಧ ಪಟ್ಟ ಸಾರಿಗೆ ಇಲಾಖೆ, ಟ್ರಾಫಿಕ್ ಪೊಲೀಸ್ ಇಲಾಖೆ ಜೊತೆಗೆ ಕೂಡಾ ಚರ್ಚಿಸಿದ್ದು, ಆರೋಗ್ಯ ಇಲಾಖೆಯಿಂದಲೇ ಹೆಲ್ತ್ ಚೆಕಪ್ ಮಾಡಿಸಬೇಕಾ ಅಥವಾ, ಬೇರೆಡೆಯಿಂದ ಪ್ರಮಾಣಪತ್ರ ಸಲ್ಲಿಕೆ ಮಾಡಲು ಸೂಚಿಸಬೇಕೇ ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಚಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಬಗ್ಗೆ ಆಟೋ, ಕ್ಯಾಬ್ ಚಾಲಕರು ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆ ಹೆಲ್ತ್ ಸರ್ಟಿಫಿಕೇಟ್ ಕಡ್ಡಾಯ ಮಾಡುತ್ತಿರುವುದನ್ನು ಸ್ವಾಗತಿಸಿದ್ದಾರೆ. ಈ ರೀತಿ ಮಾಡುವುದರಿಂದ ನಮಗೆ ಅನುಕೂಲ ಇದೆ. ನಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ನಮಗೂ ಕೂಡಾ ಅನೇಕ ಒತ್ತಡಗಳಿರುತ್ತವೆ ಎಂದು ಚಾಲಕರು ಹೇಳಿದ್ದಾರೆ.
ಇದನ್ನೂ ಓದಿ: ಚರ್ಮದ ಮೇಲೆ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು; ನಿರ್ಲಕ್ಷ್ಯ ಬೇಡ
ಒಟ್ಟಿನಲ್ಲಿ ಆರೋಗ್ಯ ಇಲಾಖೆ ಕಡ್ಡಾಯ ಹೆಲ್ತ್ ಸರ್ಟಿಫಿಕೇಟ್ ಜಾರಿಗೆ ಭಾಗಶಃ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆ ಇದೆ.