ಬೆಂಗಳೂರು: ಕೊರೊನಾ ಎರಡನೇ ಅಲೆಯ ಭೀತಿ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಟಫ್ ರೂಲ್ಸ್ ಜಾರಿಯಾಗಿದೆ. ಸಭೆ, ಸಮಾರಂಭಕ್ಕೆ ಇಂತಿಷ್ಟೇ ಜನ ಸೇರಬೇಕೆಂದು ನಿಯಮ ಮಾಡಲಾಗಿದೆ. ಇದರ ಅಡಿಯಲ್ಲಿ ತೆರೆದ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮದಲ್ಲಿ 500 ಜನ ಅತಿಥಿಗಳು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಜೊತೆಗೆ, ಹಾಲ್‌ಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ 200 ಜನ, ತೆರೆದ ಪ್ರದೇಶದಲ್ಲಿ ಬರ್ತ್‌ಡೇ ಆಚರಣೆಗೆ 100 ಜನ, ಹಾಲ್‌ಗಳಲ್ಲಿ ಬರ್ತ್‌ಡೇ ಆಚರಿಸಿದರೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇದಲ್ಲದೆ, ಅಂತ್ಯಕ್ರಿಯೆಯಲ್ಲಿ 50 ಜನ ಮಾತ್ರ ಭಾಗಿಯಾಗಬೇಕು. ತೆರೆದ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗೆ 500 ಜನರು, ತೆರೆದ ಪ್ರದೇಶದಲ್ಲಿ ರಾಜಕೀಯ ಕಾರ್ಯಕ್ರಮದಲ್ಲಿ 500 ಜನ ಭಾಗಿಯಾಗಬಹುದು ಎಂದು ಆರೋಗ್ಯ ಇಲಾಖೆ ಟಫ್ ರೂಲ್ಸ್ ಜಾರಿ ಮಾಡಿದೆ. ನೆರೆ ರಾಜ್ಯಗಳಲ್ಲಿ ಕೊರೊನಾ ಕೇಸ್ಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಟಫ್ ರೂಲ್ಸ್ ಜಾರಿಯಾಗಿದೆ.
ಇದರ ಜೊತೆಗೆ, ಹಳೇ ಕೊವಿಡ್ ಟೆಸ್ಟ್ ಆದೇಶ ಪರಿಷ್ಕೃತಗೊಳಿಸಿದ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಆದೇಶ ಪರಿಷ್ಕೃತಗೊಳಿಸಿದೆ. ಇದರನ್ವಯ, ಜಿಲ್ಲೆಗಳಲ್ಲಿ ದಿನ ನಿತ್ಯ ಕೊರೊನಾ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
ಅಂತೆಯೇ, ಬೆಂಗಳೂರು ನಗರ, BBMP ವ್ಯಾಪ್ತಿಯಲ್ಲಿ 40 ಸಾವಿರ ಟೆಸ್ಟ್, ಮೈಸೂರು ಜಿಲ್ಲೆಯಲ್ಲಿ ದಿನ ನಿತ್ಯ 5 ಸಾವಿರ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಅಷ್ಟೇ ಅಲ್ಲ, ಬೆಳಗಾವಿ ಜಿಲ್ಲೆಯಲ್ಲಿ 3 ಸಾವಿರ ಟೆಸ್ಟ್, ಕೊಡಗು 1 ಸಾವಿರ, ದಕ್ಷಿಣ ಕನ್ನಡದಲ್ಲಿ 3 ಸಾವಿರ ಟೆಸ್ಟ್, ಉಡುಪಿ 2 ಸಾವಿರ, ತುಮಕೂರು ಜಿಲ್ಲೆಯಲ್ಲಿ 3,500, ವಿಜಯಪುರ 2 ಸಾವಿರ ಟೆಸ್ಟ್ಗಳ ಗುರಿಯನ್ನು ನಿಗದಿ ಮಾಡಲಾಗಿದೆ. ಬೆಂಗಳೂರು, ಬಳ್ಳಾರಿ, ಮೈಸೂರು, ದಾವಣಗೆರೆ, ವಿಜಯಪುರ, ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ಬೀದರ್, ಉಡುಪಿ, ಕಲಬುರಗಿ, ತುಮಕೂರು ಜಿಲ್ಲೆಗಳಲ್ಲಿ ಕಠಿಣ ಕ್ರಮ ಜರುಗಿಸಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ RTPCR ಟೆಸ್ಟ್ ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಿತರನ್ನು ಕಡ್ಡಾಯವಾಗಿ ಪತ್ತೆ ಹಚ್ಚಬೇಕು. ಸಂಪರ್ಕಿತರ ಪತ್ತೆ ಕಾರ್ಯ ಕಡ್ಡಾಯವಾಗಿ 1:20 ಇರಬೇಕು ಎಂದು ಆರೋಗ್ಯ ಇಲಾಖೆ ರೂಲ್ಸ್ ಜಾರಿಮಾಡಿದೆ.
ಇದನ್ನೂ ಓದಿ: ‘ರಾಬರ್ಟ್ ಪೈರಸಿ ಮಾಡಿದವರಿಗೆ ಶಿಕ್ಷೆ ಕೊಡೋದು ದೊಡ್ಡ ವಿಚಾರವಲ್ಲ; ಆದ್ರೆ ಅದರಿಂದ ಬೇರೆ ನಟರ ಹೆಸರು ಬರುತ್ತವೆ’