AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ದಿಢೀರ್​ ಮಳೆ, ಭಾರೀ ಅವಾಂತರ, ಗೋಡೆ ಬಿದ್ದು ವೃದ್ಧೆ ಸಾವು, ನೀರಿನಲ್ಲಿ ಕೊಚ್ಚಿ ಹೋದ ಯುವ ಇಂಜಿನಿಯರ್

Bengaluru rains: ಎಂಜಿನಿಯರ್ ಮಿಥಿನ್ ಬೈಕ್ ಸಿಲುಕಿ ಹಾಕಿಕೊಂಡಿರೊ ಜಾಗದಲ್ಲೇ ಹುಡುಕಾಟ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಿಥಿನ್ ಸಿವಿಲ್ ಇಂಜಿನಿಯರ್ ಅಗಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜಕಾಲುವೆಯ ಅಂಡರ್ ಪಾಸ್ ಸಹ ಓಪನ್ ಮಾಡಿ, ಒಳಗೆ ಟಾರ್ಚ್ ಹಾಕಿ ಕಾರ್ಯಚರಣೆ ನಡೆಸಲಾಗುತ್ತಿದೆ.

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ದಿಢೀರ್​ ಮಳೆ, ಭಾರೀ ಅವಾಂತರ, ಗೋಡೆ ಬಿದ್ದು ವೃದ್ಧೆ ಸಾವು, ನೀರಿನಲ್ಲಿ ಕೊಚ್ಚಿ ಹೋದ  ಯುವ ಇಂಜಿನಿಯರ್
ಶುಕ್ರವಾರ ರಾತ್ರಿ ರಾಜಧಾನಿಯಲ್ಲಿ ದಿಢೀರ್​ ಮಳೆ, ಭಾರೀ ಅವಾಂತರ, ಗೋಡೆ ಬಿದ್ದು ವೃದ್ಧೆ ಸಾವು, ನೀರಿನಲ್ಲಿ ಕೊಚ್ಚಿ ಹೋದ ಯುವ ಇಂಜಿನಿಯರ್
TV9 Web
| Edited By: |

Updated on:Jun 18, 2022 | 12:30 PM

Share

ಬೆಂಗಳೂರು: ಮುಂಗಾರು ಮಳೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲವಾದರೂ ನಿನ್ನೆ ಶುಕ್ರವಾರ ರಾತ್ರಿ ರಾಜಧಾನಿಯಲ್ಲಿ ದಿಢೀರ್​ ಮಳೆಯಾಗಿದೆ. ಭಾರೀ ಪ್ರಮಾಣದಲ್ಲಿ ಮಳೆಯಾಗಿ ಭಾರೀ ಅವಾಂತರಗಳನ್ನೇ ಸೃಷ್ಟಿಸಿದೆ. ಗೋಡೆ ಬಿದ್ದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು. ಯುವ ಇಂಜಿನಿಯರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕಾವೇರಿ ನಗರ ನಿವಾಸಿ 60 ವರ್ಷದ ಮುನಿಯಮ್ಮ ನಿನ್ನೆ ಸುರಿದ ಮಳೆಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ 12:30 ರ ಸುಮಾರಿಗೆ ಗೋದ್ರೇಜ್ ಅಪಾರ್ಟ್ಮೆಂಟ್ ನ ಕಾಂಪೌಂಡ್ ಗೋಡೆಯೊಂದು ಮನೆಯ ಮೇಲೆ ಕುಸಿದ ಕಾರಣ ಮುನಿಯಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮುನಿಯಮ್ಮ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ರು. ನಿನ್ನೆ ಕೆಲಸ ಮುಗಿಸಿಕೊಂಡು ಮಕ್ಕಳ ಜೊತೆ ತಮ್ಮ ಮನೆಯಲ್ಲಿ ತಂಗಿದ್ದರು. ಮುನಿಯಮ್ಮ ಮನೆ ಹಿಂಬದಿ ಗೋದ್ರೇಜ್ ಅಪಾರ್ಟ್ಮೆಂಟ್ ಸುತ್ತಲೂ ಬೃಹತ್ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು. ಹಳೆಯ ಗೋಡೆಯ ಮೇಲೆ ಅಪಾರ್ಟ್ಮೆಂಟ್ ಹೊಸ ಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ನಿನ್ನೆ ಸುರಿದ ಭಾರೀ ಮಳೆಗೆ ಬೃಹತ್ ಆಕಾರದ ಕಲ್ಲು, ಗೋಡೆ ಮುನಿಯಮ್ಮ ಮನೆಯ ಮೇಲೆ ಬಿದ್ದ ಪರಿಣಾಮ ವೃದ್ಧೆ ಸಾವಿಗೀಡಾಗಿದ್ದಾರೆ. ಮುನಿಯಮ್ಮ ಮಗ ಮತ್ತು ಸೊಸೆ ಗಾಯಗೊಂಡಿದ್ದಾರೆ. ಒಟ್ಟು ಆರು ಜನ ಆ ಮನೆಯಲ್ಲೇ ಇದ್ದರು.

ಇದೇ ವೇಳೆ ಬೆಂಗಳೂರು ಮಳೆಗೆ ಯುವ ಎಂಜಿನಿಯರ್​ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರಲ್ಲಿ ಕೊಚ್ಚಿ ಹೋದ ಮಿಥಿನ್​​ ಸಾಗರ್​​ಗಾಗಿ ಎನ್​ಡಿಆರ್​ಎಫ್ ತಂಡದಿಂದ ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ. ಯುವಕ ಕೊಚ್ಚಿ ಹೋಗಿರುವ ಜಾಗದಿಂದಲೇ 16 ಎನ್​ಡಿಆರ್​​ಎಫ್ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಎನ್ ಡಿ ಆರ್ ಎಫ್ ತಂಡವು ರಭಸವಾಗಿ ಹರಿಯುತ್ತಿರುವ ನೀರನಲ್ಲಿಯೇ ಕಾರ್ಯಚರಣೆ ನಡೆಸುತ್ತಿದೆ. ಎಂಜಿನಿಯರ್ ಮಿಥಿನ್ ಅವರ ಬೈಕ್ ಸಿಲುಕಿ ಹಾಕಿಕೊಂಡಿರೊ ಜಾಗದಲ್ಲೇ ಹುಡುಕಾಟ ನಡೆದಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಿಥಿನ್ ಸಿವಿಲ್ ಇಂಜಿನಿಯರ್ ಅಗಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 6 ತಿಂಗಳಿನಿಂದ ಇಲ್ಲಿ ಸ್ನೇಹಿತರೊಂದಿಗೆ ವಾಸವಿದ್ದಾರೆ. ರಾಜಕಾಲುವೆಯ ಅಂಡರ್ ಪಾಸ್ ಸಹ ಓಪನ್ ಮಾಡಿ, ಒಳಗೆ ಟಾರ್ಚ್ ಹಾಕಿ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ ಅಂಡರ್ ಪಾಸ್ ನಲ್ಲಿ ಕಾರ್ಯಚರಣೆ ಮಾಡೋದೆ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಅಂಡರ್ ಪಾಸ್ ನಲ್ಲೂ ನೀರು ರಭಸವಾಗಿ ಹರಿಯುತ್ತಿದೆ.

ಇದರ ಹೊರತಾಗಿ ರಾಜಧಾನಿಯಲ್ಲಿ ಅನೇಕ ಮಳೆ ಅವಾಂತರ ಹೇಳತೀರದಾಗಿದೆ. ಮಳೆ ನೀರು ಅಪಾರ್ಟ್​​ ಮೆಂಟ್​​ ಬೇಸ್​ಮೆಂಟ್​ಗಳಿಗೆ ನುಗ್ಗಿದೆ. ಒಂಟಿ ಮನೆಗಳಲ್ಲೂ ನೀರು ನುಗ್ಗಿ ಕೆರೆಗಳಂತಾಗಿವೆ. ಜನ ಪರದಾಡುತ್ತಿದ್ದಾರೆ.

ಹುಸಿಯಾದ ಸಿಎಂ ಬೊಮ್ಮಾಯಿ ಭರವಸೆ

ಇನ್ನು, ಸಾಯಿ ಲೇಔಟ್ ನಲ್ಲಿ ಮಳೆ ನೀರು ಅವಾಂತರ ಸಮಸ್ಯೆ ಬಗೆಹರಿದಿಲ್ಲ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇಲ್ಲಿಗೆ ಭೇಟಿ ಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ. ಕಳೆದ ಬಾರಿ ಭಾರೀ ಮಳೆ ಬಂದಾಗ ಸಿಎಂ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳ ಜೊತೆ ಬಂದು ಸಾಯಿ ಲೇಔಟ್ ಗೆ ಭೇಟಿ ಕೊಟ್ಟಿದ್ದರು. ಹೊರಡುವಾಗ ಇಲ್ಲಿನ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಇದೀಗ ಸಿಎಂ‌ ಭರವಸೆ ಹುಸಿಯಾಗಿದ್ದು, 150 ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಜಲಾವೃತಗೊಂಡಿವೆ.

ಕೆಆರ್ ಪುರಂ ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿಗೆ ನುಗ್ಗಿದ ಮಳೆಯ ನೀರು:

ಕೆಆರ್ ಪುರಂ ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿಗೆ ಮಳೆ ನೀರು ನುಗ್ಗಿದ ಹಿನ್ನೆಲೆ ಪ್ರಮುಖ ದಾಖಲೆಗಳು ನೀರಿನಲ್ಲಿ ತೇಲುತ್ತಿವೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತರ ಪತ್ರಿಕೆ ಎಸ್ ಆರ್ ಬುಕ್, ಶಿಕ್ಷಕರಿಗೆ ಸಂಬಂಧ ಪಟ್ಟ ದಾಖಲೆ, ಮಾನ್ಯತೆ ನವೀಕರಣ ಕಡತಗಳು, ಹೊಸ ಶಾಲೆಗಳ ಅನುಮತಿ ದಾಖಲೆ ನೀರಿನಲ್ಲಿ ಜಲಾವೃತಗೊಂಡಿವೆ. ದಾಖಲೆಗಳ ಜೊತೆಗೆ ಕಂಪ್ಯೂಟರ್ ಗಳು ಸಹ ಜಲಾವೃತಗೊಂಡಿವೆ. ಇದರಿಂದ ದಾಖಲೆಗಳು ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳು ಕಂಗಾಲಾಗಿದ್ದಾರೆ.

ಹೆಬ್ಬಾಳ ಸಂಚಾರ ಠಾಣೆಯ (ಕೋಬ್ರಾ -01) ಜಗದೀಶ ರೆಡ್ಡಿ ಅವರು ಹೆಬ್ಬಾಳ ಅಪರ್ಯಾಂಪ್ ನಲ್ಲಿ ವಾಟರ್ ಲಾಂಗಿಗ್ ಆಗಿದ್ದು ಅದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ದೃಶ್ಯ:

Published On - 11:19 am, Sat, 18 June 22