ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆಯನ್ನು ಹೈಕೋರ್ಟ್ ಜೂನ್ 25ಕ್ಕೆ ಮುಂದೂಡಿದೆ. ಸಮಯದ ಅಭಾವದಿಂದ ವಿಚಾರಣೆ ಮುಂದೂಡುತ್ತಿರುವುದಾಗಿ ಹೈಕೋರ್ಟ್ ಹೇಳಿತು. ತನ್ನ ವಾದವನ್ನೂ ಆಲಿಸಬೇಕೆಂದು ಯುವತಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯೂ ಮುಂದೂಡಿಕೆಯಾಗಿದೆ.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಜೂನ್ 18ರಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಈ ವೇಳೆ ತನ್ನನ್ನೂ ಪ್ರಕರಣದಲ್ಲಿ ವಾದಿಯಾಗಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಯುವತಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಯುವತಿ ಪರ ನ್ಯಾಯಾಲಯಕ್ಕೆ ಹಾಜರಾದ ಸುಪ್ರೀಂಕೋರ್ಟ್ ವಕೀಲ ಇಂದಿರಾ ಜೈಸಿಂಗ್ ವಾದ ಮಂಡಿಸಿದರು.
ಎಸ್ಐಟಿ ತನಿಖೆ ಪ್ರಶ್ನಿಸಿ ಯುವತಿ ರಿಟ್ ಸಲ್ಲಿಸಿದ್ದರು. ಆ ಅರ್ಜಿಯನ್ನೂ ಪಿಐಎಲ್ನೊಂದಿಗೆ ವಿಚಾರಣೆ ನಡೆಸಿ ಎಂದು ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಮನವಿ ಮಾಡಿದರು. ಹೈಕೋರ್ಟ್ ಉಸ್ತುವಾರಿಯಲ್ಲಿದ್ದಾಗ ತನಿಖೆ ಮುಗಿಸಬಾರದು ಎಂದು ಯುವತಿ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದರು. ತನಿಖೆ ಮುಕ್ತಾಯಗೊಂಡಿಲ್ಲ. ತನಿಖೆಯ ಪ್ರಗತಿ ವರದಿಯನ್ನಷ್ಟೇ ಸಲ್ಲಿಸಲಾಗಿದೆ. ತನಿಖೆಯು ಇನ್ನೂ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರತಿಕ್ರಿಯಿಸಿದ್ದರು.
ಇದೀಗ ಯುವತಿಯ ಅರ್ಜಿಯೂ ಸೇರಿದಂತೆ ಇತರೆಲ್ಲ ಅರ್ಜಿಗಳನ್ನು ಹೈಕೋರ್ಟ್ ಜೂನ್ 25ಕ್ಕೆ ಮುಂದೂಡಿದೆ.
(High Court Adjurns Appeal by Lady of Ramesh Jarkiholi CD Case)
ಇದನ್ನೂ ಓದಿ: ಪ್ರತಿ ಪೊಲೀಸ್ ಠಾಣೆಗೆ 2 ಶಬ್ದ ಮಾಪಕ ಅಗತ್ಯ: ಹೈಕೋರ್ಟ್ಗೆ ಪೊಲೀಸ್ ಇಲಾಖೆ ಮಾಹಿತಿ
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ; ಯುವತಿ ತಂದೆಯ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್