ಬೆಂಗಳೂರು, ಸೆಪ್ಟೆಂಬರ್ 11: ಪ್ರಜ್ವಲ್ ರೇವಣ್ಣ (Prajwal Revanna) ಸಂಸದ ಸ್ಥಾನ ಆಯ್ಕೆ ಅಸಿಂಧು ಆದೇಶವನ್ನು ಅಮಾನತುಗೊಳಿಸಲು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆ ಮೂಲಕ ಪ್ರಜ್ವಲ್ ರೇವಣ್ಣಗೆ ಮಧ್ಯಂತರ ರಿಲೀಫ್ ನೀಡಲು ಹೈಕೋರ್ಟ್ ನಕಾರವೆತ್ತಿದೆ. ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆದೇಶಕ್ಕೆ ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಕೆವರೆಗೆ ತಡೆ ನೀಡಲು ಮನವಿ ಮಾಡಿದ್ದರು. ಪ್ರಜ್ವಲ್ ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ ಅವರು ತೀರ್ಪನ್ನು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟಿಸಿರುವ ಅವರು, ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದಾರೆ.
ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಹೈಕೋರ್ಟ್ ಇತ್ತೀಚೆಗೆ ಅಸಿಂಧುಗೊಳಿಸಿತ್ತು. ಶಾಸಕ ಎ.ಮಂಜು ಹಾಗೂ ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಸಂಸದ ಪ್ರಜ್ವಲ್ ರೇವಣ್ಣಗೆ ಶಾಕ್ ನೀಡಿತ್ತು. ಪ್ರಜ್ವಲ್ ರೇವಣ್ಣ ಚುನಾವಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಾಗ ಹಲವು ಆಸ್ತಿಗಳ ಮಾಹಿತಿ ಮುಚ್ಚಿಟ್ಟಿದ್ದಾರೆಂದು ಆರೋಪಿಸಲಾಗಿತ್ತು.
ಹೈಕೋರ್ಟ್‌ಗೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಹಾಸನದಲ್ಲಿ ದೂರುದಾರ ಹಾಗೂ ವಕೀಲ ದೇವರಾಜೇಗೌಡ ಹೇಳಿಕೆ ನೀಡಿದ್ದು, ತೀರ್ಪು ನೀಡಿದ ದಿನವೇ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಬೇಕಿತ್ತು. ತಾಂತ್ರಿಕ ಕಾರಣ ನೀಡಿ ಪ್ರಜ್ವಲ್ 4 ದಿನ ತಡವಾಗಿ ಅರ್ಜಿ ಹಾಕಿದ್ದರು. ಪ್ರಜ್ವಲ್ ಸದಸ್ಯತ್ವ ಅನರ್ಹಗೊಳಿಸುವಂತೆ ಎ.ಮಂಜು ಅರ್ಜಿ ಹಾಕಿದ್ದರು. ಸತ್ಯಕ್ಕೆ ಸಿಕ್ಕ ಜಯ ಎಂದು ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಸಿಂಧು ಪ್ರಕರಣ; ವಕೀಲ ದೇವರಾಜೇಗೌಡ ವಿರುದ್ದ ವಂಚನೆ ಆರೋಪ ಮಾಡಿದ ಮೊದಲ ಪತ್ನಿ
ತಡೆಯಾಜ್ಞೆ ಸಿಗುವವರೆಗೂ ಅಧಿವೇಶನದಲ್ಲಿ ಭಾಗಿಯಾಗುವಂತಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಕೇವಿಯೆಟ್ ಫೈಲ್ ಮಾಡಿದ್ದೇನೆ. ನನ್ನ ವಿರುದ್ಧ ಮಾತನಾಡಲು ಒಬ್ಬ ಮಹಿಳೆಯನ್ನು ತಂದು ನಿಲ್ಲಿಸಿದ್ದಾರೆ. ಯಾವುದೇ ಅಡ್ಡದಾರಿಯಲ್ಲಿ ಹೋದರೂ ನಾನು ರಾಜಿಯಾಗುವುದಿಲ್ಲ. ಹೆಚ್.ಡಿ.ರೇವಣ್ಣ ಕುಟುಂಬವನ್ನು ರಾಜಕೀಯವಾಗಿ ತೆಗೆಯಬೇಕು ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಸರ್ಕಾರಿ ಜಮೀನು ಖರೀದಿಸಿದ್ದಾರೆ. ಹೊಳೆನರಸೀಪುರದ ಚೆನ್ನಾಂಬಿಕ ಕನ್ವೆನ್‌ಷನ್ ಸೆಂಟರ್ ಕಟ್ಟಡ ಕನಿಷ್ಟ 5 ಕೋಟಿ ರೂ. ಬೆಲೆ ಬಾಳುತ್ತದೆ ಆದರೆ ಮೌಲ್ಯವನ್ನು 14 ಲಕ್ಷ ರೂ. ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಕೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂಪಾಯಿ ಹಣ ಹೊಂದಿದ್ದರೂ ಅಲ್ಲಿ ಕೇವಲ 5 ಲಕ್ಷ ರೂಪಾಯಿ ಇದೆ ಎಂದು ತೋರಿಸಿದ್ದಾರೆಂದು ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದರು. ಅಲ್ಲದೇ ಚುನಾವಣಾ ಅಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆದಾಯ ತೆರಿಗೆ ವಿವರಗಳ ಬಗ್ಗೆಯೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅನರ್ಹಕ್ಕೆ ಯಾವ್ಯಾವ ಕೇಸ್ಗಳು ಗೊತ್ತಾ? ವಕೀಲರು ಹೇಳಿದ್ದಿಷ್ಟು
ಪ್ರಜ್ವಲ್ ಆಯ್ಕೆ ಅಸಿಂಧುಗೊಂಡ ಬಳಿಕ ತಮ್ಮನ್ನು ವಿಜಯಿ ಅಭ್ಯರ್ಥಿಯೆಂದು ಘೋಷಿಸಬೇಕು ಎಂದು ಎ.ಮಂಜು ಹೈಕೋರ್ಟ್ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಎ.ಮಂಜು ವಿರುದ್ಧವೂ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಪ್ರತಿಸವಾಲಿನ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿತ್ತು. ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧುಗೊಂಡಿರುವುದರಿಂದ ಅವರು ಅನರ್ಹಗೊಂಡಂತೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:37 pm, Mon, 11 September 23