ಮುಡಾ ಹಗರಣ: ಸಿದ್ದರಾಮಯ್ಯಗೆ ಮಹತ್ವದ ದಿನ, ಸ್ನೇಹಮಯಿ ಕೃಷ್ಣ ಸಲ್ಲಿದ್ದ ಅರ್ಜಿ ಇಂದು ವಿಚಾರಣೆ

| Updated By: ವಿವೇಕ ಬಿರಾದಾರ

Updated on: Jan 15, 2025 | 10:56 AM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಆರ್‌ಟಿಐ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದೆ. ಸ್ನೇಹಮಯಿ ಅವರು ಲೋಕಾಯುಕ್ತ ತನಿಖೆಯಲ್ಲಿ ವಿಶ್ವಾಸವಿಲ್ಲದಿರುವುದಾಗಿ ಹೇಳಿದ್ದಾರೆ ಮತ್ತು ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಲವು ಪ್ರಮುಖ ವಕೀಲರು ಈ ಪ್ರಕರಣದಲ್ಲಿ ವಾದಿಸುತ್ತಿದ್ದಾರೆ.

ಮುಡಾ ಹಗರಣ: ಸಿದ್ದರಾಮಯ್ಯಗೆ ಮಹತ್ವದ ದಿನ, ಸ್ನೇಹಮಯಿ ಕೃಷ್ಣ ಸಲ್ಲಿದ್ದ ಅರ್ಜಿ ಇಂದು ವಿಚಾರಣೆ
ಸಿದ್ದರಾಮಯ್ಯ ಹೈಕೋರ್ಟ್​
Follow us on

ಬೆಂಗಳೂರು, ಜನವರಿ 15: ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaih) ಬುಧವಾರ (ಜನವರಿ 15) ಮಹತ್ವದ ದಿನವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ (CBI) ವರ್ಗಾಯಿಸುವಂತೆ ಆರ್​ಟಿಐ ಕಾರ್ಯರಕರ್ತ ಸ್ನೇಹಮಯಿ ಕೃಷ್ಣ (Snehamayi Krishana) ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಲಿದೆ.

ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ‌ವಾಗಿ ಕಪಿಲ್‌ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಅವರು ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಲಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣದಲ್ಲಿ ಜೆಡಿಎಸ್​ ಶಾಸಕ ಜಿಟಿ ದೇವೇಗೌಡಗೂ ಸಂಕಷ್ಟ: ಸ್ನೇಹಮಯಿ ಕೃಷ್ಣ ದೂರು

ಲೋಕಾಯುಕ್ತ ಪೊಲೀಸರು ಸಲ್ಲಿಸಬೇಕಿದ್ದ ತನಿಖೆಯ ಅಂತಿಮ ವರದಿ ಗಡುವನ್ನು ಹೈಕೋರ್ಟ್ ಜನವರಿ 28ರವರೆಗೆ ವಿಸ್ತರಿಸಿದೆ.

ಪ್ರಕರಣದ ಬಗ್ಗೆ ಇಂದು ಅಂತಿಮ ತೀರ್ಪು ಬರುವ ವಿಶ್ವಾಸವಿದೆ. ಸಿಬಿಐಗೆ ವಹಿಸಲು ಅವಶ್ಯಕವಿರುವ ದಾಖಲೆಗಳನ್ನು ನೀಡಲಾಗಿದೆ. ಕೋರ್ಟ್​ಗೆ ಮನವಿ ಮಾಡಿದ ನಂತರ ಸಾಕಷ್ಟು ಬೆಳವಣಿಗೆ ಆಗಿದೆ. ನನಗೆ ಆಮಿಷವೊಡ್ಡಲಾಗಿದೆ, ಒತ್ತಡ, ಬೆದರಿಕೆ ಕೂಡ ಹಾಕಲಾಗಿದೆ. ಈ ಎಲ್ಲಾ ವಿಚಾರಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಲೋಕಾಯುಕ್ತ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.

ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗುವ ವಿಶ್ವಾಸವಿದೆ. ಸಿಬಿಐಗೆ ಬಹಿ ಸಿಎಂ ಸಿದ್ದರಾಮಯ್ಯ ಪ್ರಕರಣ ವಹಿಸಿದ ಮೇಲೆ ರಾಜೀನಾಮೆ ನೀಡುತ್ತಾರೆ ಅನ್ನೋ‌ ವಿಶ್ವಾಸವಿದೆ. ಆಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಕೆಲಸ‌ ಆಗುತ್ತದೆ. ಗುರಿ ತಲುಪುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ ಎಂದರು.

ಏನಿದು ಮುಡಾ ಹಗರಣ?

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು.

ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:13 am, Wed, 15 January 25