
ಬೆಂಗಳೂರು, ಆಗಸ್ಟ್ 04: ಸಾರಿಗೆ ನೌಕರರ ಮುಷ್ಕರ (Transport Employees Strike) ಪ್ರಶ್ನಿಸಿ ಹೈಕೋರ್ಟ್ಗೆ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು. ಸಾರಿಗೆ ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೈಕೋರ್ಟ್ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಸೂಚನೆ ನೀಡಿದೆ. ಬಳಿಕ, ನ್ಯಾ.ಕೆ.ಎಸ್.ಮುದಗಲ್, ಎಂ.ಜಿ.ಎಸ್.ಕಮಲ್ ಅವರು ಇದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರ, ಸಾರಿಗೆ ನಿಗಮಗಳಿಗೆ ಹಾಗೂ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಗೂನೋಟಿಸ್ ಜಾರಿ ಮಾಡಿದೆ.
ಇಂದು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಕಲಾಪವಿರಲಿಲ್ಲ. ಹೀಗಾಗಿ, ಇಂದು (ಆ.04) ನ್ಯಾ.ಕೆ.ಎಸ್.ಮುದಗಲ್, ನ್ಯಾ.ಎಂ.ಜಿ.ಎಸ್.ಕಮಲ್ ಅವರ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆದಿತ್ತು. ನಾಳೆ (ಆ.05) ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲೇ ವಿಚಾರಣೆ ನಡೆಯಲಿ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಈ ಸಂಬಂಧ ವಿಚಾರಣೆಯನ್ನು ಮಂಗಳವಾರಕ್ಕೆ (ಆ.05) ಮುಂದೂಡಿದೆ.
ಇದನ್ನೂ ಓದಿ: ಸಿಎಂ ಸಂಧಾನ ಸಭೆ ವಿಫಲ: ಸಾರಿಗೆ ಮುಷ್ಕರ ಫಿಕ್ಸ್, ನಾಳೆ ಸಾರಿಗೆ ಬಸ್ಗಳು ರಸ್ತೆಗೆ ಇಳಿಯಲ್ಲ
ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ವಾದ: ಸಾರಿಗೆ ನೌಕರರ ಮುಷ್ಕರದಿಂದ ನಾಗರಿಕರಿಗೆ ಸಂಚಾರ ಸಮಸ್ಯೆ ಆಗಲಿದೆ. ಮಂಗಳವಾರ (ಆ.05) ದಿಂದ ಮುಷ್ಕರ ನಡೆಸಲು ಸಂಘಟನೆಗಳು ಮುಂದಾಗಿವೆ. ಈ ಹಿಂದೆ ಮುಷ್ಕರ ನಡೆಸಿದಾಗ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಬೇಡಿಕೆಯಿಂದ 2200 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಜುಲೈ 28, ಆಗಸ್ಟ್ 2 ರಂದು ಸಭೆ ನಡೆದು ಈಗ ಆಗಸ್ಟ್ 7ಕ್ಕೆ ಸಭೆ ನಿಗದಿಯಾಗಿದೆ. ಈ ಮಧ್ಯೆಯೇ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಹೈಕೋರ್ಟ್: ಕೊನೆ ಗಳಿಗೆಯಲ್ಲಿ ಏಕೆ ಪಿಐಎಲ್ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿತು.
ಸಾರಿಗೆ ನಿಗಮಗಳ ವಕೀಲೆ ಹೆಚ್.ಆರ್.ರೇಣುಕಾ ವಾದ: ಜುಲೈ 15ರಂದೇ ಸಾರಿಗೆ ಸಂಘಟನೆಗಳು ಮುಷ್ಕರದ ನೋಟಿಸ್ ನೀಡಿವೆ ಎಂದು ಪೀಠಕ್ಕೆ ಹೇಳಿದರು.
ಹೈಕೋರ್ಟ್ ಆದೇಶದ ಪ್ರತಿ ಇನ್ನೂ ನಮ್ಮ ಕೈಗೆ ತಲುಪಿಲ್ಲ. ಆದೇಶ ಪ್ರತಿ ಕೈತಲುಪಿದ ಬಳಿಕ ಬಂದ್ ಬಗ್ಗೆ ನಿರ್ಧಾರ ಮಾಡುತ್ತೇವೆ. ಕೋರ್ಟ್ ಯಾವ ದೃಷ್ಟಿಯಲ್ಲಿ ಈ ರೀತಿಯಾಗಿ ಆದೇಶ ಕೊಟ್ಟಿದೆ ಗೊತ್ತಿಲ್ಲ. ಆದರೆ ಹೈಕೋರ್ಟ್ ಒಂದು ದಿನ ಮುಂದೂಡುವ ಆದೇಶದ ಬದಲು, ನಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರೆ ಒಳ್ಳೆಯದಿತ್ತು. ಒಂದು ದಿನ ಮುಂದೂಡಿ ಮತ್ತೊಂದು ದಿನ ಪ್ರತಿಭಟನೆ ನಡೆಸಿದರೆ. ಆದರಿಂದ ಏನು ಬದಲಾವಣೆ ಆಗುತ್ತದೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.
Published On - 3:41 pm, Mon, 4 August 25