ಬೆಂಗಳೂರು: ಬಿಟ್ ಕಾಯಿನ್ ಕಿಯೋಸ್ಕ್ ಸ್ಥಾಪಿಸಿದ್ದವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಕಿಯೋಸ್ಕ್ ಸ್ಥಾಪಿಸಿದ್ದವರ ವಿರುದ್ಧ ಸೈಬರ್ ಪೊಲೀಸರು ದಾಖಲಿಸಿದ್ದ FIRನ ಹೈಕೋರ್ಟ್ ರದ್ದುಪಡಿಸಿದೆ. ಈ ಮೂಲಕ, ಬಿ.ವಿ.ಹರೀಶ್ ಹಾಗೂ ಸಾತ್ವಿಕ್ ವಿಶ್ವನಾಥ್ ಎಂಬುವವರ ಮೇಲಿನ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಂದ ಹಾಗೆ, ಈ ಹಿಂದೆ, ಬಿಟ್ ಕಾಯಿನ್ ವ್ಯವಹಾರವನ್ನು RBI ನಿರ್ಬಂಧಿಸಿತ್ತು. ಹಾಗಾಗಿ, ಬಿಟ್ ಕಾಯಿನ್ ಕಿಯೋಸ್ಕ್ ಸ್ಥಾಪಿಸಿದ್ದವರ ಮೇಲೆ ಸೈಬರ್ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ಈ ನಡುವೆ, ಸುಪ್ರೀಂಕೋರ್ಟ್ ಬಿಟ್ ಕಾಯಿನ್ ಮೇಲಿನ ನಿರ್ಬಂಧ ರದ್ದುಪಡಿಸಿತ್ತು.
ಹೀಗಾಗಿ, ತಮ್ಮ ವಿರುದ್ಧ ದಾಖಲಿಸಲಾಗಿದ್ದ FIR ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರ ಪರ ವಕೀಲ ಸಿರಿಲ್ ಪಯಾಸ್ ತಮ್ಮ ವಾದ ಮಂಡಿಸಿದ್ದರು. ಇದೀಗ, FIR ರದ್ದುಪಡಿಸಿ ನ್ಯಾ.ಹೆಚ್.ಪಿ.ಸಂದೇಶ್ ಆದೇಶ ನೀಡಿದ್ದಾರೆ.
ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತಶ್ರೀಗೆ ಸಂಕಷ್ಟ
ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತಶ್ರೀಗೆ ಸಂಕಷ್ಟ ಎದುರಾಗಿದೆ. ಮಠದ ಆಸ್ತಿ ಅಕ್ರಮ ವರ್ಗಾವಣೆ ಆರೋಪದಡಿ ನಂಜಾವಧೂತ ಸ್ವಾಮೀಜಿ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ. ನಂಜಾವಧೂತ ಶ್ರೀಗಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ವಿಲ್ ರದ್ದುಪಡಿಸಿದ ಕೋರ್ಟ್ ಆದೇಶ ಮುಚ್ಚಿಟ್ಟು ತನ್ನ ಹೆಸರಿಗೆ ಮಠದ ಖಾತಾ ಮಾಡಿಸಿಕೊಂಡಿದ್ದ ಆರೋಪ ಶ್ರೀಗಳ ವಿರುದ್ಧವಿತ್ತು. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಜಮೀನು ಕುರಿತು ಕೃಷ್ಣಪ್ಪ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಈ ನಡುವೆ, ಪ್ರಕರಣ ರದ್ದು ಕೋರಿ ನಂಜಾವಧೂತಶ್ರೀ ಅರ್ಜಿ ಸಲ್ಲಿಸಿದ್ರು. ಇದೀಗ ನಂಜಾವಧೂತಶ್ರೀಗಳ ಅರ್ಜಿ ವಜಾಗೊಳಿಸಿ ನ್ಯಾ. ಹೆಚ್.ಪಿ.ಸಂದೇಶ್ ಆದೇಶ ನೀಡಿದ್ದಾರೆ. ಜೊತೆಗೆ, ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪಾಥರಾಜ್ ವಿರುದ್ಧದ ಪ್ರಕರಣ ಸಹ ರದ್ದುಪಡಿಸಲಾಗಿದೆ.
ಇತ್ತ, ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮೂಲಸೌಕರ್ಯ ವಿಚಾರವಾಗಿ ಕಾಮಗಾರಿ ನಡೆದಿರುವ ಶಾಲೆಗಳ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. 573 ಹೊಸ ತರಗತಿಗಳು ನಿರ್ಮಿಸುತ್ತಿರುವುದಾಗಿ ಸರ್ಕಾರ ಹೇಳಿಕೆ ಕೊಟ್ಟಿದೆ.
Published On - 6:31 pm, Thu, 18 February 21