ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರೇನೋ ರಾಜೀನಾಮೆ ನೀಡಿದ್ದಾರೆ. ಆದ್ರೆ, ಅವರ ಬೆಂಬಲಿಗರು ಮಾತ್ರ ಸುಮ್ಮನೆ ಕುಳಿತಿಲ್ಲ. ದೆಹಲಿಯಲ್ಲಿ ಕುಳಿತು ಲಾಬಿ ಶುರು ಮಾಡಿರೋ ಕಾಂಗ್ರೆಸ್ ನಾಯಕರ ದಂಡು, ಈಗ ಅಸಲಿ ಆಟ ಶುರು ಹಚ್ಕೊಂಡಿದೆ.
ಕೆಳಗಿಟ್ಟ ಶಸ್ತ್ರಾಸ್ತ್ರ ಮತ್ತೆ ಹಿಡಿಯೋ ತವಕ. ತ್ಯಜಿಸಿದ ಖುರ್ಚಿ ಮತ್ತೆ ಪಡೆಯೋ ಆಸೆ. ಮುಗಿದು ಹೋದ ಅಧ್ಯಾಯವನ್ನ ಮತ್ತೆ ಮುಂದುವರಿಸೋ ಛಲ. ಇಷ್ಟೆಲ್ಲಾ ಲೆಕ್ಕಾಚಾರಗಳನ್ನು ಹಾಕಿರೋ ಸಿದ್ದು ಟೀಂ ಭರ್ಜರಿ ಲಾಬಿ ಮಾಡ್ತಿದ್ರೆ, ಈ ಲೆಕ್ಕಾಚಾರ ಬುಡಮೇಲು ಮಾಡೋಕೆ ಸಿದ್ದು ವಿರೋಧಿ ಬಣವೂ ಭರ್ಜರಿ ಫೈಟ್ ನಡೆಸಿದೆ.
ಹೈಕಮಾಂಡ್ ಮುಂದೆ ಸಿದ್ದು ವರ್ಸಸ್ ಸೀನಿಯರ್ಸ್ ಡ್ರಾಮಾ:
ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ನಲ್ಲಿ ಭಾರಿ ಲಾಬಿ ಶುರುವಾಗಿದೆ. ಕಾಂಗ್ರೆಸ್ನ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್, ಕೆ.ಹೆಚ್. ಮುನಿಯಪ್ಪ, ಹೆಚ್.ಕೆ. ಪಾಟೀಲ್, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಕುಳಿತು ಮುಂದಿನ ಕೆಪಿಸಿಸಿ ಪಟ್ಟಕ್ಕಾಗಿ ಸರ್ಕಸ್ ನಡೆಸಿದ್ದಾರೆ. ಇನ್ನೇನು ಸಿದ್ದರಾಮಯ್ಯ ಸೈಲೆಂಟ್ ಆದ್ರು ಅನ್ನೋ ಸುದ್ದು ಹೊರಬೀಳುತ್ತಿರುವಾಗಲೇ, ಟಗರು ಟೀಮ್ ಹೊಸ ಆಟ ಶುರು ಮಾಡಿದೆ.. ದೆಹಲಿ ಟೆನ್ ಜನಪತ್ ರಸ್ತೆಯಲ್ಲಿ ಸಿದ್ದು ಬಣ ರೌಂಡ್ಸ್ ಹೊಡೆಯುತ್ತಿದೆ. ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷದ್, ರವಿ ಬೋಸರಾಜ್ ಸೇರಿ ಹಲವು ನಾಯಕರು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜತೆ ಮಾತುಕತೆ ನಡೆಸಿ ಕಹಾನಿ ಮೇ ಟ್ವಿಸ್ಟ್ ಅಂತಿದ್ದಾರೆ.
ಸಿದ್ದು ಬಣದ ಲಾಬಿ:
ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ ನಿಜ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಒಂದು ಮಾತು ಹೇಳಿದ್ರೆ ಸಾಕು ಸಿದ್ದರಾಮಯ್ಯ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಇದರಲ್ಲಿ ಅನುಮಾನವೇ ಬೇಡ ಅಂತಿದ್ದಾರೆ. ಅಲ್ಲದೇ ಸಿದ್ದರಾಮಯ್ಯರನ್ನೇ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನನ್ನಾಗಿ ಮುಂದುವರಿಸಬೇಕು. ಕಾಂಗ್ರೆಸ್ ಶಾಸಕರು ಪೈಕಿ ಬಹುತೇಕರಿಗೆ ಅವರ ಮೇಲೆಯೇ ವಿಶ್ವಾಸ ಇದೆ. ಸಿದ್ದರಾಮಯ್ಯರನ್ನ ಬದಿಗಿಟ್ಟು ಪಕ್ಷ ಸಂಘಟನೆ ಮಾಡೋದು ಸುಲಭವಲ್ಲ. ಇದನ್ನ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರು ಮರೆಯಬಾರದು ಅಂತಾ ಸಿದ್ದರಾಮಯ್ಯ ಟೀಮ್ ಕಾಂಗ್ರೆಸ್ ದೆಹಲಿ ನಾಯಕರನ್ನ ಮನವೊಲಿಸೋ ಪ್ರಯತ್ನ ನಡೆಸಿದೆ.
ಇದೆಲ್ಲದರ ಮಧ್ಯೆ ಜನವರಿ ಬಳಿಕ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗೋ ನಿರೀಕ್ಷೆ ಇದ್ದು, ಸಿದ್ದರಾಮಯ್ಯ ಟೀಮ್ ರಾಹುಲ್ ಜತೆ ಉತ್ತಮ ಒಡನಾಟ ಹೊಂದಿದೆ. ಹೀಗಾಗಿ, ಎಲ್ಲವು ಅಂದುಕೊಂಡಂತೆ ಆದ್ರೆ ಸಿದ್ದರಾಮಯ್ಯರನ್ನ ರಾಹುಲ್ ಬಿಟ್ಟುಕೊಡಲ್ಲ ಅನ್ನೋದು ಸಿದ್ದು ಬಣದ ಲೆಕ್ಕಾಚಾರ.
ಇನ್ನು, ಸಿದ್ದರಾಮಯ್ಯ ವಿರೋಧಿ ಬಣ ಕೂಡ ಸುಮ್ಮನೆ ಕೂತಿಲ್ಲ. ಅದರಲ್ಲೂ ಇಷ್ಟು ದಿನ ದೂರವೇ ಇದ್ದ, ಬಿ.ಕೆ.ಹರಿಪ್ರಸಾದ್ ಮತ್ತು ಡಿ.ಕೆ.ಶಿವಕುಮಾರ್ ಒಂದಾಗಿದ್ದು, ಸಿದ್ದರಾಮಯ್ಯರ ವೇಗ ಕುಗ್ಗಿಸಿದ್ರೆ ಮಾತ್ರ ನಮ್ಮ ಭವಿಷ್ಯ ಅಂತಿದ್ದಾರೆ. ದೆಹಲಿಯಲ್ಲಿ ಕೂತು ನಾಯಕರನ್ನ ಭೇಟಿಯಾಗಿ ತಮ್ಮದೇ ಸ್ಟೈಲಲ್ಲಿ ಲಾಬಿ ನಡೆಸ್ತಿದ್ದಾರೆ.
Published On - 7:21 am, Thu, 26 December 19