Hijab Verdict: ಹಿಜಾಬ್​ ವಿವಾದದ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೆಗೆ ಬಿಗಿ ಭದ್ರತೆ

| Updated By: Lakshmi Hegde

Updated on: Mar 15, 2022 | 11:32 AM

ಹೈಕೋರ್ಟ್ ನೀಡಿರುವ ತೀರ್ಪಿಗೆ ಇಸ್ಲಾಂ ಸಮುದಾದ ಮುಖಂಡರಿಂದ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದ್ದು, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಹೇಳುತ್ತಿದ್ದಾರೆ.​​

Hijab Verdict: ಹಿಜಾಬ್​ ವಿವಾದದ  ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೆಗೆ ಬಿಗಿ ಭದ್ರತೆ
ಕರ್ನಾಟಕ ಉಚ್ಚ ನ್ಯಾಯಾಲಯ
Follow us on

ಬಹುದಿನಗಳಿಂದ ಬಾಕಿ ಇದ್ದ ಹಿಜಾಬ್​ ವಿವಾದಕ್ಕೊಂದು (Hijab Row)ಅಂತ್ಯ ಸಿಕ್ಕಿದೆ. ಇಸ್ಲಾಂನಲ್ಲಿ ಹಿಜಾಬ್​ ಕಡ್ಡಾಯವೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವಂತಿಲ್ಲ. ಸರ್ಕಾರಗಳು ಏನು ವಸ್ತ್ರ ಸಂಹಿತೆ ರೂಪಿಸಿವೆಯೋ ಅದೇ ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್​ನ ತ್ರಿಸದಸ್ಯ ಪೀಠ ಇಂದು ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್​ ಅವಷ್ಠಿ ನೇತೃತ್ವದ ನ್ಯಾ.ಕೃಷ್ಣ ಎಸ್​. ದೀಕ್ಷಿತ್​ ಮತ್ತು ಜೆ.ಎಂ.ಖಾಜಿ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ಈ ತೀರ್ಪು ಹೊರಬೀಳುತ್ತಿದ್ದಂತೆ ಹೈಕೋರ್ಟ್​ ಸಿಜೆ ರಿತು ರಾಜ್​ ಅವಷ್ಠಿ ಅವರ ಬೆಂಗಳೂರಿನಲ್ಲಿರುವ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ, ಹಿಂಸಾಚಾರ, ಗಲಾಟೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೈಕೋರ್ಟ್ ನೀಡಿರುವ ತೀರ್ಪಿಗೆ ಇಸ್ಲಾಂ ಸಮುದಾದ ಮುಖಂಡರಿಂದ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದ್ದು, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಹೇಳುತ್ತಿದ್ದಾರೆ.​​  ಹಿಜಾಬ್​ ವಿವಾದ ಕರ್ನಾಟಕದಲ್ಲಿ ಶುರುವಾಗಿ ತಿಂಗಳ ಮೇಲಾಯಿತು. ಇದು ರಾಷ್ಟ್ರವ್ಯಾಪಿ ಪಸರಿಸಿತ್ತು. ಪಾಕಿಸ್ತಾನ ಕೂಡ ಪ್ರತಿಕ್ರಿಯಿಸಿತ್ತು. ಇನ್ನು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುವಂತೆ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಫೆ.5ರಂದು ಮಧ್ಯಂತರ ಆದೇಶ ನೀಡಿದ್ದ ನ್ಯಾಯಾಲಯ, ಅಂತಿಮ ತೀರ್ಪಿನವರೆಗೂ ಸರ್ಕಾರಗಳು ವಿಧಿಸಿರುವ ವಸ್ತ್ರಸಂಹಿತೆಯನ್ನು ಪಾಲನೆ ಮಾಡಬೇಕು ಎಂದಿತ್ತು. ಅದೇ ಆದೇಶವನ್ನೇ ಇಂದು ಎತ್ತಿ ಹಿಡಿದಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ನಿರ್ಬಂಧವನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್​, ರವಿವರ್ಮ ಕುಮಾರ್ ವಾದಮಂಡಿಸಿದ್ದರು. ಸಂವಿಧಾನ, ಧಾರ್ಮಿಕ ನೆಲೆಗಟ್ಟು, ಕಾನೂನು ಕಾರಣಗಳನ್ನು ಉಲ್ಲೇಖಿಸಿ, ಹಿಜಾಬ್​ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್​ಗೆ ಕೇಳಿಕೊಂಡಿದ್ದರು. ಹಿಜಾಬ್​ ತೀರ್ಪು ಬರುತ್ತಿದ್ದಂತೆಯೇ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಶಿಕ್ಷಣವನ್ನು ಹಾಳು ಮಾಡಿಕೊಳ್ಳಬೇಡಿ. ಹೈಕೋರ್ಟ್ ತೀರ್ಪನ್ನು ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಲೆ-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶವಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ: ಹೈಕೋರ್ಟ್​

Published On - 11:29 am, Tue, 15 March 22