ಹೈಕೋರ್ಟ್ ತೀರ್ಪು ಪಾಲಿಸಿ, ಶಿಕ್ಷಣ ನಿಲ್ಲಿಸಬೇಡಿ, ಕಾಲೇಜುಗಳಿಗೆ ಮರಳಿ ಬನ್ನಿ: ಶಿಕ್ಷಣ ಸಚಿವ ಬಿಸಿ ನಾಗೇಶ್
ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರು ಹೈಕೋರ್ಟ್ ತೀರ್ಪು ಪಾಲಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನವಿ ಮಾಡಿದರು
ಬೆಂಗಳೂರು: ಕರ್ನಾಟಕ ಹೈಕೋರ್ಟ್ (Karnataka High Court) ನೀಡಿರುವ ತೀರ್ಪು ಸ್ವಾಗತಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh), ವಸ್ತ್ರಸಂಹಿತೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ನ್ಯಾಯಾಲಯ ಇಂದು ತನ್ನ ತೀರ್ಪಿನ ಮೂಲಕ ಉತ್ತರ ನೀಡಿದೆ ಎಂದು ಹೇಳಿದರು. ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರು ಹೈಕೋರ್ಟ್ ತೀರ್ಪು ಪಾಲಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಶಾಲೆ-ಕಾಲೇಜುಗಳಿಂದ ದೂರ ಉಳಿದಿರುವ ವಿದ್ಯಾರ್ಥಿನಿಯರು ಮತ್ತೆ ಶಿಕ್ಷಣ ಸಂಸ್ಥೆಗಳಿಗೆ ಬರಬೇಕು ಎಂದು ಕೋರಿದರು.
ನ್ಯಾಯಾಲಯದ ತೀರ್ಪು ಏನು ಬಂದರೂ ಗೌರವಿಸುತ್ತೇನೆ ಎಂದು ಈ ಮೊದಲು ಹೇಳಿದ್ದೆ. ಇಂದಿಗೂ ನನ್ನದು ಅದೇ ನಿಲುವು. ಬಿಜೆಪಿ ಸರ್ಕಾರ ಸದಾ ನ್ಯಾಯಾಲಯದ ತೀರ್ಪುಗಳನ್ನು ಗೌರವಿಸುತ್ತದೆ. ಇದು ಐತಿಹಾಸಿಕ ತೀರ್ಪು. ಈ ತೀರ್ಪಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಇರುವ ಕೆಲ ಗೊಂದಲಗಳನ್ನು ಸರಿಪಡಿಸಲು ಯತ್ನಿಸುತ್ತೇವೆ ಎಂದು ಹೇಳಿದರು.
ಸಮವಸ್ತ್ರ ಎನ್ನುವುದು ರಾಷ್ಟ್ರೀಯ ಮಾನಸಿಕ ತರುವುದರಲ್ಲಿ ಸಾಕಷ್ಟು ಸಹಕಾರಿ. ಈ ವಿಷಯ ಹಲವು ವರ್ಷಗಳಿಂದ ನಮಗೆ ಮನವರಿಕೆ ಆಗಿದೆ. ನಾವೆಲ್ಲರು ದೇಶದ ಒಂದು ಆಂಗ. ಇದನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತೇವೆ. ಕೆಲ ಹೆಣ್ಣುಮಕ್ಕಳು ಮಿಸ್ಗೈಡ್ ಆಗಿದ್ದಾರೆ. ಅವರ ಮನವೊಲಿಸಿ ವಿದ್ಯಾಭ್ಯಾಸ ಮುಂದುವರಿಸಲು ಪ್ರೇರಣೆ ಕೊಡುತ್ತೇವೆ. ಕರ್ನಾಟಕದ ಜನರು ಈ ಹಿಂದೆಯೂ ನ್ಯಾಯಾಲಯದ ತೀರ್ಪು ಗೌರವಿಸಿದ್ದಾರೆ. ಈ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಸುಮಾರು 86 ಸಾವಿರ ವಿದ್ಯಾರ್ಥಿನಿಯರು ಪಿಯುಸಿ ಓದುತ್ತಿದ್ದಾರೆ. ಈ ಪೈಕಿ 6 ಮಕ್ಕಳು ಮಾತ್ರ ಹಿಜಾಬ್ ಬಗ್ಗೆ ಒತ್ತಾಯಿಸಿದ್ದರು. ಶೇ 99.9ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆ ಮತ್ತು ಸಮವಸ್ತ್ರ ಅನುಸರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: Big News: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗ ಅಲ್ಲ: ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು
Published On - 11:04 am, Tue, 15 March 22