AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಯಲ್ಲಿ ಜಾನ್ವಿ ಕಪೂರ್ ಹುಟ್ಟುಹಬ್ಬ: ಬರಿಗಾಲಲ್ಲಿ 3,550 ಮೆಟ್ಟಿಲು ಹತ್ತಿದ ನಟಿ

ಖ್ಯಾತ ನಟಿ ಜಾನ್ವಿ ಕಪೂರ್ ಅವರು ಅಪಾರ ದೈವ ಭಕ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅವರು 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತಿ ದೇವಸ್ಥಾನ ತಲುಪಿದ್ದಾರೆ. ಜಾನ್ವಿ ಕಪೂರ್ ಅವರ ಈ ಭಕ್ತಿಗೆ ಮೆಚ್ಚಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ತಿರುಪತಿಯಲ್ಲಿ ಜಾನ್ವಿ ಕಪೂರ್ ಹುಟ್ಟುಹಬ್ಬ: ಬರಿಗಾಲಲ್ಲಿ 3,550 ಮೆಟ್ಟಿಲು ಹತ್ತಿದ ನಟಿ
Janhvi Kapoor
ಮದನ್​ ಕುಮಾರ್​
|

Updated on: Mar 06, 2026 | 4:53 PM

Share

ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಇಂದು (ಮಾರ್ಚ್ 6) 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಜಾನ್ವಿ ಆಗಮಿಸಿದ್ದರು. ಆದರೆ ಈ ಬಾರಿ ಅವರು ಕೇವಲ ದರ್ಶನ ಪಡೆಯುವುದಲ್ಲದೆ, ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ತಿರುಪತಿ ಬೆಟ್ಟ ಹತ್ತುವಾಗ ಜಾನ್ವಿ ಅವರು ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದರು.

ಸುಮಾರು 9ರಿಂದ 12 ಕಿಲೋಮೀಟರ್ ದೂರದ ಈ ಹಾದಿಯನ್ನು ಕ್ರಮಿಸಲು ಅವರಿಗೆ 4ರಿಂದ 5 ಗಂಟೆಗಳು ಬೇಕಾಯಿತು. ಜಾನ್ವಿ ಅವರ ಈ ಭಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಸರಳತೆಯಲ್ಲಿ ನೀವು ನಿಮ್ಮ ತಾಯಿ ಶ್ರೀದೇವಿಯಂತೆಯೇ ಕಾಣುತ್ತಿದ್ದೀರಿ’ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಜಾನ್ವಿ ಕಪೂರ್ ಅವರ ಆಪ್ತ ಗೆಳೆಯನ ಅನುಪಸ್ಥಿತಿ ಕಾಣಿಸಿದೆ. ಸಾಮಾನ್ಯವಾಗಿ ಜಾನ್ವಿ ತಿರುಪತಿಗೆ ಭೇಟಿ ನೀಡುವಾಗ ಅವರ ಗೆಳೆಯ ಶಿಖರ್ ಪಹರಿಯಾ ಜೊತೆಗಿರುತ್ತಿದ್ದರು. ಆದರೆ ಈ ಬಾರಿ ಶಿಖರ್ ಬದಲಿಗೆ ಜಾನ್ವಿ ಬೇರೆ ಸ್ನೇಹಿತರೊಂದಿಗೆ ಬೆಟ್ಟ ಹತ್ತಿರುವುದು ವಿಶೇಷವಾಗಿತ್ತು. ಪ್ರತಿ ವರ್ಷ ತಮ್ಮ ತಾಯಿ ಶ್ರೀದೇವಿಯವರ ಜನ್ಮದಿನದಂದೂ ಜಾನ್ವಿ ಮಿಸ್ ಮಾಡದೆ ತಿರುಪತಿಗೆ ಭೇಟಿ ನೀಡುತ್ತಾರೆ.

ತಮ್ಮ ಆಧ್ಯಾತ್ಮಿಕ ನಂಬಿಕೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಜಾನ್ವಿ, ‘ಕಳೆದ 5-6 ವರ್ಷಗಳಿಂದ ನಾನು ಹೆಚ್ಚು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದೇನೆ. ನನಗೆ ವೆಂಕಟೇಶ್ವರ ಸ್ವಾಮಿಯ ಮೇಲೆ ಅಪಾರ ನಂಬಿಕೆ. ಯಾವಾಗ ಒಳಗಿನಿಂದ ಕರೆ ಬರುತ್ತದೆಯೋ, ಆಗ ನಾನು ತಿರುಪತಿಗೆ ಬಂದು ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆಯುತ್ತೇನೆ’ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಅರ್ಜುನ್ ಕಪೂರ್ ಟ್ರೋಲ್ ಮಾಡಿದವರಿಗೆ ತಂಗಿ ಜಾನ್ವಿಯ ಎಚ್ಚರಿಕೆ

ಸಿನಿಮಾಗಳ ಬಗ್ಗೆ ಹೇಳೋದಾದರೆ, 2025ರಲ್ಲಿ ಜಾನ್ವಿ ಕಪೂರ್ ನಟನೆಯ ‘ಹೋಮ್‌ಬೌಂಡ್’, ‘ಪರಮ್ ಸುಂದರಿ’ ಹಾಗೂ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾಗಳು ಬಿಡುಗಡೆಯಾಗಿದ್ದವು. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಕಡೆಗೂ ಅವರು ಮುಖ ಮಾಡಿದ್ದಾರೆ. ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ಏಪ್ರಿಲ್ 30ರಂದು ಆ ಚಿತ್ರ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us