ಹೈಕೋರ್ಟ್ ತೀರ್ಪು ಪ್ರಶ್ನಿಸಿ ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ: ಅರ್ಜಿದಾರರ ಪರ ವಕೀಲರಿಂದ ಮಾಹಿತಿ
Hijab Row: ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಟಿವಿ9ಗೆ ಅರ್ಜಿದಾರರ ಪರ ವಕೀಲರಿಂದ ಮಾಹಿತಿ ಲಭ್ಯವಾಗಿದೆ. ಹೈಕೋರ್ಟ್ ತೀರ್ಪಿನ ಪ್ರತಿ ಸಿಕ್ಕ ಬಳಿಕ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.
ಬೆಂಗಳೂರು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಟಿವಿ9ಗೆ ಅರ್ಜಿದಾರರ ಪರ ವಕೀಲರಿಂದ ಮಾಹಿತಿ ಲಭ್ಯವಾಗಿದೆ. ಹೈಕೋರ್ಟ್ ತೀರ್ಪಿನ ಪ್ರತಿ ಸಿಕ್ಕ ಬಳಿಕ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ. ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಮಾಡಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಕೋರ್ಟ್ ತೀರ್ಪಿನ ಪ್ರತಿ ನೋಡಿಕೊಂಡು ಮುಂದಿನ ಕ್ರಮ ಎಂದು ಅರ್ಜಿದಾರರ ಪರ ವಕೀಲ ಶತಭಿಷ ಶಿವಣ್ಣ ಹೇಳಿಕೆ ನೀಡಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾಗೊಂಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೊಗುತ್ತೇವೆ. ಮುಸ್ಲಿಂ ಮಕ್ಕಳ ಶಿಕ್ಷಣ ಉಳಿಯಬೇಕು, ಧರ್ಮವೂ ಉಳಿಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮಡಿಕೇರಿಯಲ್ಲಿ SDPI ಮುಖಂಡ ಅಮೀನ್ ಮೊಹ್ಸಿನ್ ಹೇಳಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ದೇಶದ ಐಕ್ಯತೆಗೆ ಇವತ್ತು ಧಕ್ಕೆ ಬಂದಿದೆ. ಇದು ಒಂದು ಸಮುದಾಯ ಟಾರ್ಗೆಟ್ ಮಾಡುವುದೇ ಆಗಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಹಿನ್ನೆಲೆ ಬೆಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಪ್ರತಿಕ್ರಿಯೆ ನೀಡಿದ್ದಾರೆ. 6 ವಿದ್ಯಾರ್ಥಿನಿಯರ ಪರ ನಾವು ಹೋರಾಡುತ್ತಿದ್ದೆವು. ವಿದ್ಯಾರ್ಥಿನಿಯರ ಪರ ನಮ್ಮ ಹೋರಾಟ ಮುಂದುವರಿಯಲಿದೆ. ಹೋರಾಟ ಹೇಗೆ ಮುಂದುವರಿಸಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ನಾವು ಹೇಳುತ್ತೇವೆ. ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ಆದರೆ ಅಲ್ಲಿಯವರೆಗೆ ಎಲ್ಲರೂ ಶಿಕ್ಷಣ ಪಡೆಯುವುದು ಅತ್ಯಗತ್ಯ. ಸದ್ಯ ಪರೀಕ್ಷೆ ಇರುವ ಹಿನ್ನೆಲೆ ಕೋರ್ಟ್ ಆದೇಶವನ್ನು ಪಾಲಿಸಿ ಎಂದು ಹುಬ್ಬಳ್ಳಿ ನಗರದಲ್ಲಿ ಪೋಷಕಿ ಶಾಹೀನ್ ಕುರಹಟ್ಟಿ ಕೇಳಿಕೊಂಡಿದ್ದಾರೆ.
ನಾವು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತೇವೆ. ಹೈಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತೆ ಅನ್ನೋ ವಿಶ್ವಾಸವಿತ್ತು. ಹಿರಿಯ ನ್ಯಾಯವಾದಿಗಳು ಮತ್ತಿತರರು ಹಿಜಾಬ್ ಪರವಾಗಿಯೇ ತೀರ್ಪು ಬರುತ್ತೆ ಅನ್ನೋ ಮಾತನ್ನಾಡಿದ್ದರು. ಆದರೆ ಹಿಜಾಬ್ ವಿರುದ್ಧದ ತೀರ್ಪು ಬಂದಿದೆ. ಹಿಜಾಬ್ ಧರಿಸುವ ವಿಚಾರ ಹಿಂದೂ ಮತ್ತು ಮುಸ್ಲಿಮರ ನಡುವಿನ ವಿವಾದವಲ್ಲ. ಮುಸ್ಲಿಂ ಮತ್ತು ಸಂಘ ಪರಿವಾರದ ನಡುವಿನ ವಿವಾದ. ನಮಗೆ ಬಿಜೆಪಿ ಸರ್ಕಾರದ ಮೇಲೆ ಎಳ್ಳಷ್ಟೂ ವಿಶ್ವಾಸವಿಲ್ಲ. ನಾವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿಯವರೆಗೂ ಹಿಜಾಬ್ ಧರಿಸಿಕೊಂಡು ಕ್ಲಾಸ್ಗೆ ಹಾಜರಾಗಲು ಅವಕಾಶ ನೀಡಬೇಕು. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಬೇಕು. ಹೈಕೋರ್ಟ್ನ ತೀರ್ಪನ್ನು ಪಾಲನೆ ಮಾಡಬೇಕು. ಆದರೆ ತೀರ್ಪು ನಮ್ಮ ವಿರುದ್ಧ ಬಂದಿರುವುದರಿಂದ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದೇವೆ. ಸುಪ್ರೀಂಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸವಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಜಿಲ್ಲಾಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.
ವಿಶ್ವ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಹಿಜಾಬ್ (Hijaba) ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಂದು (ಮಾರ್ಚ್ 15) ಕರ್ನಾಟಕ ಹೈಕೋರ್ಟ್ನ (Karnataka High Court) ಪೂರ್ಣ ಪೀಠ ಮಹತ್ವದ ತೀರ್ಪು ನೀಡಿದೆ. ಪ್ರತಿ ಪುಟಕ್ಕೂ ಸಹಿ ಹಾಕಿ ಹೇಳಿಕೆ ನೀಡಿದ ಮುಖ್ಯ ನ್ಯಾಯಮೂರ್ತಿ ಸಿಜೆ ರಿತುರಾಜ್ ಅವಸ್ತಿ, ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ. ಅವುಗಳಿಗೆ ಉತ್ತರವನ್ನೂ ನೀಡಿದ್ದೇವೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ನಿಗದಿಪಡಿಸುವುದು ಸೂಕ್ತವಾದ ನಿರ್ಬಂಧನೆ. ಸರ್ಕಾರದ ಆದೇಶ ಕಾನೂನುಬದ್ದವಾಗಿದೆ ಎಂದು ಹೇಳಿದ್ದಾರೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವರ ಪೂರ್ಣ ಪೀಠ ತೀರ್ಮಾನ ಕೈಗೊಂಡಿದ್ದು, ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಅಂತ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ: ಹೈಕೋರ್ಟ್
Published On - 11:19 am, Tue, 15 March 22