‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆ ಸಂಬಂಧ ವಿಧಾನ ಪರಿಷತ್ನಲ್ಲಿ ಗದ್ದಲ; ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಏಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್
Karnataka Legislative Council | The Kashmir Files: ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಶಾಸಕರನ್ನು ಹಾಗೂ ಸಚಿವರನ್ನು ಆಹ್ವಾನಿಸಿ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ ಹೊರಡಿಸಿದ್ದಾರೆ. ಈ ವೇಳೆ ಸಿನಿಮಾ ವೀಕ್ಷಣೆ ವಿಚಾರವನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿರುವ ಕಾಂಗ್ರೆಸ್ ನಾಯಕರು, ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ವೀಕ್ಷಿಸಲು ರಾಜಕೀಯ ನಾಯಕರು ಉತ್ಸಾಹ ತೋರಿದ್ದಾರೆ. ಸರ್ಕಾರ ಇದರಲ್ಲಿ ಆಸಕ್ತಿ ವಹಿಸಿದ್ದು, ಚಿತ್ರ ವೀಕ್ಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತೆರಿಗೆ ರಹಿತ ಚಿತ್ರವೆಂದು ಗೋಷಿಸಿದ್ದರು. ಈ ನಡುವೆ ನಿನ್ನೆ (ಸೋಮವಾರ) ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಿತ್ರವನ್ನು ವೀಕ್ಷಿಸಲು ಇಂದು (ಮಂಗಳವಾರ) ಎಲ್ಲಾ ಸಚಿವರು ಹಾಗೂ ಶಾಸಕರಿಗೆ ವ್ಯವಸ್ಥೆ ಮಾಡಿರುವುದಾಗಿ ಘೋಷಿಸಿದ್ದರು. ವಿಧಾನಸಭೆ ಸಚಿವಾಲಯದಿಂದ ಈ ಘೋಷಣೆ ಮಾಡಲಾಗಿದೆ. ಇಂದು ವಿಧಾನ ಪರಿಷತ್ನಲ್ಲಿ ಇದೇ ಘೋಷಣೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಮಾಡಿದ್ದು, ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಶಾಸಕರನ್ನು ಹಾಗೂ ಸಚಿವರನ್ನು ಆಹ್ವಾನಿಸಿ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ ಹೊರಡಿಸಿದ್ದಾರೆ. ಈ ವೇಳೆ ಸಿನಿಮಾ ವೀಕ್ಷಣೆ ವಿಚಾರವನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿರುವ ಕಾಂಗ್ರೆಸ್ ನಾಯಕರು, ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಪ್ರಶ್ನಿಸಿದ್ದಾರೆ. ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದ್ದು, ಪರಿಷತ್ ಬಾವಿಗಿಳಿದು ಪ್ರತಿಭಟಿಸಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಏನೇನಾಯ್ತು?
ಬಸವರಾಜ ಹೊರಟ್ಟಿಯವರು ಸಿನಿಮಾ ವೀಕ್ಷಣೆಗೆ ಪ್ರಕಟಣೆ ಹೊರಡಿಸಿದ ನಂತರ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆ ವಿಚಾರ ವಾಪಸ್ ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಫರ್ಜಾನಾ ’ಮತ್ತು ‘ವಾಟರ್’ ಅಂತ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದು ಹೇಳಿದ್ದಾರೆ. ‘‘ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳೋ ಹಾಗಿಲ್ಲ. ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವೂ ಹಾಗಾದ್ರೆ ಅದನ್ನು ನೋಡಬೇಕಾ? ಸರ್ಕಾರ ಪಿಚ್ಚರ್ ತೋರಿಸೋದಕ್ಕೆ ಇದೆಯಾ? ಸಭಾಪತಿ ನಿಷ್ಪಕ್ಷಪಾತಿ ಆಗಿರಬೇಕು. ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ?’’ ಎಂದು ಹರಿಪ್ರಸಾದ್ ಖಾರವಾಗಿ ನುಡಿದಿದ್ದಾರೆ.
ಸಲೀಂ ಅಹ್ಮದ್ ಮಾತನಾಡಿ, ‘‘ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸುವುದಕ್ಕೆ ಹೊರಟಿದ್ದೀರಾ? ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕ?’’ ಎಂದು ಪ್ರಶ್ನಿಸಿದ್ದಾರೆ. ‘‘ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ದವರು ನೋಡಿ’’ ಎಂದು ಸೋಮಶೇಖರ್ ನುಡಿದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ಗದ್ದಲ ಏರ್ಪಟ್ಟಿದೆ. ನಂತರ ಕಾಂಗ್ರೆಸ್ ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಪಟ್ಟು ಹಿಡಿದಿದ್ದು, ಪರಿಷತ್ ಬಾವಿಗಿಳಿದು ಧರಣಿ ನಡೆಸಿದೆ. ನಿಮ್ಮ ಆರ್ಭಟ ನಡೆಯೋದಿಲ್ಲ ಎಂದು ಬಿಜೆಪಿ ಸದಸ್ಯರು ಗದ್ದಲ ಮಾಡಿದ್ದಾರೆ.
ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.
ಇದನ್ನೂ ಓದಿ:
The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ತೆರಳುವುದಿಲ್ಲ ಎಂದ ಸಿದ್ದರಾಮಯ್ಯ; ಕಾರಣವೇನು?
Published On - 11:41 am, Tue, 15 March 22