The Kashmir Files: 8 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದಿರುವ ‘ದಿ ಕಾಶ್ಮೀರ್ ಫೈಲ್ಸ್’ ಕಲೆಕ್ಷನ್ ಎಷ್ಟು ಗೊತ್ತಾ? ಇಲ್ಲಿದೆ ಪೂರ್ಣ ವಿವರ
The Kashmir Files Box Office Collection: ‘ದಿ ಕಾಶ್ಮೀರ್ ಫೈಲ್ಸ್’ಗೆ ಇದುವರೆಗೆ 8 ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸಿದ್ದು, ಜನರು ಚಿತ್ರ ವೀಕ್ಷಿಸಲು ಮುಗಿಬೀಳುತ್ತಿದ್ದಾರೆ. ಚಿತ್ರವು ಇದುವರೆಗೆ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು? ಈ ಕುರಿತ ವಿವರ ಇಲ್ಲಿದೆ.
ಮಾರ್ಚ್ 11ರಂದು ತೆರೆ ಕಂಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದೊಡ್ಡ ಮಟ್ಟದ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ನಡುವೆ ಪ್ರಧಾನಿ ಮೋದಿ ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬಹಳಷ್ಟು ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿವೆ. ಇದು ಚಿತ್ರದ ಕಲೆಕ್ಷನ್ಗೆ ದೊಡ್ಡ ಪ್ಲಸ್ ಆಗಿದೆ. ‘ದಿ ಕಾಶ್ಮೀರ್ ಫೈಲ್ಸ್’ಗೆ ಮೊದಲ ಬಾರಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದು ಹರ್ಯಾಣ. ನಂತರದಲ್ಲಿ ಗುಜರಾತ್, ಮಧ್ಯಪ್ರದೇಶಗಳೂ ವಿನಾಯಿತಿ ಘೋಷಿಸಿದವು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರ ವೀಕ್ಷಿಸಿ ನಂತರ ಅದರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ಅಲ್ಲದೇ, ಇಂದು (ಮಂಗಳವಾರ) ರಾಜ್ಯದ ಶಾಸಕರು ಹಾಗೂ ಸಚಿವರಿಗೆ ಚಿತ್ರ ಪ್ರದರ್ಶನವನ್ನೂ ವಿಧಾನಸಭಾ ಸಚಿವಾಲಯ ಏರ್ಪಡಿಸಿದೆ. ತೆರಿಗೆ ವಿನಾಯಿತಿ ಘೋಷಿಸಿದ ರಾಜ್ಯಗಳಿಗೆ ಗೋವಾ, ತ್ರಿಪುರಾ, ಉತ್ತರಾಖಂಡ್ ಕೂಡ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಯುಪಿಯಲ್ಲಿ ಟ್ಯಾಕ್ಸ್ ಫ್ರೀ ಎಂದು ಘೋಷಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸಾಫೀಸ್ ಗಳಿಕೆ ಎಷ್ಟು?
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರಕ್ಕೆ ಮೆಚ್ಚುಗೆಯ ಜತೆಜತೆಗೆ ಕಲೆಕ್ಷನ್ನಲ್ಲೂ ಏರಿಕೆಯಾಗುತ್ತಿದೆ. ಜನರು ಸಾಲುಸಾಲಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋಸ್ ಮಾಹಿತಿ ನೀಡಿದ್ದು, ವಿಶ್ವಾದ್ಯಂತ ‘ದಿ ಕಾಶ್ಮೀರ್ ಫೈಲ್ಸ್’ ಗಳಿಸಿರುವ ಲೆಕ್ಕವನ್ನು ಟ್ವೀಟ್ ಮಾಡಿದೆ.
ಮೊದಲ ದಿನ ವಿಶ್ವಾದ್ಯಂತ ₹ 4.25 ಕೋಟಿ ಗಳಿಸಿರುವುದರ ಮೂಲಕ ‘ದಿ ಕಾಶ್ಮೀರ್ ಫೈಲ್ಸ್’ ಗಲ್ಲಾಪೆಟ್ಟಿಗೆ ಲೆಕ್ಕಾಚಾರ ಆರಂಭಿಸಿತ್ತು. ಚಿತ್ರಕ್ಕೆ ಪ್ರತಿಕ್ರಿಯೆ ಉತ್ತಮವಾಗಿದ್ದ ಕಾರಣ ವೀಕೆಂಡ್ನಲ್ಲಿ ಸ್ಕ್ರೀನ್ಗಳ ಸಂಖ್ಯೆ ಏರಿದ್ದಲ್ಲದೇ ಗಳಿಕೆಯೂ ಹೆಚ್ಚಾಯಿತು. ಇದರ ಪರಿಣಾಮ ಶನಿವಾರ 10.10 ಕೋಟಿ ರೂ ಹಾಗೂ ಭಾನುವಾರ 17.25 ಕೋಟಿ ರೂಗಳನ್ನು ಚಿತ್ರವು ಗಳಿಸಿತು.
ಸಾಮಾನ್ಯವಾಗಿ ಎಲ್ಲಾ ಚಿತ್ರಗಳ ಕಲೆಕ್ಷನ್ ವಾರಾಂತ್ಯದಲ್ಲಿ ಅಧಿಕವಾಗಿರುತ್ತದೆ. ಸೋಮವಾರದಿಂದ ಇಳಿಕೆಯಾಗುತ್ತದೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಸೋಮವಾರದಂದು ಕೂಡ ಅತ್ಯುತ್ತಮವಾಗಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ ಅಂದರೆ ಸೋಮವಾರ ಸುಮಾರು 16.25 ಕೋಟಿ ರೂಗಳನ್ನು ಚಿತ್ರ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 47.85 ಕೋಟಿ ರೂ ದಾಟಿದೆ. ದೇಶದ ಮೂಲೆಮೂಲೆಗೆ ಚಿತ್ರ ತಲುಪುತ್ತಿರುವ ಕಾರಣ, ಮುಂದಿನ ದಿನಗಳಲ್ಲಿ ಬಾಕ್ಸಾಫೀಸ್ ಗಳಿಕೆ ಮತ್ತಷ್ಟು ಏರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಬಾಕ್ಸಾಫೀಸ್ ಗಳಿಕೆ ಬಗ್ಗೆ ಜೀ ಸ್ಟುಡಿಯೋಸ್ ಹಂಚಿಕೊಂಡ ಮಾಹಿತಿ:
#TheKashmirFiles is holding onto millions of minds and breaking records! The movie is in cinemas now, book your tickets.https://t.co/LHqmDwy7qGhttps://t.co/6cXZEjjrXk@mithunda_off @AnupamPKher @DarshanKumaar #ChinmayMandlekar #PallaviJoshi @vivekagnihotri @ImPuneetIssar pic.twitter.com/DKXCmzXi3b
— Zee Studios (@ZeeStudios_) March 15, 2022
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಕುರಿತ ಘಟನೆಗಳನ್ನು ಇಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮೊದಲಾದವರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು