ಹುಬ್ಬಳ್ಳಿ, ಆಗಸ್ಟ್ 19: ಹಣ ಕೊಟ್ಟರೆ ಮಾತ್ರ ಶವವನ್ನು (dead body) ಹಸ್ತಾಂತರ ಮಾಡದಿರುವಂತಹ ಅಮಾನವೀಯ ಘಟನೆಯೊಂದು ನಗರದ ಸುಚಿರಾಯು ಆಸ್ಪತ್ರೆಯಲ್ಲಿ (Suchirayu Hospital) ನಡೆದಿದೆ. ಹೆಣದ ಮೇಲೆ ವ್ಯವಹಾರ ಮಾಡುತ್ತಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭಜರಂಗದಳ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಮುಂಬಾಗ ಕುಳಿತು ಪ್ರತಿಭಟಿಸಿದರು.
ಕಳೆದ 10 ದಿನಗಳ ಹಿಂದೆ ಗ್ರಾಮದ ಹನುಮಂತ ಎಂಬುವರಿಗೆ ಅನಾರೋಗ್ಯದ ಹಿನ್ನೆಲೆ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹನುಮಂತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಈಗಾಗಲೇ ಕುಟುಂಬದವರು 1.30 ಲಕ್ಷ ರೂ. ಬಿಲ್ ಕಟ್ಟಿದ್ದಾರೆ. ಆದರೆ ಆಸ್ಪತ್ರೆಯವರು ಮಾತ್ರ 8 ಲಕ್ಷ ರೂ. ಹಣ ಕೊಡಬೇಕು ಅಂತಾ ಡಿಮ್ಯಾಂಡ್ ಮಾಡುತ್ತಿದ್ದಾರೆ ಅಂತಾ ಕುಟುಂಬದವರು ಆರೋಪ ಮಾಡಿದ್ದಾರೆ. ಮೃತ ವ್ಯಕ್ತಿ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೇವಡಿಕೊಪ್ಪ ಗ್ರಾಮದವರು. ರೈತಾಪಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಪೊಲೀಸರ ಎದುರೇ ಬಸ್ಗೆ ಕಲ್ಲು ತೂರಿದ್ದ ಮೂವರ ಬಂಧನ
ಕಡುಬಡತನದಲ್ಲಿರುವ ಹನುಮಂತ ಬ್ಯಾಹಟ್ಟಿ ಕುಟುಂಬಕ್ಕೆ ಶವ ಹಸ್ತಾಂತರಕ್ಕೆ ಆಸ್ಪತ್ರೆ ಆಡಳಿತ ಮಂಡಳಿ 7.50 ಲಕ್ಷ ರೂ. ಕೇಳುತ್ತಿದ್ದಾರೆ. ಮೂರು ಲಕ್ಷ ರೂ. ಕೊಡಲು ಕುಟುಂಬಸ್ಥರು ಸಿದ್ದವಿದ್ಧು, ಈಗಾಗಲೇ 1.30 ಲಕ್ಷ ರೂ. ಕೊಟ್ಟಿದ್ದಾರೆ. ಹೀಗಾಗಿ ನ್ಯಾಯಕ್ಕಾಗಿ ಆಸ್ಪತ್ರೆ ಮುಂಭಾಗ ಸಂಘಟನೆ ಹಾಗೂ ಕುಟುಂಬಸ್ಥರು ಧರಣಿ ಕುಳಿತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರೌಡಿಶೀಟರ್ಗಳ ನಡುವೆ ಮಾರಾಮಾರಿ, ಪೊಲೀಸರ ಗುಂಡೇಟು
ಇನ್ನು ಸುಚಿರಾಯು ಆಸ್ಪತ್ರೆಗೆ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ್ ದಂಡಪ್ಪನವರ ಆಗಮಿಸಿದ್ದು, ಆಸ್ಪತ್ರೆ ಸಿಬ್ಬಂದಿಗೆ ತಿಳಿಹೇಳಿ ಶವ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದಾರೆ. ಮೂರು ಲಕ್ಷಕ್ಕೆ ಶವ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ.
ಒಟ್ಟಿನಲ್ಲಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದಾಗ ಮಾನವೀಯತೆ ದ್ರಷ್ಟಿಯಿಂದ ಕುಟುಂಬದವರಿಗೆ ಸಾಂತ್ವನ ಹೇಳಿ, ಇದ್ದಷ್ಟು ಬಿಲ್ ಕಟ್ಟಿಸಿಕೊಂಡು ಶವವನ್ನು ಕೊಟ್ಟು ಕಳಿಸೋದು ಬಿಟ್ಟು ನಾವು ಹೇಳಿದಷ್ಟು ಹಣವನ್ನು ಕೊಟ್ಟರೆ ಮಾತ್ರ ಶವ ಕೊಡುತ್ತೇವೆ ಎಂದ ಆಡಳಿತ ಮಂಡಳಿ ವಿರುದ್ಧ ಆರೋಗ್ಯ ಮಂತ್ರಿ ದಿನೇಶ ಗುಂಡೂರಾವ್ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.